ಬೆಂಗಳೂರು: ಅಪರೂಪದ “ಡೆಮೆಂಷಿಯಾ’ (ಬುದ್ಧಿಮಾಂದ್ಯತೆ) ಸಮಸ್ಯೆಗೆ ತುತ್ತಾಗಿ ತಮ್ಮ ನೆನಪು ಕಳೆದುಕೊಂಡವರನ್ನು ಈ ಸಮಾಜ ಮರೆಯಬಾರದು ಎಂದು ನಟ ಪ್ರಕಾಶ್‌ರಾಜ್ ಹೇಳಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ “ಡೆಮೆಂಷಿಯಾ-2018′ ಅಂತಾರಾಷ್ಟ್ರೀಯ ವಿಚಾರಸಂಕಿರಣ ಹಾಗೂ ಎಆರ್‌ಡಿಎಸ್‌ಐ ನ 22ನೇ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಡೆಮೆಂಷಿಯಾಗೆ ತುತ್ತಾದವರು ತಮ್ಮ ನೆನಪು ಕಳೆದುಕೊಂಡಿರಬಹುದು. ಆದರೆ, ಅವರನ್ನು ನಾವು ಮರೆಯಬಾರದು. ಅವರೊಂದಿಗೆ ನಾವು ನಿಲ್ಲಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು, ಗೌರವಿಸಬೇಕು. ಮುಖ್ಯವಾಗಿ ಡೆಮೆಂಷಿಯಾ ಕಾಯಿಲೆಯಿಂದ ಬಳಲುತ್ತಿರುವವರನ್ನು ನೋಡುವ ಸಮಾಜದ ಧೋರಣೆ ಬದಲಾಗಬೇಕು ಎಂದು ತಿಳಿಸಿದರು.
ನೆನಪಿನ ಶಕ್ತಿ ಕಳೆದುಕೊಂಡು ಒಂದು ರೀತಿಯ ಬುದ್ಧಿಮಾಂದ್ಯತೆಗೆ ತುತ್ತಾದ ಡೆಮೆಂಷಿಯಾ ಪೀಡಿತರ ವೇದನೆ ಅರ್ಥ ಮಾಡಿಕೊಂಡರೆ ವಾಸ್ತವ ನಮಗೆ ಮನವರಿಕೆಯಾಗುತ್ತದೆ. ಅವರು ಮರೆತು ಹೋದ ವಿಷಯಗಳನ್ನು ಪುನಃ ನೆನಪಿಸುವ ಕೆಲಸ ಈ ಸಮಾಜ ಮಾಡಬೇಕು. ಈ ಬಗ್ಗೆ ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಎಆರ್‌ಡಿಎಸ್‌ಐ ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಡೆಮೆಂಷಿಯಾ ಕಾಯಿಲೆಗೆ ತುತ್ತಾಗಿ ತಮ್ಮ ಗುರು ಬಾಲಚಂದರ್ ಹಾಗೂ ತಮ್ಮ ತಾಯಿ ಪಟ್ಟ ಕಷ್ಟವನ್ನು ಪ್ರಕಾಶ್ ರಾಜ್ ವಿವರಿಸಿದರು. ಬಾಲಚಂದರ್ ಅವರಿಗೆ ಮರೆವು ಕಾಯಿಲೆ ಇದೇ ಎಂದು ಗೊತ್ತಿದ್ದೂ ಅವರಿಗಾಗದವರು ಅವರನ್ನು ವೇದಿಕೆ ಕಾರ್ಯಕ್ರಮಗಳಿಗೆ ಬೇಕಂತಲೇ ಆಹ್ವಾನಿಸಿ ಹೀಯಾಳಿಸಿದ್ದನ್ನು ನಾನು ಕಂಡಿದ್ದೇನೆ.
ಅದೇ ರೀತಿ ನನ್ನ ತಾಯಿ ಸ್ವಂತ ಮಗಳನ್ನೇ “ನೀನು ಯಾರು’ ಎಂದು ಕೇಳಿದ್ದು ನನ್ನನ್ನು ಈಗಲೂ ಕಾಡುತ್ತದೆ. ಬಾಲ್ಯದಲ್ಲಿ ನಮ್ಮ ಊರಿನ ಶ್ರೀಮಂತ ವ್ಯಕ್ತಿಯೊಬ್ಬರು ಡೆಮೆಂಷಿಯಾ ಕಾಯಿಲೆಗೆ ತುತ್ತಾಗಿ ಎಲ್ಲವೂ ಇದ್ದು, ಏನೂ ಇಲ್ಲದ ರೀತಿಯಲ್ಲಿ ಬದುಕಿದ್ದನ್ನೂ ಕಂಡಿದ್ದೇನೆ. ಅವರ ಈ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಅನೇಕರು ಅವರ ಆಸ್ತಿ ಲಪಟಾಯಿಸಿದರು. ಕೊನೆಗೆ ತನ್ನ ಆಸ್ತಿ ಲಪಟಾಯಿಸಿದವರ ಬಳಿಯೇ ಅವರು ಕೆಲಸ ಮಾಡಿದ್ದನ್ನು ನಾನು ನೋಡಿದ್ದೇನೆ ಎಂದರು.