ಅರಸೀಕೆರೆ: ಪ್ರತ್ಯೇಕ ಲಿಂಗಾಯತ ಧರ್ಮ ನನ್ನ ಅಸ್ಮಿತೆ ಎನ್ನುವ ಮೂಲಕ ಗೃಹ ಸಚಿವ ಎಂ.ಬಿ. ಪಾಟೀಲ್ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಮತ್ತೂಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇನಹಳ್ಳಿ ಶಿವಶಂಕರ ಸ್ವಾಮಿ ನಿವಾಸದಲ್ಲಿ ತಾಲೂಕಿನ ಲಿಂಗಾಯತ ಸಮಾಜದ ಮುಖಂಡರಿಂದ ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಪ್ರತ್ಯೇಕ ಲಿಂಗಾಯತ ಧರ್ಮ ನನ್ನ ಅಸ್ಮಿತೆ ಎನ್ನುವ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ, ಈ ವಿಚಾರ ಪ್ರಸ್ತಾಪಿಸಲು ಜಲಸಂಪನ್ಮೂಲ ಸಚಿವರು ಯಾರು ಎಂಬುದೇ ತಿಳಿಯುತ್ತಿಲ್ಲ. ತನ್ನ ಮನೆ ಸರಿಪಡಿಸಿಕೊಳ್ಳಲಾಗ
ದವರು ಮತ್ತೂಂದು ಧರ್ಮದ ಬಗ್ಗೆ ಮಾತ ನಾಡುತ್ತಿದ್ದಾರೆ. ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಇವರು ಕಾಂಗ್ರೆಸ್‌ನಿಂದ ಎಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕೆಂದರು.
ಯಾರಿಗೂ ಒಳ್ಳೇದಲ್ಲ: ವಾಸ್ತವ ಸಂಗತಿ ಮರೆ ಮಾಚಲು ಪದೇ ಪದೇ ವೀರಶೈವ ಲಿಂಗಾಯತ ಧರ್ಮದ ವಿಚಾರದಲ್ಲಿ ಕ್ಷಮಾಪಣೆ ಕೇಳುವುದು ಸರಿಯಲ್ಲ. ಒಕ್ಕಲಿಗ ಸಮುದಾಯದ ವಿಚಾರ ದಲ್ಲಿ ತಾನು ಪ್ರವೇಶಿಸಬಾರದು, ಹಾಗೆಯೇ
ಜಲಸಂಪನ್ಮೂಲ ಸಚಿವರೂ ವೀರಶೈವ ಲಿಂಗಾಯಿತ ಧರ್ಮದ ಬಗ್ಗೆ ಮೂಗು ತೂರಿಸುವ ಕೆಲಸ ಮಾಡಬಾರದು. ಇಂತಹ ಚಟ ಯಾರಿಗೂ ಒಳ್ಳೆಯದಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್‌ರ ಕಾರ್ಯವೈಖರಿ ಕುರಿತು ನೇರ ತಿರುಗೇಟು ನೀಡಿದರು.
ಬದ್ಧ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ದೊಡ್ಡಮಟ್ಟದಲ್ಲಿ ಪ್ರಸ್ತಾಪವಾಗಿದ್ದು ನಿಜ. ತನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಆಕಸ್ಮಿಕವಾಗಿಯಾದರೂ ಈ ವಿಚಾರ ಪ್ರಸ್ತಾಪಿಸಿ ಮತಯಾಚನೆ ಮಾಡಿಲ್ಲ. ನಮ್ಮ ಸಮಸ್ಯೆ ಪರಿಹಾರಕ್ಕೆ ಮಠಾಧೀಶರು ಒಂದೆಡೆ ಸೇರಿ ವಿವಾದ ಕೊನೆಗಾಣಿಸಲು ಪ್ರಯತ್ನ ನಡೆಸುತ್ತಿದ್ದು ಮುಂದೆ ಎಲ್ಲವೂ ಸರಿಹೋಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭರವಸೆ: ಹಳೇ ಮೈಸೂರು ಪ್ರಾಂತ್ಯದಲ್ಲಿ 25 ಲಕ್ಷಕ್ಕೂ ಹೆಚ್ಚಿನ ವೀರಶೈವ, ಲಿಂಗಾಯತ ಮತದಾರರಿದ್ದು ಕಾಂಗ್ರೆಸ್‌ನಿಂದ ಯಾವೊಬ್ಬ ಮುಖಂಡರಿಗೂ ಸೂಕ್ತ ಸ್ಥಾನಮಾನ ದೊರೆತಿಲ್ಲ ಎನ್ನುವ ದೂರು ಬಂದಿವೆ. ಚುನಾವಣೆ ಮುಗಿದ ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ಸ್ಥಾನಮಾನ ಕೊಡಿಸುವ ಭರವಸೆ ನೀಡಿದರು.
ಮೇ 23ರ ನಂತರ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎನ್ನುವ ಬಿಜೆಪಿ ಮುಖಂಡರ ವಾದ ಅರ್ಥಹೀನ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಲಿದ್ದು ,ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಮೈತ್ರಿ ಕೂಟಕ್ಕೆ ಬರಲಿವೆ ಎಂದರು. ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಜಿ.ಬಿ.ಶಶಿಧರ್, ಹುಲ್ಲೇಕೆರೆ ಕುಮಾರ್ ಇದ್ದರು.
ಜಿಲ್ಲಾ ಉಪಾಧ್ಯಕ್ಷರಾದ ಎಂ.ಜಿ. ಶಿವಶಂಕರಸ್ವಾಮಿ, ಗಂಜಿಗೆರೆ ಚಂದ್ರ ಶೇಖರ್, ದಂದೂರು ರವಿ, ಬಿ.ಜಿ.ನಿರಂಜನ್, ಯುವ ಕಾಂಗ್ರೆಸ್ ಅಧ್ಯಕ್ಷ ಕೋಡಿಹಳ್ಳಿ ರಘು, ವಕೀಲ ಮೋಹನ್, ಸಂತೋಷ್, ಜಯಣ್ಣ ಸೇರಿ ಅನೇಕ ವೀರಶೈವ ಲಿಂಗಾಯತ ಮುಖಂಡರು ಗೃಹ ಸಚಿವರಿಗೆ ಮೈಸೂರು ಪೇಟ ತೊಡಿಸಿ ಗೌರವಿಸಿದರು.