ದಂತಕ್ಷಯ ಅಥವಾ ಹಲ್ಲು ಹುಳುಕಾಗುವುದು ಬಾಯಿಯ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಅಧಿಕ ಸಕ್ಕರೆ ಸೇವಿಸಿದರೆ ನಿಸ್ಸಂದೇಹವಾಗಿ ಹಲ್ಲಿನಲ್ಲಿ ಹುಳುಕಾಗುತ್ತದೆ. ಇದಲ್ಲದೆ ಹಲವಾರು ಕಾರಣಗಳಿಂದ ದಂತಕ್ಷಯ ಉಂಟಾಗಬಹುದು.
ನಮ್ಮ ಹಲ್ಲುಗಳಿಂದ ಸರಿಯಾಗಿ ಸ್ವತ್ಛಗೊಳಿಸದಿದ್ದಾಗ, ಬ್ಯಾಕ್ಟಿರಿಯಾಗಳು ತ್ವರಿತವಾಗಿ ಹಲ್ಲಿನ ಮೇಲೆ ಪ್ಲಾಕ್ ಅನ್ನು ರೂಪಿಸುತ್ತದೆ. ಮೊದಲಿನ ಹಂತದಲ್ಲಿ ಹೊರಗಿನ ದಂತ ಕವಚವಾದ ಎನಾಮಲ್ ನ ಮೇಲೆ ಪರಿಣಾಮವಾಗಬಹುದು. ಬ್ಯಾಕ್ಟೀರಿಯಾ ಅನಂತರ ಮುಂದಿನ ಪದರವನ್ನು ತಲುಪಬಹುದು. ಈ ಪದರವು ದಂತ ಕವಚಕ್ಕಿಂತ ಮೃದುವಾಗಿರುತ್ತದೆ. ಇದನ್ನು ಡೆಂಟಿನ್ ಎಂದು ಕರೆಯಲಾಗುತ್ತದೆ.
ಈ ಹಂತದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ, ತೀವ್ರವಾದ ಹಲ್ಲುನೋವು, ಸೋಂಕು ಮತ್ತು ಹಲ್ಲಿನ ನಷ್ಟಕ್ಕೆ ಕಾರಣವಾಗಬಹುದು.
ಹಲ್ಲುನೋವು, ತಂಪು ಮತ್ತು ಸಿಹಿ ಸೇವಿಸುವಾಗ ಹಲ್ಲು ಜುಮ್ ಎನಿಸುವುದು, ಹಲ್ಲಿನ ಮೇಲೆ ಕಪ್ಪು ಕಲೆಗಳು ಇವೆಲ್ಲಾ ದಂತಕ್ಷಯದ ಲಕ್ಷಣಗಳು. ಹೆಚ್ಚಿನ ಸಂದರ್ಭಗಳಲ್ಲಿ ಫಿಲ್ಲಿಂಗ್ ಮಾಡುವುದರ ಮೂಲಕ ದಂತಕ್ಷಯಕ್ಕೆ ಚಿಕಿತ್ಸೆ ಮಾಡಬಹುದು. ದಂತಕ್ಷಯವು ಬಹಳ ಆಳವಾಗಿದ್ದರೆ ಅಥವಾ ದೊಡ್ಡ ಕ್ಯಾವಿಟಿ ಆಗಿದ್ದಲ್ಲಿ ರೂಟ್‌ಕೆನಾಲ್ ಥೆರಪಿ ಅವಶ್ಯ.
ಪ್ರತಿದಿನ ಹಲ್ಲುಜ್ಜುವುದು ಮತ್ತು ಬಾಯಿಯ ಆರೋಗ್ಯ ಕಾಪಾಡುವುದರಿಂದ ದಂತಕ್ಷಯವನ್ನು ತಡೆಯಬಹುದು. ಫ್ಲೋರಿಡೇಟೆಡ್ ಟೂತ್‌ಪೇಸ್ಟ್ ಬಳಸುವುದು ಒಳ್ಳೆಯದು. ಮೃದುವಾದ ಬ್ರಿಸಲ್ ಬ್ರೆಶ್ ಉಪಯೋಗಿಸುವುದು ಉತ್ತಮ. ಎಲ್ಲ ಹಲ್ಲಿನ ಕಡೆಗಳಲ್ಲಿ ನಿಧಾನವಾಗಿ ಸಣ್ಣ ವೃತ್ತಾಕಾರವಾಗಿ ಮತ್ತು ಹಿಂದಕ್ಕೆ ಹಾಗೂ ಮುಂದಕ್ಕೆ ಬ್ರೆಶ್ ತಲುಪಲು ಸಾಧ್ಯವಾಗದ ಕಡೆಗಳಲ್ಲಿ, ಫ್ಲೋಸ್ ಉಪಯೋಗಿಸಬಹುದು. ಬಾಯಿಯ ಉತ್ತಮ ಆರೋಗ್ಯಕ್ಕಾಗಿ ನಿಯಮಿತವಾಗಿ ಹಲ್ಲಿನ ತಪಾಸಣೆ ಅಗತ್ಯ.
· ಹಲ್ಲುಗಳ ರೂಪ ಮತ್ತು ಜೋಡಣೆ ಸರಿ ಇಲ್ಲದಿದ್ದರೆ
· ಲಾಲಾರಸದ ಹರಿವು ಕಡಿಮೆಯಾದಾಗ
· ನಾವು ಸೇವಿಸುವ ಆಹಾರ
· ನಮ್ಮ ಬಾಯಿಯ ಆರೋಗ್ಯ
· ಆನುವಂಶಿಕ
· ಸರಿಯಾದ ವಿಧಾನದಲ್ಲಿ ಬ್ರಷ್ ಮಾಡದೇ ಇರುವುದು
· ಹಲ್ಲುಗಳ ನಡುವಿನ ಅಂತರ
· ಫ್ಲೋರೈಡ್ ಇಲ್ಲದ ಟೂತ್‌ಪೇಸ್ಟ್ ಬಳಕೆ ಮಾಡಿದರೆ ಹಲ್ಲು ಹುಳುಕಾಗುವ ಸಾಧ್ಯತೆ ಹೆಚ್ಚು
- ಡಾ| ರೇಷ್ಮಾ ಭಟ್