ಹಳಿಯಾಳ: ಅಧಿಕಾರಿಗಳು ಇನ್ನು ಮುಂದೆ ಪ್ರತಿದಿನ ಕೋವಿಡ್-19 ಜಪಿಸುತ್ತಾ ಇರಬೇಡಿ. ಕೋವಿಡ್ ನಮ್ಮ ಜೊತೆಯೇ ಇರುತ್ತೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಕೋವಿಡ್ ಹೆಸರಲ್ಲಿ ಅಭಿವೃದ್ಧಿ ಮರೀಚಿಕೆ ಆಗುವುದು ಸಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾಮಾರಿ ಬೇಗನೆ ಹೋಗುವುದಿಲ್ಲ. ಹೀಗಾಗಿ ಕೋವಿಡ್ -19 ನಿರ್ವಹಿಸಲು ಪ್ರತ್ಯೇಕ ಟೀಂ ರಚಿಸಿಲು ಸರ್ಕಾರ ಯೋಚಿಸಿದ್ದು, ಉಳಿದಂತೆ ಅಧಿಕಾರಿಗಳು ಇದರೊಂದಿಗೆ ತಮ್ಮ ಕರ್ತವ್ಯದ ಬಗ್ಗೆ ಗಮನ ಹರಿಸಬೇಕು. ಅಭಿವೃದ್ಧಿ ಬಗ್ಗೆ ಯೋಚಿಸಬೇಕು ಎಂದರು.
ಜಿಲ್ಲೆಯಲ್ಲಿ 19 ರೀತಿಯ ರಕ್ತ ತಪಾಸಣೆ ವರದಿ ನೀಡುವ ಲ್ಯಾಬ್ ಗೆ ಪರವಾನಗಿ ದೊರೆತಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ನೀಡುವ ಬಗ್ಗೆ ಹಾಗೂ ಕೋವಿಡ್‌ಗಾಗಿ ಸರ್ವಸನ್ನದ್ಧ ಮಾಡಲು ಎಲ್ಲ ಪ್ರಯತ್ನ ನಡೆದಿದೆ ಎಂದರು.
ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಪ್ರಕೃತಿ ವಿಕೋಪದಿಂದ ತೋಟಗಾರಿಕೆ ಬೆಳೆಗಳಾದ ಪ್ರಮುಖವಾಗಿ ಮಾವು ಬೆಳೆ ಹಾನಿ ಅನುಭವಿಸಿದರಿಗೂ ಆರ್ಥಿಕ ಸಹಾಯ ನೀಡಬೇಕು ಎಂದ ಅವರು, ಕಾರ್ಮಿಕರ ಸಮಸ್ಯೆ, ನಷ್ಟ ಅನುಭವಿಸುತ್ತಿರುವ ಹಲವಾರು ವರ್ಗದ ಜನರ ಕುರಿತು ಸವಿಸ್ತಾರವಾಗಿ ಸಚಿವರಿಗೆ ಸಲಹೆ ನೀಡಿದರು. ವಿಪ ಸದಸ್ಯ ಎಸ್.ಎಲ್. ಘೋಕ್ಲೃಕರ್ ಮಾತನಾಡಿ, ಉಸುಕಿನ ಸಮಸ್ಯೆ ಬಗೆಹರಿಸಬೇಕು. ರೈತರ ಸಾಲಮನ್ನಾದ ಹಣ ಶೀಘ್ರದಲ್ಲೇ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಎಸಿ ಪ್ರಿಯಾಂಗ, ತಾಲೂಕಾಡಳಿತ ಅಧಿಕಾರಿಗಳು, ಪುರಸಭೆ, ತಾಪಂ, ಜಿಪಂ ಸದಸ್ಯರು ಇದ್ದರು.