ಕುಮಟಾ: ಪ್ರಾಣ ಬಿಟ್ಟೇವು ಹೊರತು ಒಳಚರಂಡಿ ಘಟಕದ ಕಾಮಗಾರಿಯನ್ನು ನಡೆಸಲು ನಾವು ಯಾವ ಕಾರಣಕ್ಕೂ ಬಿಡುವುದಿಲ್ಲ. ಅಧಿಕಾರಿಗಳು ಒಂದು ವೇಳೆ ಕಾಮಗಾರಿ ನಡೆಸುತ್ತೇವೆ ಎಂದು ಮುಂದಾದರೆ ಸ್ಥಳೀಯರ ಸಮಾಧಿ ಮೇಲೆ ಘಟಕವನ್ನು ನಿರ್ಮಿಸಲಿ ಎಂದು ಬಗ್ಗೋಣದ ಮೂವತ್ತುಗುಂಡಿ ಭಾಗದ ಜನರು ಭಾನುವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ಗಣೇಶ ಭಟ್ಟ ಬಗ್ಗೋಣ ಮಾತನಾಡಿ, ಒಳಚರಂಡಿ ಮಲೀನ ನೀರಿನ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಮುಂದಾದ ಈ ಜಾಗದಲ್ಲಿ ಪರಿಶಿಷ್ಟ ಜನಾಂಗದ ಮನೆ ಹಾಗೂ ದೇವಾಲಯವಿದೆ. ವಿನಾಶಕಾರಿ ಯೋಜನೆಯನ್ನು ಅಧಿಕಾರಿಗಳು ಬಲವಂತವಾಗಿ ಈ ಭಾಗದ ಜನರ ಮೇಲೆ ಹೇರಲು ಹೋರಟಿದ್ದಾರೆ. 300 ಎಕರೆ ಫಲವತ್ತಾದ ಭತ್ತದ ಬೇಸಾಯ ಮಾಡುವ ಪ್ರದೇಶದಲ್ಲಿ ಮಲೀನ ನೀರು ಸಂಗ್ರಹ ಘಟಕವನ್ನು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ಕುಡಿಯುವ ನೀರಿನ ಟ್ಯಾಂಕ್ ಕಟ್ಟಿಕೊಡುವುದಾಗಿ ಇಲ್ಲಿ ವಾಸಿಸುವ ಹರಿಜನ ಕುಟುಂಬಗಳಿಗೆ ಭರವಸೆ ನೀಡಿ, ಮೋಸದಿಂದ ಇವರ ಖಾಸಗಿ ಭೂಮಿಯನ್ನು ಸ್ವಾಧೀನ ಪಡೆಸಿಕೊಂಡು ಮುಗ್ದ ಜನರಿಗೆ ಮೋಸ ಮಾಡಿದ್ದಾರೆ ಎಂದು ಅಧಿಕಾರಿಗಳ ನಡೆಯನ್ನು ಕಟುವಾಗಿ ಟೀಕಿಸಿದರು.
ಹಿಂದೂ ಮುಕ್ರಿ ಸಮಾಜದ ಅಧ್ಯಕ್ಷ ತಿಮ್ಮಪ್ಪ ರಾಮ ಮುಕ್ರಿ, ಪ್ರಮುಖರಾದ ಗಣಪತಿ ಅಡಿಗುಂಡಿ, ತಿಮ್ಮು ಮುಕ್ರಿ, ಈಶ್ವರ ಮುಕ್ರಿ, ಸ್ಥಳೀಯರಾದ ಪ್ರಭಾಕರ ಹೆಗಡೆ, ವಿಶ್ವನಾಥ ಪಂಡಿತ್, ಜಿ.ಆರ್. ಉಗ್ರು, ನಾಗು ನಾರಾಯಣ ಮುಕ್ರಿ, ಲಲಿತಾ ಭಟ್, ಮಂಜುನಾಥ ಮುಕ್ರಿ, ಶ್ರೀಕಾಂತ ಪಂಡಿತ್, ವಿಷ್ಣು ಹೆಗಡೆ, ಗಜಾನನ ಭಟ್, ಲಕ್ಷಿ ್ಮೕ ಮುಕ್ರಿ, ಲತಾ ಮುಕ್ರಿ, ಗುಲಾಬಿ ಮುಕ್ರಿ ಹಾಗೂ ಬಗ್ಗೋಣ ಭಾಗದ ನೂರಾರು ಪ್ರತಿಭಟನಾಕಾರರು ಇದ್ದರು.
Advertisement
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಒಳಚರಂಡಿ ಘಟಕವನ್ನು ಮೂವತ್ತು ಗುಂಡಿಯಲ್ಲಿ ನಿರ್ಮಿಸಬಾರದು ಎಂದು ಸುತ್ತಮುತ್ತಲಿನ ಸಾರ್ವಜನಿಕರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಜನ ವಿರೋಧಿ ಮಲೀನ ನೀರು ಘಟಕ ನಿರ್ಮಾಣ ಯೋಜನೆಯ ವಿರುದ್ಧ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಾ ಭಾಗಿಯಾಗಿದೆ. ಅಲ್ಲದೇ ಹರಿಜನರು ಹೆಚ್ಚಾಗಿ ವಾಸವಾಗಿದ್ದ ಈ ಸ್ಥಳದಲ್ಲಿ ಘಟಕವನ್ನು ನಿರ್ಮಿಸುವುದನ್ನು ಕ.ರಾ.ವೇ ತೀವ್ರವಾಗಿ ಖಂಡಿಸುತ್ತದೆ. ಇಲ್ಲಿನ ತಾಲೂಕಾಡಳಿತ ಮುಗ್ದ ಜನರಿಗೆ ಮೋಸ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಘಟಕ ನಿರ್ಮಾಣದ ನೆಪದಲ್ಲಿ ಅಧಿಕಾರಿಗಳು ಬಡ ಜನರ ಶೋಷಣೆ ಮಾಡಲು ಹೊರಟಿದ್ದಾರೆ. ಆಡಳಿತ ವ್ಯವಸ್ಥೆ ತನ್ನ ಹಟಮಾರಿತನವನ್ನು ಕೈಬೀಡದಿದ್ದರೆ ಹಿಂದೂ ಮುಕ್ರಿ ಸಮಾಜದ ಈಡಿ ಜಿಲ್ಲೆಯ ಜನರನ್ನು ಸೇರಿಸಿ ಕ್ರಾಂತಿಕಾರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜನರು ರೋಗಕ್ಕೆ ತುತ್ತಾಗುವ ಭಯ ಯೋಜನೆಯಿಂದ ಮನೆ, ಆಸ್ತಿ ಕಳೆದುಕೊಳ್ಳಲಿರುವ ಪರಿಶಿಪ್ಟ ಜಾತಿಯ ಮಹಿಳೆಯರಾದ ಗಂಗು ಮುಕ್ರಿ, ಶಾಂತಿ ಮುಕ್ರಿ, ಸವಿತಾ ಮುಕ್ರಿ ಮಾತನಾಡಿ, ಘಟಕ ಸ್ಥಾಪನೆಯಿಂದ ಇಲ್ಲಿಯ ಪರಿಸರ ಕಲುಷಿತವಾಗಲಿದೆ. ಜನರು ರೋಗಕ್ಕೆ ತುತ್ತಾಗುವ ಭಯಕ್ಕೆ ಒಳಗಾಗಿದ್ದಾರೆ. ಎಲ್ಲರೂ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಅರ್ಧ, ಒಂದು ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡು ನಮ್ಮ ಪಾಡಿಗೆ ನಾವು ಜೀವನ ನಡೆಸುತ್ತಿದ್ದೇವೆ. ಹೊಟ್ಟೆಗೆ ಅನ್ನ ಇಲ್ಲದಿದ್ದರೂ ಶುದ್ಧ ಪರಿಸರದಲ್ಲಿ ಬದುಕನ್ನು ಕಟ್ಟಿಕೊಂಡಿದ್ದೇವೆ. ಇಂತಹ ಶುಭ್ರ ಪರಿಸರದಲ್ಲಿ ಈಡೀ ಪಟ್ಟಣದ ತ್ಯಾಜ್ಯ ಮತ್ತು ಮಲೀನ ನೀರನ್ನು ತಂದು ಸುರಿದು ಇಲ್ಲಿನ ಪರಿಸರ ಹಾಳುಮಾಡಲು ಹೊರಟಿರುವುದು ಎಷ್ಟು ಸಮಂಜಸ. ಇದು ಬಡ ಕಾರ್ಮಿಕರ ಮೇಲಿನ ದಬ್ಟಾಳಿಕೆಯಾಗಿದೆ. ಸೀಮೆಎಣ್ಣೆ ಮೈ ಮೇಲೆ ಸುರಿದು ಬೆಂಕಿ ಹಚ್ಚಿಕೊಂಡು ಜೀವ ಬೇಕಾದರೂ ಕೊಡುತ್ತೇವೆ ಹೊರತು ಒಳಚರಂಡಿ ಕಾಮಗಾರಿಯನ್ನು ನಡೆಸಲು ನಾವು ಬಿಡುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.