ಬೆಂಗಳೂರು: ‘ಬಿಜೆಪಿ ಏನು ಮಾಡಬೇಕು, ಯಾರು ಎಲ್ಲಿ ವಾಸ್ತವ್ಯ ಮಾಡಬೇಕು ಎನ್ನುವ ಕುರಿತು ಸಿದ್ದರಾಮಯ್ಯನ ಅಪ್ಪನ ಅಪ್ಪಣೆ ಪಡೆಯ ಬೇಕಾಗಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಗಾಂಧಿನಗರದ ಲಕ್ಷ್ಮಣಪುರಿ ಸ್ಲಂನ ಮುನಿರತ್ನಂ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಿ ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.
‘ನನಗೆ ಮತ್ತೂಬ್ಬರು ಏನು ಹೇಳುತ್ತಾರೆ ಎನ್ನುವ ಬಗ್ಗೆ ಚಿಂತೆ ನನಗೆ ಇಲ್ಲ. ಸಿದ್ದರಾಮಯ್ಯ ಅವರ ಯೋಗ್ಯತೆಗೆ ಸ್ಲಂ ಮುಖ ನೋಡಿದ್ದಾರಾ ?ತಿಂಡಿ ತಿಂದಿದ್ದಾರಾ? ಯಾರಿಗೆ ಯಾವುದನ್ನು ಮಾಡಲು ಸಾಧ್ಯವಾಗಿಲ್ಲ ಅದನ್ನು ನಾವು ಮಾಡುತ್ತಿದ್ದೇವೆ ಹೀಗಾಗಿ ಸಹಿಸಲಾಗದೆ ಟೀಕೆ ಮಾಡುತ್ತಿದ್ದಾರೆ.ಜನ ತೀರ್ಮಾನ ಮಾಡುತ್ತಾರೆ, ಯಾರು ಏನು ಮಾಡುತ್ತಾರೆ’ ಎಂದು ಕಿಡಿ ಕಾರಿದರು.
‘ಇವತ್ತು ಇಲ್ಲಿದ್ದೇನೆ ಮುಂದೆ ಸಂದರ್ಭ ಬಂದಾಗ ಸ್ಲಂ ವಾಸ್ತವ್ಯ ಮಾಡುವುದಾಗಿ ತಿಳಿಸಿದರು. ನನ್ನ ಸ್ಲಂ ವಾಸ್ತವ್ಯ ಎಂದರೆ ಸ್ಲಂಗಳು ಉಳಿಯಬೇಕು ಎನ್ನುವ ಉದ್ದೇಶವಲ್ಲ. ಎಲ್ಲಾ ಸ್ಲಂ ನಿವಾಸಿಗಳಿಗೆ ಸಂದೇಶವೇನೆಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎನ್ನುವುದು’ ಎಂದರು.
‘ಸ್ಥಳೀಯ ಶಾಸಕ, ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡುರಾವ್ ವಿರುದ್ಧವೂ ಕಿಡಿ ಕಾರಿದ ಯಡಿಯೂರಪ್ಪ ಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಕಿತ್ತು ಹಾಕಿತ್ತು ಅಂತಹವರ ಬಗ್ಗೆ ಮಾತನಾಡುವುದಿಲ್ಲ’ ಎಂದರು.
ಮುನಿರತ್ನಂ ಅವರ ಕುಟುಂಬಕ್ಕೆ ಬಿಎಸ್‌ವೈ ಸೀರೆ ಪಂಚೆ, ಶರ್ಟ್ ಪೀಸ್ ಉಡುಗೊರೆಯಾಗಿ ನೀಡಿದ್ದಾರೆ.
ರಾತ್ರಿ ಕಳೆದು ಬೆಳಗ್ಗೆ ಸ್ಲಂ ನಿವಾಸಿಗಳೊಂದಿಗೆ ಚರ್ಚೆಯನ್ನು ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಾಜಿ ಉಪಮುಖ್ಯಮಂತ್ರಿ,ಶಾಸಕ ಆರ್.ಆಶೋಕ್ ಅವರು ಉಪಸ್ಥಿತರಿದ್ದರು.
ಮನೆಗೆ ಹೊಸ ಟಚ್
ಬಿಎಸ್‌ವೈ ವಾಸ್ತವ್ಯದ ಹಿನ್ನಲೆಯಲ್ಲಿ ಮನೆಯಲ್ಲಿದ್ದ ಟಾಯ್ಲೆಟನ್ನು ಬದಲಾವಣೆ ಮಾಡಲಾಗಿತ್ತು. ಹೊಸ ಮಂಚ ಮತ್ತು ಕುರ್ಚಿಯನ್ನು ತರಲಾಗಿತ್ತು.