ಹೊಸದಿಲ್ಲಿ: ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವ ವಿಚಾರದಲ್ಲಿ “ಯುಟರ್ನ್’ ತೆಗೆದುಕೊಂಡಿರುವ ಕೇಂದ್ರ ಸರಕಾರ, ಕಡ್ಡಾಯ ಆದೇಶವನ್ನು ವಾಪಸ್ ಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
2016ರ ನ. 30ರಂದು ಸುಪ್ರೀಂ ಕೋರ್ಟ್ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಅನಂತರದಲ್ಲಿ ಕೇಂದ್ರ ಸರಕಾರ ಕೂಡ ಸುಪ್ರೀಂ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ, ವೈವಿಧ್ಯತೆಯುಳ್ಳ ಭಾರತದಂಥ ದೇಶದಲ್ಲಿ ರಾಷ್ಟ್ರಗೀತೆ ಜನರನ್ನು ಒಂದುಗೂಡಿಸುತ್ತದೆ ಎಂದಿತ್ತು.
ಆದರೆ, ಈಗ ತನ್ನ ವರಸೆ ಬದಲಿಸಿರುವ ಅದು, ಆರು ತಿಂಗಳ ಮಟ್ಟಿಗೆ ಹಿಂದಿನ ಆದೇಶ ವಾಪಸ್ ಪಡೆಯಿರಿ ಎಂದು ಸುಪ್ರೀಂ ಕೋರ್ಟ್‌ಗೆ 4 ಪುಟಗಳ ಅಫಿದವಿತ್ ಸಲ್ಲಿಕೆ ಮಾಡಿದೆ. ಜತೆಯಲ್ಲೇ ಅಂತರ ಸಚಿವಾಲಯದ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದ್ದು, ಇದು 6 ತಿಂಗಳಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡ ವರದಿ ನೀಡಲಿದೆ. ಈ ವರದಿ ಅನ್ವಯ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದೆ.
ಈ ಸಮಿತಿಯ ಶಿಫಾರಸಿನಂತೆ ಸರಕಾರವು ಅಗತ್ಯ ಅಧಿಸೂಚನೆ, ಸೂಚನೆ ಅಥವಾ ನಿಯಮಾವಳಿಗಳನ್ನು ರಚಿಸಲಿದ್ದು, ಇದಕ್ಕೆ ಆರು ತಿಂಗಳ ಕಾಲಾವಧಿ ನೀಡಿದ್ದೇವೆ ಎಂದು ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿರುವ ಈ ಅಫಿದವಿತ್‌ನಲ್ಲಿ ದಾಖಲಿಸಲಾಗಿದೆ.
ಕೇಂದ್ರಕ್ಕೆ ತರಾಟೆ: ಕಳೆದ ಅ. 23ರಂದು ಈ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ದೇಶಭಕ್ತಿ ವಿಚಾರದಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರತಿಯೊಬ್ಬರು ತಮ್ಮ ಭುಜದ ಮೇಲೆ ದೇಶಭಕ್ತಿಯ ಸಂಕೇತವನ್ನು ಹೊಂದಿರಬೇಕು. ಈ ಮೂಲಕ ದೇಶಭಕ್ತಿ ಪ್ರದರ್ಶಿಸಬೇಕು ಎಂದು ಹೇಳುವುದು ಸರಿಯಲ್ಲ. ಅಲ್ಲದೆ ಈ ವಿಚಾರದಲ್ಲಿ ಜನರ ದೇಶಭಕ್ತಿ ಪರೀಕ್ಷಿಸುವುದೂ ಸರಿಯಲ್ಲ. ಇಂಥ ನಿರ್ಧಾರಗಳು ಕೋರ್ಟ್ ಕಡೆಯಿಂದಲೇ ಬರಬೇಕು ಎಂದು ಏಕೆ ಬಯಸುತ್ತೀರಿ ಎಂದು ಹೇಳುವ ಮೂಲಕ ಹಿಂದಿನ ಆದೇಶ ವಾಪಸ್ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿತ್ತು. ಆಗ ಕೇಂದ್ರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವುದು ಸರಿ ಎಂದೇ ವಾದ ಮಾಡಿ, ಇದು ಏಕತೆ ಸಾರುತ್ತದೆ ಎಂದಿದ್ದರು.