Advertisement

ನಾಡಗೀತೆ ಮೊಟಕಾಗುವುದು ಬೇಡ

12:05 PM Dec 30, 2017 | |

ಬೆಂಗಳೂರು: ರಸಋಷಿ ಕುವೆಂಪು ವಿರಚಿತ ನಾಡಗೀತೆಗೆ ಕತ್ತರಿಹಾಕುವುದು ಸರಿಯಲ್ಲ. ಇದರಿಂದ ಕುವೆಂಪು ಅವರ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡಿದಂತಾಗುತ್ತದೆ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಕಳವಳ ವ್ಯಕ್ತಪಡಿಸಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಶುಕ್ರವಾರ ಮಲ್ಲತ್ತಹಳ್ಳಿ ಕಲಾಗ್ರಾಮದ ಸುವರ್ಣ ಸಮುಚ್ಚಯದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಸಾಹಿತ್ಯ-ಸಂವಾದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Advertisement

“ನಾಡಗೀತೆ ಉದ್ದವಾಗಿದೆ. ಅದನ್ನು ಮೊಟಕುಗೊಳಿಸಿ ಎಂಬ ಕೂಗು ಕೇಳಿಬರುತ್ತಿದೆ. ಆದರೆ ನಾಡಗೀತೆಗೆ ಕತ್ತರಿ ಹಾಕುವುವರಿಂದ ರಾಷ್ಟ್ರಕವಿ ಕುವೆಂಪು ಅವರ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಿದಂತಾಗುತ್ತದೆ. ನಾಡಗೀತೆಯನ್ನು ನಿಂತುಕೊಂಡೇ ಹಾಡಬೇಕು ಎಂದು ಯಾವ ಶಾಸನದಲ್ಲೂ ಬರೆದಿಲ್ಲ. ಆಯಾಸವಾದಾಗ ಕುಳಿತುಕೊಂಡೇ ಹೇಳಬಹುದು ಎಂದರು.

ಕುವೆಂಪು ಅವರು ಸಾಂಸ್ಕೃತಿಕ ಆಯಾಮದಲ್ಲಿ ಸುಕೃತಿಯ ರಚನೆ ಮಾಡಿದ್ದಾರೆ. ಕಾಲ, ದೇಶಕ್ಕೆ ಬದ್ಧವಾಗಿ ಅದನ್ನು ಮೀರಿ ಸಮಕಾಲೀನ, ಸರ್ವಕಾಲೀನ ಉತ್ತಮ ಕಾದಂಬರಿಗಳನ್ನು ನೀಡಿದ್ದಾರೆ. ಸುತ್ತಿಲಿನ ಪರಿಸರದ ಮೇಲೂ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ ಎಂದು ಚಂಪಾ ವಿವರಿಸಿದರು.

ನಾವೆಲ್ಲರೂ ನವ್ಯ ಕಾಲದ ಸಾಹಿತಿಗಳು. ಕುವೆಂಪು, ನವ್ಯ ಮತ್ತು ಬಂಡಾಯ ಕಾಲದ ಸಾಹಿತಿ. ನವ್ಯ ಸಾಹಿತಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ ಮತ್ತು ಸಾಹಿತ್ಯದ ಹೊಸ ಅನುಭವ ನೀಡಿದ್ದಾರೆ. ಕುವೆಂಪು ಬಗ್ಗೆ ಹೆಚ್ಚೇನು ಓದಿಕೊಂಡಿಲ್ಲ.

ಅವರ ಶ್ರೀ ರಾಮಾಯಣ ದರ್ಶನಂ ವಿಭಿನ್ನವಾದ ಕೃತಿ. ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಕ್ರಾಂತಿಕಾರಕ ಕೃತಿಗಳನ್ನು ನೀಡಿದ್ದಾರೆ. ವಿವಿಧ ಹೋರಾಟ ಮತ್ತು ಪ್ರತಿಭಟನೆ ರೂಪದಲ್ಲಿ ಕುವೆಂಪು ಇಂದಿಗೂ ಪ್ರಸ್ತುವಾಗಿದ್ದಾರೆ ಎಂದು ಹೇಳಿದರು.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಕುವೆಂಪು ಅವರ ಹುಟ್ಟಿದ ದಿನವನ್ನು ಶಾಲೆಗಳಲ್ಲಿ ವಿಶ್ವಮಾನವ ದಿನಾಚರಣೆ ಮಾಡುತ್ತಿರುವುದು ಶ್ಲಾಘನೀಯ. ಕುವೆಂಪುರವರ ಜೀವನ, ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ನಡೆಯಬೇಕು. ಸರ್ವಜನಾಂಗದ ಶಾಂತಿಯ ತೋಟದ ಮೂಲಕ ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ ರಸಋಷಿ ಎಂದು ಬಣ್ಣಿಸಿದರು.

ವಾಲ್ಮೀಕಿ ಹಾಗೂ ಬೇರೆಯವರು ಬರೆದ ರಾಮಾಯಣದಲ್ಲಿ ಎಲ್ಲರನ್ನು ನಾಯಕರನ್ನಾಗಿ ಬಿಂಬಿಸಲಾಗಿದೆ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂನಲ್ಲಿ ಪ್ರತಿನಾಯಕ ನಾಯಕನಾಗಿ ರೂಪುಗೊಂಡಿದ್ದಾನೆ. ರಾಮನ ಬದಲಿಗೆ ರಾವಣನನ್ನು ವೈಭವಿಕರಿಸಿದ್ದಾರೆ ಎಂದು ಹೇಳಿದರು. ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ,  ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ, ರಿಜಿಸ್ಟಾರ್‌ ಈಶ್ವರ್‌ ಮಿರ್ಜಿ ಮೊದಲಾದವರು ಉಪಸ್ಥಿತರಿದ್ದರು.

ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆ ನೀಡುವ ಪೇಜಾವರ ಶ್ರೀಗಳು, ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಮೊದಲಾದವರು ಕುವೆಂಪು ಅವರನ್ನು ಓದಿಕೊಳ್ಳಬೇಕು. ಸಮಸಮಾಜ ನಿರ್ಮಾಣದಲ್ಲಿ ಕುವೆಂಪುರವರ ಪಾತ್ರ ಎಷ್ಟು ಹಿರಿದು ಎಂಬುದು ಅರ್ಥವಾಗುತ್ತದೆ.
-ಚಂದ್ರಶೇಖರ ಪಾಟೀಲ, ಸಾಹಿತಿ

50 ಲಕ್ಷ ರೂ. ವೆಚ್ಚದಲ್ಲಿ ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನ ಮಾಡುತ್ತಿದ್ದೇವೆ. ಕನ್ನಡ, ತಮಿಳು, ತೆಲಗು, ಮಲಯಾಳಂ ಹೀಗೆ ಎಲ್ಲ ಭಾಷೆ ಕಲಾವಿದರು ಇದರಲ್ಲಿ ಸೇರಿಕೊಂಡಿದ್ದಾರೆ. ಉಚಿತ ಟಿಕೆಟ್‌ಗಾಗಿ ಬಹುತೇಕರು ಕರೆ ಮಾಡುತ್ತಾರೆ. ಹಣಕೊಟ್ಟು ನಾಟಕ ನೋಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
-ಸಿ.ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next