ಬಳ್ಳಾರಿ: ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಕಾಟಾಚಾರಕ್ಕೆಂಬಂತೆ ಕೇವಲ ಬೆರಳೆಣಿಕೆಯಷ್ಟು ಕಾಲೇಜುಗಳು ಪಾಲ್ಗೊಂಡಿರುವುದು ಬೇಸರ ಮೂಡಿಸಿದೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಿಯು ಶಿಕ್ಷಣ ಇಲಾಖೆ, ಬಿಪಿಎಸ್‌ಸಿ ಪಿಯು ಕಾಲೇಜು ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಳ್ಳಾರಿ ನಗರ ಸೇರಿ ತಾಲೂಕಿನಲ್ಲಿ ಸುಮಾರು 40 ಪದವಿ ಪೂರ್ವ ಕಾಲೇಜುಗಳು ಇವೆ. ಇದರಲ್ಲಿ ಕೇವಲ 14 ಕಾಲೇಜುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಕ್ರೀಡೆಗಳನ್ನು ವಿದ್ಯಾರ್ಥಿಗಳು, ಕಾಲೇಜು ಶಿಕ್ಷಣ ಸಂಸ್ಥೆಗಳು ಎಷ್ಟರ ಮಟ್ಟಿಗೆ ಕಡೆಗಣಿಸುತ್ತಿವೆ ಎಂಬುದು ತಿಳಿಯುತ್ತದೆ.
ಇದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಡಿಡಿಪಿಯು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಬೇಕು. ಈ ಕುರಿತು ಡಿಡಿಪಿಯು ಆದೇಶ ಹೊರಡಿಸಿ, ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಕಾಟಾಚಾರಕ್ಕೆಂಬಂತೆ ಪಾಲ್ಗೊಳ್ಳದೆ, ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿ ನಗರಕ್ಕೆ ಕೀರ್ತಿ ತರಬೇಕು ಎಂದ ಅವರು, ಕ್ರೀಡಾಕೂಟ ಆಯೋಜನೆಯನ್ನು ಖಾಸಗಿ ಕಾಲೇಜ್‌ಗಳಿಗೆ ವಹಿಸುವುದರಿಂದ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಆದರೆ ಸರ್ಕಾರಿ ಕಾಲೇಜ್‌ಗಳಿಗೆ ನೀಡಿದರೆ ಅನುದಾನ ಕೊರತೆ ಉಂಟಾಗಿ, ನಾವೇ ಅನುದಾನ ನೀಡುವಂತ ಪರಿಸ್ಥಿತಿ ಬರುತ್ತದೆ. ಮುಂದಿನ ದಿನಗಳಲ್ಲಿ ಸಹ ಖಾಸಗಿ ಸಂಸ್ಥೆಗಳಿಗೆ ವಹಿಸಬೇಕು ಎಂದರು.
ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ತಿಮ್ಮಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಸ್.ಜೆ.ವಿ. ಮಹಿಪಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಪಾಲಿಕೆ ಮೇಯರ್ ಸುಶೀಲಾಬಾಯಿ, ಸಂಸ್ಥೆಯ ಡಾ| ಯಶವಂತ್ ಭೂಪಾಲ್, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕಾರ್, ನಾಗಮ್ಮ ಇದ್ದರು.
ಕ್ರೀಡಾಕೂಟದಲ್ಲಿ ಬಾಲಕ, ಬಾಲಕಿಯರ ವಿಭಾಗಕ್ಕೆ 100, 200, 1500 ಮೀಟರ್ ಓಟ, ಗುಂಡು ಎಸೆತ, ಎತ್ತರ ಜಿಗಿತ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.