ಹಾನಗಲ್ಲ: ಹಾನಗಲ್ಲ ತಾಲೂಕಿನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಗೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 19 ಮನೆಗಳು ಬಿದ್ದಿದ್ದು, 75 ಹೆಕ್ಟೇರ್ ಬಾಳೆ ಮತ್ತು 86 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮಾವು ಬೆಳೆ ನಾಶವಾದ ಬಗ್ಗೆ ವರದಿಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಾನಗಲ್ಲ ತಾಲೂಕು ತಹಸೀಲ್ದಾರ್ ಎಂ.ಗಂಗಪ್ಪ, ಅಕಾಲಿಕ ಮಳೆಗೆ ತಾಲೂಕಿನಲ್ಲಿ ರೈತರ ಬಾಳೆ, ಮಾವು ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಫಸಲು ಹಾಳಾಗಿದೆ. ಮನೆಗಳ ಛಾವಣಿಗಳು ಹಾರಿಹೋಗಿವೆ. ಇದರ ವರದಿಯನ್ನು ಕೂಡಲೇ ಸರ್ಕಾರಕ್ಕೆ ನೀಡಲಾಗುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳೂ ಇದನ್ನು ಗಂಭೀರವಾಗಿ ಪರಿಗಣಿಸಿ ಮೂರು ದಿನಗಳಲ್ಲಿ ದಾಖಲೆಗಳ ಸಹಿತ ಮಾಹಿತಿ ಒದಗಿಸಬೇಕು. ಇದುವರೆಗೂ ಚುನಾವಣೆಯ ಕಾರ್ಯದಲ್ಲಿ ತೊಡಗಿದ್ದರೂ ಎಲ್ಲ ಇಲಾಖೆಗಳ ಸಿಬ್ಬಂದಿ ಬರಗಾಲವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ.
ಉಳಿದೆಲ್ಲ ತಾಲೂಕುಗಳಿಗೆ ಹೋಲಿಸಿದರೆ ಹಾನಗಲ್ಲ ತಾಲೂಕಿನಲ್ಲಿ ಕುಡಿಯುವ ನೀರಿಗೆ ದೊಡ್ಡ ಸಮಸ್ಯೆಯಾಗಿಲ್ಲ. ಮುಂದಿನ 2 ತಿಂಗಳೂ ಬರಗಾಲವಿದ್ದಂತೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.ಏಪ್ರೀಲ್ ತಿಂಗಳು ವಾಡಿಕೆ ಮಳೆ 44ಮೀಮೀ ಆಗಿತ್ತು. ಶನಿವಾರ, ರವಿವಾರ 33 ಮೀಮೀ ಸುರಿದಿದೆ. ವೇಗದ ಗಾಳಿ ಹಾಗೂ ಮಳೆಯ ರಭಸವೇ ಈ ಹಾನಿಗೆ ಕಾರಣ ಎನ್ನಲಾಗಿದೆ. ಹಾನಿಗೊಳಪಟ್ಟ ಮನೆಗಳಿಗೆ 3200 ರೂ.ದಿಂದ 5200 ರೂ. ವರೆಗೆ ಪರಿಹಾರ ನೀಡಲು ಸಾಧ್ಯವಿದೆ. ಇದರೊಂದಿಗೆ ತಾಲೂಕಿನಲ್ಲಿ 6 ಎಕರೆ(250) ತೆಂಗು, 2 ಎಕರೆಯಷ್ಟು ಅಡಕೆ ಗಿಡಗಳು ನೆಲಕ್ಕುರುಳಿವೆ. 48 ಹೆಕ್ಟೇರ್ ಭತ್ತ ಬೊಮ್ಮನಹಳ್ಳಿ ಹೋಬಳಿಯಲ್ಲಿ ನಾಶವಾದ ಮಾಹಿತಿ ಲಭ್ಯವಾಗಿದೆ. ಹಾನಿಗೊಳಗಾದ ಯಾವ ಫಲಾನುಭವಿಯೂ ಪರಿಹಾರದಿಂದ ವಂಚಿತವಾಗಬಾರದು. ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೇ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಪಂ ಇಲಾಖೆ ಅಧಿಕಾರಿ ಸೊಪ್ಪಿಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನಬಸಪ್ಪ ಹಾವಣಗಿ ಬರಗಾಲ ನಿರ್ವಹಣೆ ಕುರಿತು ಮಾಹಿತಿ ನೀಡಿ, ತಾಲೂಕಿಗೆ ಈಗಾಗಲೇ 50ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಅದನ್ನು ಕುಡಿಯುವ ನೀರು ಮತ್ತಿತರ ಕಾಮಗಾರಿಗಳಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನೂ 50 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಹಂತದಲ್ಲಿದೆ. ಇದರಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸುವುದು ಬೇಡ. ಈಗಿರುವ ಕೊಳವೆಭಾವಿಗಳಿಗೆ ಫ್ಲೆಶಿಂಗ್ ಮಾಡಿಸುವುದು, ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುವುದು. ತಾಲೂಕಿನ 21 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಂಭವವಿದೆ. ಈಗಾಗಲೇ ಸಮಸ್ಯೆ ಎದುರಾಗಿರು ಗೊಂದಿ, ಇನಾಂನೀರಲಗಿ ಹಾಗೂ ಡೊಮ್ಮನಾಳ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಆದಾಗ್ಯೂ ಯಾವ ಸಂದರ್ಭದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
Advertisement
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ಹಾಗೂ ಬರ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಕಂದಾಯ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ತಾಲೂಕಿನಲ್ಲಾದ ಮಳೆ ಹಾನಿಯ ಕುರಿತು ಪರಿಶೀಲನಾ ವರದಿ ನೀಡಿದರು.
Related Articles
Advertisement
ಸಭೆಯಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ, ಪುರಸಭೆ ಕಂದಾಯ ಅಧಿಕಾರಿ ಶಿವಾನಂದ ಕ್ಯಾಲಕೊಂಡ, ಜಿಪಂ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.