Advertisement

ವಿಶ್ವಕಪ್‌ನಲ್ಲಿ ಭಾರತ-ಪಾಕ್‌ ಪಂದ್ಯ ಬೇಡ

12:30 AM Feb 18, 2019 | |

ಹೊಸದಿಲ್ಲಿ: ಪುಲ್ವಾಮಾದ ಭೀಕರ ಘಟನೆಯನ್ನು ದೇಶದ ಅನೇಕ ಕ್ರೀಡಾಪಟುಗಳು ಖಂಡಿಸಿ ಯೋಧರ ಕುಟುಂಬಗಳಿಗೆ ಸಹಾಯ ಮಾಡುತ್ತಿರುವಂತೆಯೇ ಭಾರತೀಯ ಕ್ರಿಕೆಟ್‌ ಕ್ಲಬ್‌ನ (ಸಿಸಿಐ) ಕಾರ್ಯದರ್ಶಿ ಸುರೇಶ್‌ ಬಫಾ° ಮುಂಬರುವ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕೇಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.

Advertisement

“ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿರುವ ಈ ಕೃತ್ಯವನ್ನು ಖಂಡಿಸುತ್ತೇವೆ. ಇಮ್ರಾನ್‌ ಖಾನ್‌ ಇದಕ್ಕೆ ಉತ್ತರಿಸಬೇಕು. ಪಾಕಿಸ್ಥಾನದ ಪ್ರಧಾನಿಯಾಗಿ ಹಾಗೂ ಈ ಕೃತ್ಯದಲ್ಲಿ ಪಾಕಿಸ್ಥಾನ ಪಾಲೇನಿಲ್ಲ ಎಂದು ಅವರ ನಂಬಿಕೆಯಾಗಿದ್ದರೆ ಈ ದುಷ್ಕೃತ್ಯದ ಬಗ್ಗೆ ಎಲ್ಲರ ಮುಂದೆ ಮಾತನಾಡಲು ಅವರೇಕೆ ಹಿಂಜರಿಯಬೇಕು, ಇದರ ಬಗ್ಗೆ ಅವರು ಪ್ರತಿಕ್ರಿಯಿಸಬೇಕು. ಮುಂಬರುವ ವಿಶ್ವಕಪ್‌ ಕೂಟದಲ್ಲಿ ಭಾರತ ತಂಡ ಪಾಕಿಸ್ಥಾನ ವಿರುದ್ಧ ಆಡಲಿದ್ದು, ಆ ಪಂದ್ಯವನ್ನು ರದ್ದುಗೊಳಿಸಬೇಕೆಂದು ಸಿಸಿಐ ಪರವಾಗಿ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಸಿಸಿಐ ಕಾರ್ಯದರ್ಶಿ ಸುರೇಶ್‌ ಬಫಾ° ಹೇಳಿದ್ದಾರೆ.

ಇಮ್ರಾನ್‌ ಖಾನ್‌ ಚಿತ್ರ ತೆರವು
ಉಗ್ರರ ದಾಳಿಯ ಬಳಿಕ ಮುಂಬಯಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿರುವ ಸಿಸಿಐ ಪ್ರಧಾನ ಕಚೇರಿಯಲ್ಲಿರುವ ಇಮ್ರಾನ್‌ ಖಾನ್‌ ಅವರ ಭಾವಚಿತ್ರವನ್ನು ತೆರವುಗೊಳಿಸಲಾಗಿದೆ. ಇದು ಭದ್ರತಾ ಪಡೆಯ ಮೇಲೆ ನಡೆಸಿದ ದಾಳಿಯನ್ನು ಖಂಡಿಸುವ ಕ್ರಮ ಎಂದು ಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ಲಬ್‌ನ “ಆಲ್‌ರೌಂಡರ್‌ ರೆಸ್ಟಾರೆಂಟ್‌’ನಲ್ಲಿ ಇಮ್ರಾನ್‌ ಖಾನ್‌ ಭಾವಚಿತ್ರ ಹಾಗೂ ಅವರನ್ನೂ ಒಳಗೊಂಡ ಆಟಗಾರರ ಪೋಟೋಗಳನ್ನು ತೂಗುಹಾಕಲಾಗಿತ್ತು. ಇಮ್ರಾನ್‌ ಖಾನ್‌ ಅವರ ಫೋಟೋ ಮಾತ್ರವಲ್ಲದೇ ಪಾಕಿಸ್ಥಾನದ ಆಟಗಾರರೆಲ್ಲರ ಭಾವಚಿತ್ರಗಳನ್ನು ಇದೀಗ ತೆರವುಗೊಳಿಸಲಾಗಿದೆ.

“ದಾಳಿಯ ಮರುದಿನವೇ ಸಭೆ ಕರೆದ ನಾವು ಈ ಕೃತ್ಯವನ್ನು ಖಂಡಿಸಿದ್ದೆವು. ಈ ದಾಳಿಯ ಹಿಂದಿನ ಕಾಣದ ಕೈ ಯಾವುದು ಎನ್ನುವುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ದೇಶದ ಜನರ ಭಾವನೆ ಎತ್ತಿಹಿಡಿಯಬೇಕಂಬ ನಿರ್ಧರಿಸಿ ಇಮ್ರಾನ್‌ ಖಾನ್‌ ಅವರ ಭಾವಚಿತ್ರವನ್ನು ಮುಚ್ಚಬೇಕೆಂದು ಈ ಸಭೆಯಲ್ಲೇ ತೀರ್ಮಾನ ಕೈಗೊಂಡೆವು. ಇದಾದ ಕೆಲವೇ ನಿಮಿಷಗಳಲ್ಲಿ ಆ ಭಾವಚಿತ್ರವನ್ನು ತೆರವುಗೊಳಿಸಿದೆವು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಇಮ್ರಾನ್‌ ಖಾನ್‌ ಭಾರತದ ವಿರುದ್ಧ ಎರಡು ಪಂದ್ಯಗಳನ್ನು ಆಡಿದ್ದರು. 1987ರಲ್ಲಿ ಭಾರತದ ವಿರುದ್ಧ ನಡೆದ “ಫೆಸ್ಟಿವಲ್‌ ಗೇಮ್‌’ನಲ್ಲಿ ಪಾಕಿಸ್ಥಾನವನ್ನು ಇಮ್ರಾನ್‌ ಮುನ್ನಡೆಸಿದ್ದರು. ಇದೇ ಸ್ಟೇಡಿಯಂನಲ್ಲಿ 1989ರಲ್ಲಿ ನಡೆದ ನೆಹರೂ ಕಪ್‌ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ಥಾನ ಇಮ್ರಾನ್‌ ಸಾರಥ್ಯದಲ್ಲೇ ಜಯ ಸಾಧಿಸಿತ್ತು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next