ಹುಣಸೂರು: ಮಕ್ಕಳನ್ನು ಕೇವಲ ಪುಸ್ತಕದ ಹುಳುಗಳನ್ನಾಗಿಸದೆ, ಪಠ್ಯೇತರ ಚಟುವಟಿಕೆಗಳೊಂದಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಕಲಿಸಿದ್ದಲ್ಲಿ ಮುಂದೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಜಿಪಂ ಮಾಜಿ ಸದಸ್ಯ ತೊಂಡಾಳುರಾಮಕೃಷ್ಣೇಗೌಡ ಸೂಚಿಸಿದರು.
ನಗರದ ಜಯಪ್ರಕಾಶ್ ನಾರಾಯಣ್ ಮೆಮೋರಿಯಲ್ ಜನತಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು. 1988ರಲ್ಲಿ ಪ್ರಾರಂಭಗೊಂಡ ಟ್ರಸ್ಟ್ ಇಂದಿನವರೆಗೂ ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನವನ್ನೂ ನೀಡುವ ವಿವಿಧ ಆಟೋಟಗಳು ಅವಶ್ಯಕವಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳಲ್ಲಿ ಅದ್ವಿತೀಯ ಪ್ರತಿಭೆಯಿರುತ್ತದೆ. ಅದನ್ನು ಹೊರತರುವ ಕೆಲಸವಾಗಬೇಕು. ತನ್ನ ಹುಟ್ಟೂರಿನಲ್ಲಿ ಪ್ರಸ್ತುತ 70 ಮಂದಿ ವಿವಿಧ ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಕಾರಣ ಹಳ್ಳಿಯ ಕಷ್ಟದ ಬದುಕು ಅವರಲ್ಲಿ ಉತ್ತಮ ಬದುಕು ನಡೆಸುವುದನ್ನು ಕಲಿಸಿದೆ ಎಂದು ನುಡಿದರು. ಮಕ್ಕಳ ಮೆದುಳಿನ ಮೇಲೆ ಸಮತೋಲನ ಕಾಪಾಡುವ ಹೊಣೆಗಾರಿಕೆ ಪೋಷಕರದ್ದಾಗಿದ್ದು, ಪಾಠದ ಜೊತೆಗೆ ಆಟದಲ್ಲೂ ಮಕ್ಕಳನ್ನು ತೊಡಗಿಸುವ ಮನೋಭಾವ ಪೋಷಕರಲ್ಲಿ ಮೂಡಬೇಕಿದೆ ಎಂದು ಹೇಳಿದರು.
ಟ್ರಸ್ಟ್‌ನ ಅಧ್ಯಕ್ಷೆ ವಿಜಯ ಕರೀಗೌಡ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಗಮನಿಸಬೇಕಿದ್ದು ಒತ್ತಡವನ್ನು ಮಕ್ಕಳ ಮೇಲೆ ಹೇರಬೇಡಿ ಎಂದರು. ನಗರಸಭಾ ಸದಸ್ಯ ಕೃಷ್ಣರಾಜಗುಪ್ತ ಮಾತನಾಡಿ, ಕಳೆದ 20 ವರ್ಷಗಳಿಂದ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರ, ಜಯಪ್ರಕಾಶ್ ನಾರಾಯಣರ ಹುಟ್ಟುಹಬ್ಬದ ದಿನದಂದು ಹೊರರೋಗಿಗಳಿಗೆ ಹಣ್ಣುಹಂಪಲು ವಿತರಣೆ, ವಿಶ್ವವಿದ್ಯಾನಿಲಯ ಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಗೋವಿಂದೇಗೌಡ ಮಾತನಾಡಿದರು. ಟ್ರಸ್ಟಿಗಳಾದ ಜಿಪಂ ಮಾಜಿ ಸದಸ್ಯ ಎಚ್.ಎಂ.ಫಜಲುಲ್ಲಾ, ಲತಾ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಾಬು, ಟ್ರಸ್ಟಿ ವೆಂಕಟಪತಿ, ಕಾರ್ಯದರ್ಶಿ ಸುರೇಶ್ ಕುಮಾರ್, ಶಿಕ್ಷಕ ಗೋವಿಂದೇಗೌಡ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.