ನೆಲಮಂಗಲ: ಕೆಂಪೇಗೌಡರು ಕೇವಲ ಬೆಂಗಳೂರು, ಕರ್ನಾಟಕಕ್ಕೆ ಮಾತ್ರವಲ್ಲ ಅವರು ದಕ್ಷಿಣ ಭಾರತದ ಸಾಂಸ್ಕೃತಿಕ ನಾಯಕರು. ಅವರನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ಅಧ್ಯಕ್ಷ ಎಂ.ಎಚ್. ಗಂಗರುದ್ರಯ್ಯ ತಿಳಿಸಿದರು.
ತಾಲೂಕಿನ ಸೋಂಪುರ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೆಂಪೇಗೌಡರು ದಕ್ಷ ಹಾಗೂ ದೂರ ದೃಷ್ಟಿಯುಳ್ಳ ಆಡಳಿತಗಾರನಾಗಿದ್ದು, ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಕೃಷಿ ಅಭಿವೃದ್ಧಿ ಹಾಗೂ ಅಂತರ್ಜಲದ ವೃದ್ಧಿಗೆ ಶ್ರಮಿಸಿದ್ದರು. ಪ್ರಕೃತಿ ಸಮತೋಲನ, ನಿಸರ್ಗ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಅನೇಕ ಸಾಮಾಜಿಕ ಕಾರ್ಯ ಮಾಡಿದ್ದಾರೆ ಎಂದರು.
ಯಾವುದೇ ಜಾತಿ ಮತ ಧರ್ಮಗಳನ್ನು ಎಣಿಸದೇ ಜಗತ್ತಿನ ಮಾನವ ಕುಲಕ್ಕೆ ಒಳಿತಾಗಿರುವ ಮಹನೀಯರನ್ನು ಕೆಲವೇ ಮಂದಿ ಸ್ವಾರ್ಥಕ್ಕೆ ಒಂದು ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದೂರದೃಷ್ಟಿಯ ಫಲ: ಸದಸ್ಯ ಎಸ್.ಟಿ. ಸಿದ್ದರಾಜು ಮಾತನಾಡಿ, ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ಬೃಹತ ನಗರವಾಗಿ ಬೆಳೆದು ವಿಶ್ವಮಾನ್ಯ ನಗರವಾಗಿದೆ. ಜಯನಗರ ಸಾಮ್ರಾಜ್ಯದಲ್ಲಿ ಸಾಮಂತರಾಗಿದ್ದ ಕೆಂಪೇಗೌಡರು, ಕೃಷ್ಣದೇವರಾಯನ ಸಹೋದರ ಅಚ್ಯುತರಾಯನ ಅಪ್ಪಣೆ ಪಡೆದು ಬೆಂಗಳೂರು ನಿರ್ಮಿಸಿ ಅಂದೇ ಜಾತ್ಯತೀತ ಜನಗಳಿಗೆ ಆಶ್ರಯ ನೀಡಿದರ ಫಲವಾಗಿ ಬೆಂಗಳೂರಿನಲ್ಲಿ ಇಂದಿಗೂ ಎಲ್ಲ ವರ್ಗದವರು ಜೀವನ ಸಾಗಿಸುತ್ತಿದ್ದಾರೆ ಎಂದರು.
ಬದುಕು ಕಟ್ಟಿಕೊಳ್ಳಲು ಸಹಕಾರಿ: ಕಾರ್ಯಧ್ಯಕ್ಷ ಬಿ.ಎಚ್. ಮನೋಹರ್ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈಗ ವಿಶ್ವಕ್ಕೆ ಮಾದರಿ ಅವರ ಶ್ರಮದ ಪ್ರತಿಫಲವೇ ಇಂದು ಕೋಟ್ಯಂತರ ಜನರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು. ಬರಗೇನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ.ಶಿವರಾಮಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ನರಸೀಪುರ ನಾಗರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮಂಜುನಾಥ್, ಉಪಾದ್ಯಕ್ಷ ಹನುಮಂತರಾಜು, ಕಾಂಗ್ರೆಸ್ ಮುಖಂಡ ಡಿ.ದೇವರಾಜು, ಕರವೇ ಅಧ್ಯಕ್ಷ ಬಿ. ಮಂಜುನಾಥ, ಪೆಮ್ಮನಹಳ್ಳಿ ದೇವರಾಜು, ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಮಧುಸೂದನ್, ಜಗದೀಶ್ ಚೌದರಿ, ಕಾರ್ಯದರ್ಶಿ ತಿಮ್ಮೆಗೌಡ, ನಾಗವೇಣಿ, ಗೌರವಧ್ಯಕ್ಷ ವೆಂಕಟಪ್ಪ, ಸದಸ್ಯ ರಾಮಚಂದ್ರ, ಗೋಪಾಲ್ ಬಿ.ಎಚ್. ವಸಂತಕುಮಾರ್ ಮಾಚನಹಳ್ಳಿ ಕೃಷ್ಣಮೂರ್ತಿ, ನಳಿನಾ, ರಾಜಣ್ಣ ಹಾಗೂ ಮತ್ತಿತರರು ಇದ್ದರು.