ಯಾದಗಿರಿ: ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ತಿಳಿಸಬೇಕು. ಸದ್ಯದಲ್ಲೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪರಿಶೀಲಿಸಲಾಗುವುದು. ಸುಳ್ಳು ಹೇಳಿದ್ದು ಕಂಡು ಬಂದರೆ ಪಿಡಿಒ ಸೇರಿದಂತೆ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ. ಚವ್ಹಾಣ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಪ್ರಸ್ತುತ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಏಪ್ರಿಲ್, ಮೇ ಹಾಗೂ ಜೂನ್ ಈ ಮೂರು ತಿಂಗಳು ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕು. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕ್ಷೀಣಿಸಿದರೆ, ಪರ್ಯಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಎಲ್ಲ 708 ಗ್ರಾಮಗಳಿಗೂ ಜಲ ಜೀವನ್ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿದರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ್ ಅವರು ಮಾತನಾಡಿ, ನಾನು ಈ ಸಮಸ್ಯೆ ಅನುಭವಿಸಿದ್ದೇನೆ. ಫೋನ್ ಮಾಡಿದರೂ ಸ್ವೀಕರಿಸದೇ ಸ್ವಿಚ್ ಆಪ್ ಮಾಡಿದ್ರು ಎಂದು ಪಿಡಿಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಫೋನ್ ಸ್ವಿಚ್ ಆಫ್ ಮಾಡಿದ್ರೆ, ನೋಟಿಸ್ ನೀಡಲಾಗುವುದು. ಎಲ್ಲ ಪಿಡಿಒಗಳಿಗೆ ಸರ್ಕಾರಿ ಮೊಬೈಲ್ ಸಿಮ್ ನೀಡುವಂತೆ ಜಿಪಂ ಸಿಇಒಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಒಂದು ವಾರದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಗ್ರಾಮಸಭೆ ಕರೆದು ಮನೆಗಳ ವಿತರಣೆ (ನಿಗದಿ)ಗೆ ಕ್ರಮಕೈಗೊಳ್ಳಬೇಕು. ಯಾವುದೇ ಹಣ ಪಡೆಯದೇ ಬಡವರಿಗೆ ಮನೆಗಳ ಸೌಲಭ್ಯ ಕಲ್ಪಿಸಬೇಕು. ತಮ್ಮ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಶೌಚಾಲಯ, ಚರಂಡಿಗಳ ಸ್ವತ್ಛತೆಗೆ ಕ್ರಮವಹಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್., ಜಿಪಂ ಸಿಇಒ ಅಮರೇಶ ನಾಯ್ಕ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಶಾ ಆಲಂ ಹುಸೇನ್ ಇದ್ದರು