ಉಡುಪಿ: ಮತದಾನ ನಡೆಯಲು 72 ಗಂಟೆ ಬಾಕಿ ಇದ್ದು, ಶಾಂತಿಯುತ ಮತ್ತು ವ್ಯವಸ್ಥಿತ ಮತದಾನ ನಡೆಯಲು ಸಹಕರಿಸಬೇಕು. ಮತದಾರರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.
ಅವರು ಸೋಮವಾರ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದರು.
ಮತದಾರರಿಗೆ ಆಮಿಷ ಒಡ್ಡುವುದು, ಮತಗಟ್ಟೆಯ 100 ಮೀ. ವ್ಯಾಪ್ತಿಯೊಳಗೆ ಪ್ರಚಾರ ಮಾಡುವುದು, ಮತದಾರರಿಗೆ ವಾಹನ ಸೌಲಭ್ಯ ಒದಗಿಸುವುದು, 48 ಗಂಟೆಯ ಒಳಗೆ ಸಾರ್ವಜನಿಕ ಸಭೆ ಸಮಾರಂಭ ನಡೆಸುವುದು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದೆ. ಪಕ್ಷಗಳು ಮತ್ತು ಅಭ್ಯರ್ಥಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಡಿಸಿ ಹೇಳಿದರು.
ಚುನಾವಣ ಪ್ರಚಾರ, ಸಭೆ ಇತ್ಯಾದಿಗಳಿಗೆ ಕ್ಷೇತ್ರದ ಹೊರಗಿನಿಂದ ಕರೆತಂದಿರುವ ಮತ್ತು ಕ್ಷೇತ್ರದ ಮತದಾರರಲ್ಲದ ರಾಜಕೀಯ ಗಣ್ಯ ವ್ಯಕ್ತಿಗಳು, ಪ್ರಚಾರಕರು, ಬೆಂಬಲಿಗರು ಮತ್ತು ಕಾರ್ಯಕರ್ತರು ಕ್ಷೇತ್ರದಿಂದ ಹೊರ ಹೋಗಬೇಕು. ಮತದಾನಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡಿ.
ಯಾವುದೇ ಮನೆಗಳಲ್ಲಿ ರಾಜಕೀಯ ಸಭೆಗಳು ನಡೆಯುತ್ತಿದ್ದರೆ, ಮದ್ಯ ಹಂಚುತ್ತಿದ್ದರೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದರೆ, ಸಾಮೂಹಿಕ ಭೋಜನ ವ್ಯವಸ್ಥೆ ಮಾಡುತ್ತಿದ್ದರೆ ಮಾಹಿತಿ ನೀಡಬೇಕು ಎಂದು ಡಿಸಿ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ನೇಮಕಗೊಂಡಿರುವ ಎಲ್ಲ ಫ್ಲೈಯಿಂಗ್ ಸ್ವಾಡ್ ತಂಡಗಳು, ಸೆಕ್ಟರ್ ಅಧಿಕಾರಿಗಳಿಗೆ ಇನ್ನೂ ಹೆಚ್ಚು ಜಾಗೃತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚಿನ ತಪಾಸಣೆಗೆ ಸೂಚಿಸಲಾಗಿದೆ ಎಂದ ಡಿಸಿ, ಅಕ್ರಮ ಕಂಡುಬಂದಲ್ಲಿ ಸಿವಿಜಿಲ್ ಮೂಲಕ ಅಥವಾ ಸಹಾಯವಾಣಿ ಮೂಲಕ ದೂರು ನೀಡಿ ಎಂದರು.
ಎ. 16ರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಧ್ವನಿವರ್ಧಕ, ಸೌಂಡ್ ಸಿಸ್ಟಂಗಳನ್ನು ಕಾರ್ಯಕ್ರಮಗಳಿಗೆ ನೀಡದಂತೆ ಡಿಸಿ ಸೂಚಿಸಿದ್ದಾರೆ.