Advertisement
ವಿಧಾನಸಭೆ ಚುನಾವಣೆ ಸಮೀಪವಾದಂತೆ ರಾಜಕೀಯ ಪಕ್ಷಗಳಲ್ಲಿನ ಚಟುವಟಿಕೆಗಳೂ ಗರಿಗೆದರುತ್ತಿವೆ. ಚುನಾವಣಾ ತಾಲೀಮಿನ ಭಾಗವಾಗಿ ಆಯಾ ಪಕ್ಷಗಳ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡುತ್ತಿರುವ “ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಗೆ ಆದ್ಯತೆ ನೀಡಿ’ ಎಂಬ ಸೂಚನೆ ನಮ್ಮನ್ನು ಈಗಾಗಲೇ ಆವರಿಸಿರುವ ಸುಳ್ಳನ್ನು ಉತ್ಪಾದಿಸುವ ಜಾಲ ಮತ್ತಷ್ಟು ಹಬ್ಬಲು ಕಾರಣವಾಗಲಿದೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
Related Articles
Advertisement
ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾದಾಟಕ್ಕಿಳಿಯುವ ವಿವಿಧ ಪಕ್ಷಗಳ ಕಾರ್ಯಕರ್ತರು, ತಮ್ಮವರ ಸಾಧನೆ ಬಿಂಬಿಸುವ ಮತ್ತು ವಿರೋಧಿಗಳ ವೈಫಲ್ಯಗಳನ್ನು ಬಣ್ಣಿಸುವ ಸಲುವಾಗಿ ಸೃಷ್ಟಿಸುವ ಪೋಸ್ಟುಗಳು ವಾಸ್ತವಕ್ಕೆ ಬೆನ್ನು ತೋರಿದಂತೆಲ್ಲ ನಾವು ಬಳಸುವ ಸಾಮಾಜಿಕ ಮಾಧ್ಯಮಗಳು ಮತ್ತು ಅಲ್ಲಿನ ಅಭಿವ್ಯಕ್ತಿ ವೇದಿಕೆ ಮತ್ತಷ್ಟು ವಿಶ್ವಾಸಾರ್ಹತೆ ಕಳೆದುಕೊಳ್ಳುವುದಲ್ಲದೇ, ಸುದ್ದಿ ಅಥವಾ ಮಾಹಿತಿಯೊಂದರ ಸತ್ಯಾಸತ್ಯತೆಯನ್ನು ಅರಿಯುವುದು ಹೇಗೆ ಎಂಬ ಗೋಜಲಿನಲ್ಲಿ ನಾವೆಲ್ಲರೂ ಸಿಲುಕುವ ಸಾಧ್ಯತೆಯೂ ಹೆಚ್ಚುವುದಲ್ಲವೇ?
ಸಾಮಾಜಿಕ ಮಾಧ್ಯಮದ ಮೂಲಕ ಬಿತ್ತಲ್ಪಡುವ ಅಸತ್ಯದ ಬೀಜಗಳು, ಅನಂತರ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಹುಲುಸಾಗಿ ಬೆಳೆದು ಸುಳ್ಳೇ ಸತ್ಯವಾಗಿ ಬಹುತೇಕರನ್ನು ತಲುಪಿ, ಕಡೆಗೆ ಅದರ ಅಸಲಿಯತ್ತು ಬಯಲಾದರೂ ಸತ್ಯ ಹೆಚ್ಚು ಜನರನ್ನು ತಲುಪದೆ ಹೋಗುವುದು ಪುನರಾವರ್ತನೆಯಾಗುತ್ತಲೆ ಇದೆ. ಸುಳ್ಳು ಹಬ್ಬಿದಷ್ಟು ವೇಗದಲ್ಲಿ ಚಲಿಸಲಾಗದೆ ವಾಸ್ತವ ಚಡಪಡಿಸುತ್ತಿದೆ. ಸುಳ್ಳಿನ ಸಾಮ್ರಾಜ್ಯದ ಅಧಿಪತಿಗಳಾಗಿ ಮೆರೆಯುತ್ತಿರುವವರನ್ನು ಮಣಿಸಲು ಮತ್ತದೇ ಮಿಥ್ಯದ ಅಸ್ತ್ರ ಬಳಸುವ ಬದಲಿಗೆ, ವಾಸ್ತವದ ಕಂದೀಲು ಹಿಡಿದು ಸೆಣೆಸುವ ಸಂಯಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪರವಾಗಿ ಕಾದಾಡಲು ಡಿಜಿಟಲ್ ಕಾಲಾಳುಗಳನ್ನು ನೇಮಿಸಲು ಇನ್ನಿಲ್ಲದ ಮುತುವರ್ಜಿ ತೋರುತ್ತಿರುವವರಿಂದ ನಿರೀಕ್ಷಿಸಲು ಸಾಧ್ಯವೇ?
ಹಿಂದೆ ದೇಶ ಆಳಿದವರು ಮಾಡಿದ್ದೆಲ್ಲವೂ ಅನಾಹುತ ಕಾರಿಯಾದುದೇ, ಅವರ ವೈಯಕ್ತಿಕ ಬದುಕು ಕೂಡ ಸರಿ ಇರಲಿಲ್ಲ. ಅಲ್ಲೂ ಅನೈತಿಕತೆಯೇ ಹಾಸಿ ಹೊದ್ದುಕೊಂಡಿತ್ತು ಅಂತೆಲ್ಲ ಬಿಂಬಿಸುವ ಸಲುವಾಗಿ ಸೃಷ್ಟಿಯಾದ ಪೋಸ್ಟುಗಳು ಮತ್ತು ಅವೆಲ್ಲ ವಾಸ್ತವವೆಂದು ಭಾವಿಸಿ ಇತರರಿಗೂ ಶೇರ್ ಮಾಡುವವರ ಎದುರು ವಾಸ್ತವಾಂಶಗಳೆಂಬ ಅರಿವಿನ ಮೋಂಬತ್ತಿ ಹಿಡಿದು ನಿಲ್ಲುವವರು ನಮಗೀಗ ಬೇಕಾಗಿದ್ದಾರೆ. ಈಗಾಗಲೇ ಇಂತಹ ಕೆಲ ಪ್ರಯತ್ನಗಳು ಆರಂಭವಾಗಿವೆಯಾದರೂ, ಸುಳ್ಳಿನ ಪ್ರವಾಹದೆದುರು ಈಜಲು ಮತ್ತಷ್ಟು ಕಸುವು ಬೇಕಾಗಿದೆ.
ಸುಳ್ಳು ಸುದ್ದಿಗಳನ್ನು ಉತ್ಪಾದಿಸುವುದರೊಂದಿಗೆ ಅಲಕ್ಷಿಸಲಷ್ಟೇ ಅರ್ಹವಾದಂತಹ ಕ್ಷುಲ್ಲಕ ವಿಚಾರಗಳನ್ನೇ ಮುನ್ನೆಲೆಗೆ ತಂದು, ಆ ಮೂಲಕವೇ ಒಂದು ರಾಜಕೀಯ ಪಕ್ಷ ಅಥವಾ ವ್ಯಕ್ತಿಯನ್ನು ಹೀಗಳೆಯಲು ಮುಂದಾಗುವುದು ಕೂಡ ಸಮಾಜದ ಮೇಲೆ ಬೀರಬಹುದಾದ ಅಡ್ಡಪರಿಣಾಮ ಕಳವಳಕಾರಿಯಾದುದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ನಟಿ ಪ್ರಿಯಾಂಕ ಛೋಪ್ರಾ ಕುಳಿತಿದ್ದ ರೀತಿ ಮತ್ತು ತೊಟ್ಟ ದಿರಿಸು ಸೂಕ್ತವೇ?, ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ವಿದ್ಯೆ ಕಲಿಸಿದ ಗುರು ನಿಂತಿದ್ದರೂ ಮೇಲೆದ್ದು ಗೌರವ ಸೂಚಿಸದೆ ಹೋದದ್ದು ಸರಿಯೇ?, ಆದಿಚುಂಚನಗಿರಿ ಮಠದ ಸ್ವಾಮೀಜಿ ಭೇಟಿಯಾದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾಲು ಮೇಲೆ ಕಾಲು ಹಾಕಿ ಕುಳಿತದ್ದು ತಪ್ಪಲ್ಲವೇ? ಎಂಬ ಕುರಿತು ನಡೆದ ಚರ್ಚೆ, ಅವುಗಳಿಗೆ ಸಿಕ್ಕ ಪ್ರಾಮುಖ್ಯತೆಯನ್ನು ಗಮನಿಸಿದರೆ ಸಾಕು, ರಾಜಕೀಯ ಲಾಭ-ನಷ್ಟದ ಹಿನ್ನೆಲೆಯಲ್ಲಿ ಪ್ರವರ್ಧಮಾನಕ್ಕೆ ಬರುವ ಆದ್ಯತೆಗಳು ಎಂತಹವೆಂಬುದರ ಮನವರಿಕೆಯಾಗುತ್ತದೆ.
ತಾವು ಮಾಡಿರುವ ಘನಕಾರ್ಯಗಳ ಕುರಿತು ಜನರಿಗೆ ಮಾಹಿತಿ ಒದಗಿಸಲು ರಾಜಕಾರಣಿಗಳು ಯಾವ ಮಾಧ್ಯಮವನ್ನಾದರೂ ಬಳಸಿಕೊಳ್ಳಲಿ. ಆದರೆ, ವಿರೋಧಿಗಳನ್ನು ಹಣಿಯುವ ಮತ್ತು ಸ್ವವಿಜೃಂಭಣೆಯಲ್ಲಿ ಮುಳುಗೇಳುವ ಸಲುವಾಗಿ ಸತ್ಯದ ರೂಪದಲ್ಲಿ ಸುಳ್ಳುಗಳನ್ನು ಉತ್ಪಾದಿಸುವ ಡಿಜಿಟಲ್ ಬಾಲಬಡುಕರ ಪಡೆ ರೂಪಿಸುವುದಕ್ಕೆ ಬದಲಾಗಿ ವಾಸ್ತವಾಂಶಗಳೊಂದಿಗೆ ಎದುರಾಳಿಗಳನ್ನು ಮುಖಾಮುಖೀಯಾಗಲಿ.
ಸುಳ್ಳುಗಳು ಮತ್ತು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಟ್ಟಲ್ಪಡುವ ಜನಪ್ರಿಯತೆಯ ಮಹಾಗೋಡೆ ಅದೆಷ್ಟೇ ಎತ್ತರಕ್ಕೇರಿದರೂ ಅದರ ಆಯುಸ್ಸು ಅತ್ಯಲ್ಪವೆನ್ನುವ ಅರಿವು ತಮ್ಮ ಪಕ್ಷದ ಐಟಿ ಸೆಲ್‌ಗಳನ್ನು ಬಲಪಡಿಸಲು ಮುತುವರ್ಜಿ ತೋರಿಸುತ್ತಿರುವ ಮತ್ತು ತಮ್ಮ ಹಿನ್ನಡೆಗೆ ಡಿಜಿಟಲ್ ಮಾಧ್ಯಮ ಬಳಕೆಯಲ್ಲಿ ತಾವು ಹಿಂದುಳಿದಿರುವುದೂ ಮುಖ್ಯ ಕಾರಣವೆಂಬ ಜಾnನೋದಯದೊಂದಿಗೆ ಪುಟಿದೇಳುತ್ತಿರುವವರಲ್ಲಾದರೂ ಬೇರೂರಲಿ. ಈಗಾಗಲೇ ಬಲಿಷ್ಠ ಡಿಜಿಟಲ್ ಪಡೆ ಕಟ್ಟಿ, ತೊಟ್ಟ ಮುಖವಾಡಗಳನ್ನು ಮತ್ತಷ್ಟು ವರ್ಣರಂಜಿತಗೊಳಿಸಿಕೊಂಡವರು, ಇದೀಗ ಆ ಬಣ್ಣ ಮಾಸಿ ಹೋಗದಂತೆ ಕಾಪಿಡಲು ಹೆಣಗುತ್ತಿರುವುದು ಕಣ್ಣೆದುರೇ ಇದೆ.
ವಿವೇಚಿಸುವ ಸಂಯಮವನ್ನೇ ಕಳೆದುಕೊಂಡವರಂತೆ ವರ್ತಿಸುವ ಬೆಂಬಲಿಗರ ಪಡೆ ರೂಪಿಸುವ ಮುಖೇನ ಸಾರ್ವಜನಿಕ ಸಂವಾದವನ್ನು ಇನ್ನಿಲ್ಲದಂತೆ ಹದಗೆಡಿಸಿದ ಪಕ್ಷವೊಂದರ ಕಾರ್ಯವೈಖರಿ ಉಳಿದವರಿಗೂ ಮಾದರಿಯಾಗದಿರಲಿ. ಭಿನ್ನ ನಿಲುವುಗಳನ್ನು ಗೌರವಿಸುವ ಮತ್ತು ಭಿನ್ನ ದನಿಗಳನ್ನು ಆಲಿಸುವ ಸಂಯಮವನ್ನು ಬಿತ್ತುವ ಕಾರ್ಯಸೂಚಿಯ ಪರವಾಗಿ ದುಡಿಯುವ ಪಡೆ ಕಟ್ಟುವವರು ಯಾರು?
ಎಚ್.ಕೆ. ಶರತ್