Advertisement
ಈ ಪೈಕಿ ಇದುವರೆಗೆ ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ. 37 ಮಂದಿ 28 ದಿನಗಳ ಅವಲೋಕನ ಮುಗಿಸಿದ್ದಾರೆ. 32 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿರಿಸಿ ಅವಲೋಕಿಸಲಾಗುತ್ತಿದೆ. ವಿದೇಶದಿಂದ ಬಂದ ಒಬ್ಬರನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಕೊರೊನಾ ಕುರಿತು ಅನಗತ್ಯವಾದ ಭಯವನ್ನು ಬಿಟ್ಟು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
Related Articles
Advertisement
ಮಾಸ್ಕ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಮಾಪನ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾದಿಂದ ಬಳಲುವ ವ್ಯಕ್ತಿಗಳಿಂದ ದೂರವಿರಬೇಕು. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ್ದರಿಂದ ರೋಗದ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಒಬ್ಬರಿಂದ ಒಬ್ಬರಿಗೆ ಬಹುಬೇಗನೆ ಹರಡುವುದರಿಂದ ಸೋಂಕಿತರು ಸೀನಿದಾಗ, ಕೆಮ್ಮಿದಾಗ ದೂರವಿರಬೇಕು. ಅವರೊಂದಿಗೆ ನಿಕಟ ಸಂಪರ್ಕ ಇರಬಾರದು, ಹಸ್ತಲಾಘವ ಮತ್ತು ಮುಟ್ಟಬಾರದು. ಸಾಮಾನ್ಯವಾಗಿ ನೋಟುಗಳು ಹಲವರು ಮುಟ್ಟುತ್ತಾರೆ. ಒಬ್ಬರಿಂದ ಒಬ್ಬರಿಗೆ ಅದು ವರ್ಗಾವಣೆ ಆಗುವುದರಿಂದ ಅದನ್ನು ಹೆಚ್ಚಾಗಿ ಬಳಸುವವರು ಆಗಾಗ್ಗೆ ಕೈ ತೊಳೆಯಬೇಕು. ಅನಗತ್ಯವಾಗಿ, ಮೂಗು, ಬಾಯಿ, ಕಣ್ಣು, ಮುಖ ಮುಟ್ಟಿಕೊಳ್ಳಬಾರದು ಎಂದು ಸಲಹೆ ನೀಡಿದರು.
ನೋವೆಲ್ ಕೊರೋನಾ ವೈರಸ್ (ಕೋವಿಡ್- 19)ನ ಗುಣಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತವರು ಚಿಕಿತ್ಸೆಗೆ ಒಳಗಾಗಬೇಕು ಮತ್ತು ಯಾರೊಂದಿಗೂ ಸಂಪರ್ಕ ಇಟ್ಟುಕೊಳ್ಳಬಾರದು. ಅವರು ಮುಚ್ಚಿಟ್ಟುಕೊಳ್ಳಲು ಮುಂದಾದರೆ ಸಾರ್ವಜನಿಕರೆಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರ ಸಹಕಾರ ಮುಖ್ಯ. ಸರ್ಕಾರದ ನಿರ್ದೇಶನದಂತೆ ಯಾವುದಾದರೂ ಪ್ರದೇಶದಲ್ಲಿ ಕೊರೊನಾ ಸೋಂಕಿತರು ಕಂಡುಬಂದರೆ ಕೂಡಲೇ ಆ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಸಾರ್ವಜನಿಕರ ಓಡಾಟ ತಪ್ಪಿಸಬೇಕು. ಆದರೆ ಅಂತಹ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದರು.
ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಅರಮನೆಯನ್ನು ಸದ್ಯಕ್ಕೆ ಬಂದ್ ಮಾಡಿಲ್ಲ. ಅಂತಹ ಪ್ರಸಂಗ ಇನ್ನೂ ಎದುರಾಗಿಲ್ಲ. ಈ ಸಂಬಂಧ ಏನೇ ಮಾಹಿತಿಗಳಿದ್ದರೂ ನಾವು ಅಧಿಕೃತವಾಗಿ ತಿಳಿಸುತ್ತೇವೆ. ರೋಗಿಗಳಿಗೆ ಕೊರೊನಾ ಕುರಿತು ಪಾಸಿಟಿವ್ ವರದಿ ಬಂದರೆ ಮಾತ್ರ ಅದನ್ನು ಹೆಚ್ಚಿನ ಪರೀಕ್ಷೆಗೆ ಪೂನಾಕ್ಕೆ ಕಳುಹಿಸುತ್ತೇವೆ. ಪ್ರಸ್ತುತ ಮಡಿಕೇರಿಯಿಂದ ಎರಡು ಮಾದರಿಯು ಪರೀಕ್ಷೆಗಾಗಿ ಬಂದಿದ್ದು, ಇನ್ನೂ ವರದಿ ಬಂದಿಲ್ಲ ಎಂದರು.
ಹಕ್ಕಿ ಜ್ವರ ಭೀತಿ ಇಲ್ಲ: ಹಕ್ಕಿ ಜ್ವರ ಭೀತಿಯು ಕೇರಳದಲ್ಲಿ ಕಾಣಿಸಿಕೊಂಡಿದೆ. ಮೈಸೂರಿನಲ್ಲಿ ಆ ಭಯವಿಲ್ಲ. ಕೋಜಿಕೊಡೈನ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವಮಾನೆ, ಜಿಪಂ ಸಿಇಒ ಕೆ. ಜ್ಯೋತಿ, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಎಚ್‌ಒ ಡಾ.ಆರ್. ವೆಂಕಟೇಶ್ ಇದ್ದರು.
ನಿರ್ಲಕ್ಷಿಸಿದರೆ ಬಲವಂತವಾಗಿ ಚಿಕಿತ್ಸೆ: ಕೆಮ್ಮು, ಶೀತ, ಜ್ವರ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಈ ಸೂಚನೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಒಂದು ವೇಳೆ ಶಂಕಿತರು ಚಿಕಿತ್ಸೆಗೆ ಬಾರದೆ ನಿರ್ಲಕ್ಷ್ಯವಹಿಸಿರುವುದು ಕಂಡುಬಂದಲ್ಲಿ ಬಲವಂತವಾಗಿ ಅಗತ್ಯ ಸಿಬ್ಬಂದಿಯೊಡನೆ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಎಚ್ಚರಿಕೆ ನೀಡಿದರು.
ಅನಗತ್ಯವಾಗಿ ಮಾಸ್ಕ್ ಧರಿಸುವುದು ಬೇಡ: ಕೆಮ್ಮು ಮುಂತಾದ ಸಮಸ್ಯೆಗಳು ಇದ್ದರೆ ಮಾತ್ರ ಮಾಸ್ಕ್ ಧರಿಸಬಹುದು. ಉಳಿದಂತೆ ಅನಗತ್ಯವಾಗಿ ಮಾಸ್ಕ್ ಧರಿಸಿದರೂ ಬೇರೆ ಬೇರೆ ರೀತಿಯ ಸೋಂಕು ಹರಡುವ ಸಾಧ್ಯತೆ ಇದೆ. ಜೊತೆಗೆ ಮಾಸ್ಕ್ಗಳನ್ನು ಪ್ರತಿ 6 ಗಂಟೆಗೊಮ್ಮೆ ಬದಲಿಸಬೇಕು. ಹೊರ ರಾಜ್ಯ ಮತ್ತು ವಿದೇಶದಿಂದ ಬರುವವರು ತಪ್ಪದೆ ಮಾಹಿತಿ ನೀಡಬೇಕು ಮತ್ತು ಹಾಲಿ ವಾಸವಿರುವ ಸರಿಯಾದ ವಿಳಾಸ ನೀಡಬೇಕು.
ಸುಳ್ಳು ಮಾಹಿತಿ ನೀಡಿದರೂ ಕ್ರಮ ಜರುಗಿಸಬೇಕಾಗುತ್ತದೆ. ಮೈಸೂರು ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ನಿಗಾವಹಿಸಲಾಗಿದೆ. ಕೇರಳ ಗಡಿ ಬಾವಲಿ ಬಳಿ ಪ್ರತ್ಯೇಕ ತಂಡ ರಚಿಸಿದ್ದು, ಅಲ್ಲಿಯೂ ಪರಿಶೀಲಿಸಿ ಬಿಡಲಾಗುತ್ತಿದೆ. ಹಡಗಿನಲ್ಲಿ ಬರುವವರನ್ನೂ ಮಂಗಳೂರಿನಲ್ಲಿ ಪರಿಶೀಲಿಸಲಾಗುತ್ತಿದೆ. ಈ ಪೈಕಿ ಯಾರಾದರೂ ಮೈಸೂರಿಗೆ ಬರುವವರಿದ್ದರೆ, ಅಲ್ಲಿಂದ ನಮಗೆ ಮಾಹಿತಿ ಬರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಏನು ಮಾಡಬಾರದು: ಸಾಧ್ಯವಾದಷ್ಟು ಮಟ್ಟಿಗೆ ಜನ ಸಂದಣಿ ಸೇರುವ ಜಾತ್ರೆ, ಮದುವೆ, ಮಾಲ್‌ಗಳಿಂದ ದೂರ ಇರಬೇಕು. ಅಗತ್ಯವಿದ್ದರೆ ಮಾತ್ರ ಅಲ್ಲಿಗೆ ಹೋಗಬೇಕೆ ಹೊರತು ಅನಗತ್ಯವಾಗಿ ತೆರಳಬಾರದು. ಆಗಾಗ್ಗೆ ಕೈ ತೊಳೆದುಕೊಳ್ಳಬೇಕು, ಮುಖ, ಮೂಗು, ಕಣ್ಣು, ಬಾಯಿ ಮುಟ್ಟಬಾರದು. ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು.
ಶಂಕಿತ ರೋಗಿಯ ಮನೆಯಲ್ಲಿ ರೋಗಿಯನ್ನು ಪ್ರತ್ಯೇಕವಾಗಿ ಇರಸಬೇಕು. ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಸುರಕ್ಷಿತವಲ್ಲದ ಕಾಡುಪ್ರಾಣಿ ಮತ್ತು ಸಾಕುಪ್ರಾಣಿಯನ್ನು ಮುಟ್ಟಬಾರದು. ವಿದೇಶಗಳಿಗೆ ತುರ್ತು ಪ್ರಯಾಣ ಕೈಬಿಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.