ಬೆಂಗಳೂರು: ನಗರದ ಮತಗಟ್ಟೆಗಳಲ್ಲಿ ಸರದಿ ಸಾಲು ನೋಡಿಯೇ ಹಲವರು ಮತದಾನಕ್ಕೆ ಹಿಂದೇಟು ಹಾಕುತ್ತಾರೆ! ಹೌದು, ನಗರದಲ್ಲಿ ಸುಮಾರು 88 ಲಕ್ಷ ಮತದಾರರಿದ್ದಾರೆ. ಈ ಪೈಕಿ ಸರಾಸರಿ ಶೇ.50-52ರಷ್ಟು ಮತದಾನ ಆಗುತ್ತದೆ. ಇದರಲ್ಲಿ ಶೇ.6ರಿಂದ ಶೇ.7ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಲು ಹೋದಾಗ, ಮತಗಟ್ಟೆಗಳಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅದರಲ್ಲಿ ಶೇ.80ರಷ್ಟು ಜನರಿಗೆ ಕಿರಿಕಿರಿ ಆಗಿರುವುದು ಮತಗಟ್ಟೆಗಳ ಮುಂದಿರುವ
ಉದ್ದನೆಯ “ಕ್ಯೂ’. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಂಸ್ಥೆಯ ಆರ್ಥಿಕ ಅಧ್ಯಯನಗಳು ಮತ್ತು ನೀತಿಗಳ ಕೇಂದ್ರದ ಮುಖ್ಯಸ್ಥ ಪ್ರೊ.ಎಸ್. ಮಧೇಶ್ವರನ್ ಮತ್ತು ಸಹಾಯಕ ಪ್ರಾಧ್ಯಾಪಕಿ ಬಿ.ಪಿ.ವಾಣಿ ನೇತೃತ್ವದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಬೆಳಗಾವಿ, ಬೆಂಗಳೂರು, ಕಲಬುರಗಿ, ಮೈಸೂರು ಸೇರಿದಂತೆ ನಾಲ್ಕೂ ವಲಯಗಳ ನಾಲ್ಕು ನಗರಗಳಿಂದ ಸಂಸ್ಥೆಯು ಸಾವಿರಾರು ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಅದರಲ್ಲಿ ಕಲಬುರಗಿ (ಶೇ.80) ಹೊರತುಪಡಿಸಿದರೆ, ಬೆಂಗಳೂರು (ಶೇ.78) ನಗರದ ಮತದಾರರು ಉದ್ದನೆ ಸಾಲು ಕಂಡು ಮತದಾನಕ್ಕೆ ಹಿಂದೇಟು ಹಾಕುತ್ತಾರೆ.
ಕುಡಿಯುವ ನೀರು, ಶೌಚಾಲಯ, ವಿಕಲಚೇತನರ ಅನುಕೂಲಕ್ಕಾಗಿ ರ್‍ಯಾಂಪ್ ವ್ಯವಸ್ಥೆ ಮಾಡಬೇಕು. ಇನ್ನು ಕೆಲವರಿಗೆ ಮತದಾರರ ಚೀಟಿ (ವೋಟರ್ ಸ್ಲಿಪ್), ಮತಗಟ್ಟೆ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ, ತಮ್ಮ ಮತಗಟ್ಟೆ ಎಲ್ಲಿದೆ, ಮತದಾನ ಮಾಡುವ ಜಾಗದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಸೇರಿದಂತೆ ಹಲವು ರೀತಿಯ ಅಡತಡೆಗಳೂ ಕಂಡುಬಂದಿವೆ ಎಂದು ಹೇಳಿದ್ದಾರೆ.
ಸುಮಾರು 200 ಪುಟಗಳ ವರದಿ ಇದಾಗಿದ್ದು, ಚುನಾವಣಾ ಆಯೋಗದ ಸೂಚನೆ ಮೇರೆಗೆ ಇದನ್ನು ಸಿದ್ಧಪಡಿಸಲಾಗಿತ್ತು. ಇದನ್ನು ಆಧರಿಸಿ, ಈಗ ಕೆಲವು ಸುಧಾರಣೆಗಳನ್ನು ಆಯೋಗ ಮಾಡಿಕೊಂಡಿದೆ ಎನ್ನಲಾಗಿದೆ.
ಆ್ಯಪ್ ನಿರ್ವಹಣೆಗೆ ರಾಯಭಾರಿಗಳ ಬಳಕೆ: ಸರತಿ ಹೆಚ್ಚಿದೆ ಎಂದು ಬೆಂಗಳೂರು ಜನ ಮತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದನ್ನು ಚುನಾವಣಾ ಆಯೋಗ ಕಂಡುಕೊಂಡಿದೆ. ಹೀಗಾಗಿ, ಚುನಾವಣೆ ನಡೆಯುವ ದಿನ ಬೂತ್‌ಗಳ ಬಳಿ ಈ ಸಮಯದಲ್ಲಿ ಎಷ್ಟು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂಬುದನ್ನು ತಿಳಿಯಲು ಕ್ಯೂ ಸ್ಟೇಟಸ್ ಆ್ಯಪ್ ಅನ್ನು ತರಲು ಚಿಂತನೆ ನಡೆಸಿದೆ. ಇದಕ್ಕಾಗಿ ಸ್ಮಾರ್ಟ್ ಫೋನ್ ಬಳಸುವ ಕಾಲೇಜು ಮಟ್ಟದ ಚುನಾವಣಾ ರಾಯಭಾರಿಗಳಿಗೆ ತರಬೇತಿ ನೀಡಿ ಬೂತ್‌ಗಳ ಬಳಿ ನೇಮಿಸಲು ಆಲೋಚಿಸಿದೆ. ಇವರು ಪ್ರತಿ 30 ನಿಮಿಷಕ್ಕೆ ಸರತಿ ಕುರಿತು ಆಯೋಗದ ವೈಬ್‌ಸೈಟ್‌ಗೆ ವರದಿ ನೀಡಲಿದ್ದಾರೆ.
ನೋಟಾ ಆಯ್ಕೆ ಇರುವುದು ಗೊತ್ತೇ ಇಲ್ಲ: ರಾಜ್ಯದಲ್ಲಿ ಶೇ. 55ರಷ್ಟು ಜನರಿಗೆ ಈಗಲೂ “ನೋಟಾ’ ಆಯ್ಕೆ ಇರುವುದು ಗೊತ್ತೇ ಇಲ್ಲ. ಶೇ. 72.4ರಷ್ಟು ಮತದಾರರಿಗೆ ವಿವಿಪ್ಯಾಟ್ ಅಪರಿಚಿತ. ಶೇ.63.4ರಷ್ಟು ಜನರಿಗೆ ಮತಯಂತ್ರ ಇವಿಎಂನಲ್ಲಿ “ಬ್ರೈಲ್’ ಆಯ್ಕೆ ಇದೆ ಎಂಬುದೂ ಅರಿವಿಲ್ಲ ಎಂಬ ಅಚ್ಚರಿ ಅಂಶಗಳೂ ಸಮೀಕ್ಷೆ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಚುನಾವಣಾ ತಜ್ಞ ಆನಂದ್ ತೀರ್ಥ ತಿಳಿಸುತ್ತಾರೆ.