Advertisement

ಸದನದಲ್ಲಿ ಭಾಗವಹಿಸಲು ಹಿಂಜರಿಕೆ ಇಲ್ಲ: ದಿನೇಶ್‌ ಗುಂಡೂರಾವ್‌

06:00 AM Dec 10, 2018 | Team Udayavani |

ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ ಹಾಗೂ ನಾಡಿನೂದ್ಧಕ್ಕೂ ಜನ ಬೆಂಬಲ ನಮಗಿದೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಲು ಯಾವುದೇ ಭಯ, ಹಿಂಜರಿಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಎನ್‌ಎಸ್‌ಯುಐ ವತಿಯಿಂದ ಭಾನುವಾರ ನಗರದ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಭವಿಷ್ಯದ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ನ ಹಿರಿಯ ಶಾಸಕರಲ್ಲಿ ಕೆಲವರು ಬೆಳಗಾವಿ ಅಧಿವೇಶನಕ್ಕೆ ಗೈರು ಹಾಜರಾಗು ಸಾಧ್ಯತೆ ಇದೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನದಲ್ಲಿ ಭಾಗವಹಿಸಲು ನಮಗೆ ಯಾವುದೇ ಹಿಂಜರಿಕೆ ಇಲ್ಲ. ಧೈರ್ಯದಿಂದ ಹೋಗುತ್ತೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ದಿನಗಳ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮದಂತೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ ಎಂದರು.

ಡಿ.17ರ ನಂತರ ಅವರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಪ್ರತಿಪಕ್ಷ ಬಿಜೆಪಿಯ ಟೀಕಾಸ್ತ್ರಗಳಿಗೆ ಉತ್ತರ ನೀಡಲು ಮೈತ್ರಿಸರ್ಕಾರದ ನಾಯಕರು ಸಮರ್ಥರಿದ್ದಾರೆ. ಮಿತ್ರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಯಾವುದೇ ಹಿಂಜರಿಕೆ ಇಲ್ಲದೇ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ  ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ ಮತ್ತು ಜನಾಶೀರ್ವಾದ ನಮ್ಮ ಮೇಲಿದೆ ಎಂದು ಹೇಳಿದರು.

ಬಿಜೆಪಿಯಿಂದ ಸುಳ್ಳು ಆರೋಪ :
ಸಿಎಜಿ ವರದಿ ಉಲ್ಲೇಖೀಸಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. 30-40 ಸಾವಿರ ಕೋಟಿ ರೂ. ಹಗರಣ ನಡೆದಿಲ್ಲ. ನಾಲ್ಕು ಬಾರಿ ಶಾಸಕರಾಗಿರುವ ಸಿ.ಟಿ.ರವಿ ಅವರಿಗೂ ಸಿಎಜಿ ವರದಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಗ್ಗೆ ಮಾಹಿತಿ ಇಲ್ಲದೇ ಬಾಲಿಷ  ಹೇಳಿಕೆ ನೀಡುತ್ತಿದ್ದಾರೆ. ಸಿ.ಟಿ.ರವಿ ಅವರಿಗೆ ಬುದ್ಧಿ ಕಡಿಮೆಯಾಗಿರಬೇಕು. ಹಾಗಾಗಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಸಾರ್ವಜನಿಕ ಲೆಕ್ಕ ಸಮಿತಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ ಅವರೇ ಇದ್ದಾರೆ. ಹೀಗಾಗಿ ವಿನಾ ಕಾರಣ ಆರೋಪ ಸರಿಯಲ್ಲ ಎಂದು  ತಿರುಗೇಟು ನೀಡಿದರು.

Advertisement

ಭವಿಷ್ಯ ಭಾರತ ಕಾರ್ಯಕ್ರಮ ಉದ್ಘಾಟನೆ
ಕಾಲೇಜು ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರ ವೈಫ‌ಲ್ಯ ತಿಳಿಸುವ ಭವಿಷ್ಯದ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭವಿಷ್ಯದ ಭಾರತ ಎಂಬ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವ ರೀತಿ ಸರ್ಕಾರ ಬೇಕು, ಯಾವ ಯೋಜನೆಗಳನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಎನ್‌ಎಸ್‌ಯುಐನಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

1500ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು. ದೇಶದಲ್ಲಿ ಸರ್ವಾಧಿಕಾರ ಆಡಳಿತ ಇದೆ. ಇದನ್ನು ತೆಗೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಹಗಲಿರುಳು ಶ್ರಮಿಸಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್‌, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್‌, ರುಚಿಗುಪ್ತ ಕಾರ್ಯಕ್ರಮದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next