Advertisement

ಟೋಕಿಯೊ ಒಲಿಂಪಿಕ್ಸ್‌ ತಂಡದಲ್ಲಿ ರಾಜ್ಯ ಆಟಗಾರರೇ ಇರುವುದಿಲ್ಲ?

07:50 AM Dec 02, 2017 | Team Udayavani |

ಬೆಂಗಳೂರು: ಹಾಕಿ ತವರೂರು ಎಂದೇ ಖ್ಯಾತಿವೆತ್ತಿರುವ ಕರ್ನಾಟಕ ಬಹುತೇಕ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ದೇಶಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಪ್ರತಿ ಒಲಿಂಪಿಕ್ಸ್‌ ನಡೆದಾಗಲೂ ಭಾರತ ತಂಡಕ್ಕೆ ಕನಿಷ್ಠ ಎಂದರೂ 2-3 ಆಟಗಾರರನ್ನು ಕೊಡುಗೆಯಾಗಿ ಕೊಟ್ಟಿದೆ.

Advertisement

ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಮುಂದೆ ಹೀಗೆ ಇರುತ್ತದೆ ಎಂದು ಹೇಳಲೂ ಆಗುವುದಿಲ್ಲ. ದಿನೇ ದಿನೇ ರಾಜ್ಯದಲ್ಲಿ ಹಾಕಿಗೆ ಸರ್ಕಾರದ ಬೆಂಬಲ ಕ್ಷೀಣಿಸುತ್ತಿದೆ. ಖಾಸಗಿ ಸಂಸ್ಥೆಗಳ ಬೆಂಬಲವೂ ದುರ್ಬಲವಾಗುತ್ತಿದೆ. ಹಿಂದೆ ಇದ್ದ ಕ್ಲಬ್‌ಗಳೆಲ್ಲವೂ ಬಾಗಿಲು ಮುಚ್ಚಿಕೊಂಡಿವೆ. ಆಟಗಾರರೆಲ್ಲರೂ ನಿರ್ಗತಿಕರಾಗಿದ್ದಾರೆ. ಒಲಿಂಪಿಕ್ಸ್‌ ಭವಿಷ್ಯದ ಶಿಬಿರದಲ್ಲೂ ರಾಜ್ಯ ಆಟಗಾರರಿಗೆ ಸ್ಥಾನವಿಲ್ಲ. ಇವೆಲ್ಲವನ್ನೂ ಗಂಭೀರವಾಗಿ ಅವಲೋಕಿಸುವುದಾದರೆ 2020ಕ್ಕೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ಕೂಟದ ಭಾರತ ತಂಡದಲ್ಲೇ ರಾಜ್ಯ ಆಟಗಾರರು ಸ್ಥಾನ ಪಡೆದುಕೊಳ್ಳುವುದೇ ಭಾರೀ ಸವಾಲಿನ ಕೆಲಸವಾಗಿದೆ.

ಹಿರಿಯರ ವಿದಾಯದ ಬಳಿಕ ರಾಜ್ಯದಿಂದ ಯಾರು?:  1968 ಹಾಗೂ 2000ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್‌ ಹೊರತು ಪಡಿಸಿ ಉಳಿದಂತೆ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ರಾಜ್ಯದಿಂದ ಇಬ್ಬರು ಅಥವಾ ಮೂವರು ಪ್ರತಿ ಒಲಿಂಪಿಕ್ಸ್‌ಗಳಲ್ಲೂ ಪಾಲ್ಗೊಂಡಿದ್ದಾರೆ. 2016 ರಿಯೋ ಒಲಿಂಪಿಕ್ಸ್‌ನ ರಾಷ್ಟ್ರೀಯ ತಂಡದಲ್ಲಿ ರಾಜ್ಯದವರಾದ ವಿ.ಆರ್‌.ರಘುನಾಥ್‌, ಎಸ್‌.ಕೆ.ಉತ್ತಪ್ಪ, ಎಸ್‌.ವಿ. ಸುನಿಲ್‌ ಹಾಗೂ ನಿಕಿನ್‌ ತಿಮ್ಮಯ್ಯ ಸ್ಥಾನ ಪಡೆದಿದ್ದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದೇನೆಂದರೆ ಇವರೆಲ್ಲರು ಅನುಭವಿ ಆಟಗಾರರು. ವಿ.ಆರ್‌.ರಘುನಾಥ್‌ ನಿವೃತ್ತಿ ಸನಿಹದಲ್ಲಿದ್ದಾರೆ.

ಎಸ್‌.ಕೆ.ಉತ್ತಪ್ಪ,  ಎಸ್‌.ವಿ.ಸುನಿಲ್‌ ಕೂಡ ಹಲವಾರು ವರ್ಷಗಳಿಂದ ಭಾರತ ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಇವರಿಬ್ಬರು 2 ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿದ್ದಾರೆ. ಮುಂದೆ ಇವರು ಫಿಟೆ°ಸ್‌ ಕಾಪಾಡಿಕೊಂಡು ಸ್ಥಾನ ಪಡೆಯುತ್ತಾರೆ ಎನ್ನುವುದನ್ನು ಹೇಳುವುದು ಅಸಾಧ್ಯ. ಇರುವುದರಲ್ಲಿ ಫಿಟ್‌ನೆಸ್‌ ಕಾಯ್ದುಕೊಂಡರೆ ನಿಕಿನ್‌ ತಿಮ್ಮಯ್ಯಗೆ ಇನ್ನೂ ಸ್ವಲ್ಪ ವರ್ಷ ವರ್ಷ ಆಡುವ ಅವಕಾಶವಿದೆ. ಸದ್ಯ ದಿಲ್ಲಿಯ ಮೇಜರ್‌ ಧ್ಯಾನ್‌ಚಂದ್‌ ಹಾಕಿ ಸ್ಟೇಡಿಯಂನಲ್ಲಿರುವ ಭವಿಷ್ಯದ ಒಲಿಂಪಿಕ್ಸ್‌ ತಯಾರಿ ನಡೆಸುವ ಶಿಬಿರಕ್ಕೂ ಯಾವುದೇ ಆಟಗಾರರು ಆಯ್ಕೆಯಾಗಿಲ್ಲ. ಸಾಯ್‌ನಲ್ಲೂ ರಾಜ್ಯದ ಯುವ ಆಟಗಾರರು ಪ್ರವರ್ಧಮಾನಕ್ಕೆ ಬರುವ ಸೂಚನೆ ಕಾಣಿಸುತ್ತಿಲ್ಲ. ಹೀಗಿದ್ದ ಮೇಲೆ ಹಿರಿಯ ಆಟಗಾರರ ಬಳಿಕ ರಾಜ್ಯದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವವರು ಯಾರು? ಎನ್ನುವುದು ದೊಡ್ಡ ಪ್ರಶ್ನೆ.

ರಿಯೋವರೆಗೆ ರಾಜ್ಯದ ರಾಜ ನಡಿಗೆ: 1952ರಲ್ಲಿ ಫಿನ್‌ಲೆಂಡ್‌ನ‌ಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಎಂ.ರಾಜಗೋಪಾಲ್‌, ಸಿ.ವ್ಯಾಸಮುತ್ತು, 1960 ರೋಮ್‌ ಒಲಿಂಪಿಕ್ಸ್‌ನಲ್ಲಿ ರಾಜ್ಯದ ವ್ಯಾಸಮುತ್ತು, ವಿ.ಜೆ.ಪೀಟರ್‌ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. 1964 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರ್‌.ಎ.ಕ್ರಿಸ್ಟಿ ಮತ್ತು ವಿ.ಜೆ.ಪೀಟರ್‌ ಭಾರತ ಪರ ಆಡಿದ್ದರು.  1968ರಲ್ಲಿ ನಡೆದ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲೂ ಕ್ರಮವಾಗಿ ಇವರಿಬ್ಬರೇ ಸ್ಥಾನ ಪಡೆದುಕೊಂಡಿದ್ದರು.

Advertisement

1972ರಲ್ಲಿ ನಡೆದ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಮ್ಯಾನುಯಲ್‌ ಫೆಡ್ರಿಕ್‌, ಎಂ.ಪಿ.ಗಣೇಶ್‌, ಬಿ.ಪಿ.ಗೋವಿಂದ ರಾಜ್ಯದಿಂದ ರಾಷ್ಟ್ರೀಯ ತಂಡದ ಪರ ಅಡಿದ್ದರು. 1976ರಲ್ಲಿ ಕೆನಡಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ರಾಜ್ಯದಿಂದ ಬಿ.ಪಿ.ಗೋವಿಂದ ಒಬ್ಬರೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಅಲೆನ್ಸ್‌ ಸ್ಕೋಫೀಲ್ಡ್‌ ಮತ್ತು ಎಂ.ಎಂ.ಸೋಮಯ್ಯ, 1984 ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಎಂ.ಎಂ.ಸೋಮಯ್ಯ ಒಬ್ಬರೇ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

1988 ಸಿಯೋಲ್‌ ಒಲಿಂಪಿಕ್ಸ್‌ನಲ್ಲಿ ಎಂ.ಎಂ.ಸೋಮಯ್ಯ, ಬಿ.ಕೆ.ಸುಬ್ರಹ್ಮಣ್ಯ, ಜ್ಯೂಡ್‌ ಫಿಲಿಕ್ಸ್‌ ಭಾರತ ಪರ ಆಡಿದ ರಾಜ್ಯ ಆಟಗಾರರು, 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಭಾರತ ಪರ ರಾಜ್ಯದ ಆಶಿಶ್‌ ಬಲ್ಲಾಳ್‌, ಎಬಿ.ಸುಬ್ಬಯ್ಯ, ಸಿಎಸ್‌.ಪೂಣಚ್ಚ, ಜೂಡ್‌ ಫಿಲಿಕ್ಸ್‌ ಹಾಗೂ ರವಿ ನಾಯಕರ್‌ ಆಡಿದ್ದಾರೆ. 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಎಬಿ. ಸುಬ್ಬಯ್ಯ, ಅನಿಲ್‌, ಸಾಬು ವರ್ಗಿ ಭಾರತ ತಂಡದಲ್ಲಿದ್ದ ರಾಜ್ಯ ಆಟಗಾರರು.

2004 ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಅರ್ಜುನ್‌ ಹಾಲಪ್ಪ ಹಾಗೂ ಇಗೆ¾ಸ್‌ ಟರ್ಕೆ ಭಾರತ ತಂಡದಲ್ಲಿ ಇಬ್ಬರು ರಾಜ್ಯ ಆಟಗಾರರು. 2012 ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭರತ್‌ ಚೆತ್ರಿ, ಎಸ್‌.ಕೆ.ಉತ್ತಪ್ಪ, ವಿ.ಆರ್‌.ರಘುನಾಥ್‌ ಹಾಗೂ ಎಸ್‌.ವಿ.ಸುನಿಲ್‌ ಸ್ಥಾನ ಪಡೆದುಕೊಂಡಿದ್ದರು. 2016 ರಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಇದೇ ಆಟಗಾರರು ಮತ್ತೆ ಭಾರತ ತಂಡಕ್ಕೆ ಮರು ಆಯ್ಕೆಯಾದರು. ಇವರೊಂದಿಗೆ ರಾಜ್ಯದ ನಿಕಿನ್‌ ತಿಮ್ಮಯ್ಯ ಸ್ಥಾನ ಪಡೆದುಕೊಂಡು ಹೊಸ ಮುಖ ಎನಿಸಿಕೊಂಡಿದ್ದರು.

– ಹೇಮಂತ್‌  ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next