Advertisement
ಮಳೆಯ ಅಧಿಪತಿ ವರುಣಾ ಎಂದು ಕೇಳಿದ್ದೆ. ಎಷ್ಟೋ ಬಾರಿ ಯೋಚಿಸಿದೆ, ಪ್ರಯತ್ನಿಸಿದೆ ನಿನ್ನೊಂದಿಗೆ ಒಮ್ಮೆ ಮಾತನಾಡಬೇಕೆಂದು. ಆದರೆ ನೀನು ನನಗೆ ಸಿಗಲೇ ಇಲ್ಲ. ವಾಟ್ಸಾಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ, ಇನ್ನೂ ಯಾವುದರಲ್ಲೆಲ್ಲ ಪ್ರಯತ್ನಿಸಿದೆ. ಆದರೆ, ನೀನು ನನಗೆ ಸಿಗಲೇ ಇಲ್ಲ. ಇದೋ ಈ ಮೂಲಕ ನಿನ್ನಲ್ಲಿ ಮಾತನಾಡಬೇಕೆಂದಿದ್ದೇನೆ. ನನಗೆ ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಇದೆ. ಯಾಕೀ ಆಕ್ರೋಶ? ಯಾಕೀ ಆವೇಶ? ನಿನ್ನ ಈ ರುದ್ರನರ್ತನದಿಂದ ನೀನು ಸಾಧಿಸಿದ್ದಾದರೂ ಏನು?
Related Articles
Advertisement
ಮಕ್ಕಳು ಶಾಲೆಗೆ ಹೋಗಿದ್ದರಲ್ಲ… ಅವರೆಷ್ಟು ಕಷ್ಟಪಟ್ಟರು ಗೊತ್ತಾ? ಅವರೆಲ್ಲಿದ್ದಾರೆ? ಯಾವ ದಾರಿಯಿಂದ ಬಂದು ನಮ್ಮನ್ನು ಸೇರುತ್ತಾರೆ ಎಂದು ತಿಳಿಯದೆ ಕಂಗಾಲಾಗಿದ್ದೆವು. ಅದೇ ನೆರೆಯ ನೀರಲ್ಲಿ ಮಕ್ಕಳನ್ನು ಹುಡುಕಲು ಮುಳುಗಿಕೊಂಡು ಹೋದೆವು. ಕೊನೆಗೆ ದೂರದಲ್ಲೆಲ್ಲೋ ಯಾರೋ ನಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬರುವುದನ್ನು ಕಂಡು ಕೊಂಚ ನಿಟ್ಟುಸಿರು ಬಿಟ್ಟೆವು. ಆ ಮಕ್ಕಳು ನಮ್ಮ ಮನೆ ಸೇರುವವರೆಗೂ ನಮಗೆ ಸಮಾಧಾನವೇ ಇರಲ್ಲಿಲ್ಲ. ಪಾಪ ಕೆಲಸಕ್ಕೆ ಹೋಗಿದ್ದ ಗಂಡಸರು, ಹೆಂಗಸರು, ಯುವಕರು, ಯುವತಿಯರು, ವೃದ್ಧರು ಎಲ್ಲಾ ನಿನ್ನ ಆವೇಶಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದರು. ಬೆಳಗ್ಗೆ ಮನೆಯಿಂದ ಹೊರಡುವಾಗ ಇದ್ದ ಊರು ಬರುವಾಗ ಅಕ್ಷರಶಃ ಕಡಲಾಗಿತ್ತು. ಇವರನ್ನೆಲ್ಲ ಮನೆಗೆ ತಲುಪಿಸಲು ರಕ್ಷಣಾಪಡೆ, ಅಗ್ನಿಶಾಮಕ ದಳ, ಊರಲ್ಲಿದ್ದ ಯುವಕರು, ಗಂಡಸರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಿನಗೆ ಇದೆಲ್ಲಾ ಹೇಗೆ ಅರ್ಥವಾಗುತ್ತದೆ ಹೇಳು?
ಸಂಜೆಯ ಹೊತ್ತಿಗೆ ಮನೆಗಳಿಗೆ, ಶಾಲೆಗೆ, ಅಂಗಡಿ ಮುಂಗಟ್ಟುಗಳಿಗೆಲ್ಲ ನೀರು ನುಗ್ಗಿ ವಸ್ತುಗಳೆಲ್ಲ ನೀರಲ್ಲಿ ಕೊಚ್ಚಿ ಹೋಯಿತು. ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ. ಎಲ್ಲರ ಮನೆಯ ಬಾವಿ, ಸಂಪು ಎಲ್ಲ ನೀರು ನುಗ್ಗಿ ಕುಡಿಯಲು ನೀರಿಲ್ಲದಂತಾಯಿತು. ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಸಾಧ್ಯವಾಗದ ಮನೆಮಂದಿಯನ್ನು ದೋಣಿಯ ಮೂಲಕ ರಕ್ಷಣಾ ಸಿಬ್ಬಂದಿಗಳು ಅವರನ್ನು ಇನ್ನೊಂದೆಡೆಗೆ ಸ್ಥಳಾಂತರಿಸಿದರು. ಜೀವವೊಂದು ಉಳಿದರೆ ಸಾಕೆಂಬಂತೆ ಉಟ್ಟಬಟ್ಟೆಯಲ್ಲೇ ಹೊರಟರು. ಆದರೂ ನೀನು ಕರುಣೆ ತೋರಲಿಲ್ಲ. ನಿನ್ನ ಆವೇಶ ಮುಂದುವರಿದೇ ಇತ್ತು. ರಾತ್ರಿಯೆಲ್ಲ ಆತಂಕದಿಂದಲೇ ಕಳೆದೆವು.
ಅಲ್ಲ, ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದೆಯಲ್ಲ? ಇದರಿಂದ ನಿನಗೇನು ಸಿಕ್ಕಿತು? ಮನೆಯಿಂದ ಹೊರಹೋಗಿದ್ದ ಮನೆಮಂದಿಯೆಲ್ಲ ಪರದಾಡುವಂತಾಯಿತ್ತಲ್ಲ? ಯಾರಿಂದ? ನಿನ್ನಿಂದ. ಯಾರದ್ದೋ ಮಕ್ಕಳನ್ನು, ಯಾರದ್ದೋ ತಾಯಿಯನ್ನು, ಅಣ್ಣ ತಮ್ಮಂದಿರನ್ನು ನಿನ್ನ ಆಕ್ರೋಶಕ್ಕೆ ಬಲಿ ತೆಗೆದುಕೊಂಡೆಯಲ್ಲ? ಯಾಕಿಷ್ಟು ಕಟುಕನಾದೆ. ಏನೂ ಅರಿಯದ ಜೀವಗಳು ಅನ್ಯಾಯವಾಗಿ ಪ್ರಾಣಬಿಟ್ಟವು. ಇದರಿಂದ ನಿನಗೇನು ಲಾಭವಾಯಿತು. ಮರುದಿನ ನಾವೆಲ್ಲ ಊಟಕ್ಕೂ, ನೀರಿಗೂ ಪರಿತಪಿಸುವಂತಾಯಿತಲ್ಲ ಇದಕ್ಕೆ ನೀನೇನು ಹೇಳುತ್ತೀಯ? ನಿನ್ನಿಂದ ನಾವು ಅನುಭವಿಸಿದ್ದು, ನಾವು ಪಟ್ಟ ಕಷ್ಟ ಒಂದಾ ಎರಡಾ? ಅಬ್ಬಬ್ಟಾ , ಇದನ್ನೆಲ್ಲ ನೆನೆದರೆ ಈಗಲೂ ಮೈ ಜುಮ್ಮನ್ನುತ್ತದೆ.
ವರುಣ, ಆದರೂ ನೀನು ಗೆದ್ದೆ ಎಂದು ಬೀಗಬೇಡ. ನಿನ್ನಿಂದಾಗಿ ಉಂಟಾದ ನೆರೆ ಅಕ್ಕಪಕ್ಕದವರಲ್ಲಿದ್ದ ಎಷ್ಟೋ ವರ್ಷಗಳ ವೈಷಮ್ಯವನ್ನು ಮರೆಸಿತು. ದ್ವೇಷ ಬಿಟ್ಟು ಒಬ್ಬರಿಗೊಬ್ಬರು ಎಲ್ಲ ರೀತಿಯ ಸಹಾಯಕ್ಕೂ ಮುಂದಾದರು. ಯಾವುದೇ ಧಾರ್ಮಿಕ ಮುಖಂಡರಿಂದ ಸಾಧಿಸಲಾಗದ ಕೋಮು ಸೌಹಾರ್ದತೆ, ಸಾಮರಸ್ಯ ಸಾಧ್ಯವಾಯಿತು. ಜನರೆಲ್ಲ ಆ ಜಾತಿ, ಈ ಜಾತಿಯೆಂಬ ನೆನಪೇ ಆಗದೆ ಕೇವಲ ಮನುಷ್ಯ ಜಾತಿಯೆಂಬ ಸಹಾಯಕ್ಕೆ ನಿಂತೆವು. ನಿಜವಾದ ಮಾನವೀಯತೆ ಆ ಸಂದರ್ಭದಲ್ಲಿ ವಿಜೃಂಭಿಸಿತು.
ಅದಕ್ಕಾದರೂ ನಿನಗೊಂದು ಥಾಂಕ್ಸ್ !ಆದರೆ, ನಡುರಾತ್ರಿಯಾಗುತ್ತಿದ್ದಂತೆ ನೀನು ಯಾಕೋ ಶಾಂತನಾಗತೊಡಗಿದೆ. ನನ್ನ ಮನಸ್ಸಿನಲ್ಲಿದ್ದ ಉದ್ವೇಗವನ್ನು ಹತೋಟಿಗೆ ತಂದು ನಾನು ಯೋಚಿಸಿದೆ. ತಪ್ಪು ಕೇವಲ ನಿನ್ನದಲ್ಲ ವರುಣ ನಮ್ಮದೂ ಇದೆ. ನಮ್ಮ ಸ್ವಾರ್ಥಕ್ಕಾಗಿ ನೀನು ಹೋಗುವ ದಾರಿಗೆ ಅಡ್ಡಲಾಗಿ ನಿಂತೆವು. ನಮಗೆ ಬೇಕಾದ ಕಟ್ಟಡಗಳನ್ನು ನಮ್ಮ ಇಷ್ಟ ಪ್ರಕಾರ ನಿನ್ನ ದಾರಿಗೆ ಅಡªವಾಗಿ ಕಟ್ಟಿಕೊಂಡೆವು. ಈ ಪ್ರಪಂಚದಲ್ಲಿ ನಮ್ಮಷ್ಟೇ ಹಕ್ಕು ನಿನಗೂ ಇತ್ತು. ನಿನಗೆ ಹರಿದುಹೋಗಲು ದಾರಿ ಮಾಡಿಕೊಡದೆ ನಿನ್ನ ದಾರಿಗೆ ನಿರುಪಯೋಗ ವಸ್ತುಗಳು, ಕಸಕಡ್ಡಿಗಳನ್ನು ತುಂಬಿಸಿ ಬಿಟ್ಟೆವು. ಅದಕ್ಕಾಗಿ ನೀನು ನಿನ್ನ ಹಕ್ಕನ್ನು ಕೇಳಿದೆಯೋ ಏನೋ? ನಮ್ಮನ್ನು ಎಚ್ಚರಿಸಿಬಿಟ್ಟೆ ವರುಣ. ಅದೋ ನೋಡು ಜನರೆಲ್ಲ ತತ್ತರಿಸಿದ್ದಾರೆ, ಅಧಿಕಾರಿಗಳು ಎಚ್ಚೆತ್ತಿದ್ದಾರೆ ನಿನ್ನ ಸುಗಮ ಪ್ರಯಾಣಕ್ಕಾಗಿ ರಾಜಕಾಲುವೆಯನ್ನು ಸಿಂಗರಿಸುತ್ತಿದ್ದಾರೆ. ನಾವು ನಿನ್ನ ದಾರಿಗೆ ಅಡ್ಡಿ ಬರಬಾರದು ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. ಇನ್ನಾದರೂ ರಾಜಮಾರ್ಗದಲ್ಲೇ ಹರಿದುಹೋಗು. ಅಬ್ಬರಿಸಿ ಬೊಬ್ಬಿರಿಯಬೇಡ. ಭಯವಾಗುತ್ತದೆ. ಶಾಂತನಾಗಿ ಹರಿದು ಹೋಗು ವರುಣ ! ಪಿನಾಕಿನಿ ಪಿ. ಶೆಟ್ಟಿ
ಸ್ನಾತಕೋತ್ತರ ಪದವಿ, ಕೆನರಾ ಕಾಲೇಜು, ಮಂಗಳೂರು