Advertisement

ಎಲ್‌ಇಡಿಯ ಬೆಳ್ಳಿ ಬೆಳಕು ಬೇಡ, ಸ್ವರ್ಣ ಬೆಳಕಿಗಾಗಿ ಹುಡುಕಾಟ!

06:00 AM Sep 24, 2017 | |

ಮೈಸೂರು: ಕಣ್ಣಿಗೆ ಆನಂದ ನೀಡುವ ಮೈಸೂರು ಅರಮನೆಯ ಜಗಮಗ ದೀಪಗಳಿಗೆ ಈಗ ಬದಲಾವಣೆಯ ಸಮಯ. ಕರೆಂಟ್‌ ಉಳಿತಾಯಕ್ಕಾಗಿ ದೇಶಾದ್ಯಂತ ಎಲ್‌ಇಡಿ ಬಲ್ಬ್ಗಳಿಗೆ ಮೊರೆ ಹೋಗಿರುವುದರಿಂದ ಮೈಸೂರಿನಲ್ಲೂ ಇವೇ ದೀಪಗಳನ್ನು ಬೆಳಗಿಸುವ ಬಗ್ಗೆ ಪ್ರಯೋಗಾತ್ಮಕವಾಗಿ ಪರೀಕ್ಷೆ ನಡೆಸಿ, ಕಡೆಗೆ ಕೈಬಿಡಲಾಗಿದೆ.

Advertisement

ಸದ್ಯ ಅರಮನೆಯ ಈ ದೀಪಾಲಂಕಾರಕ್ಕೆ 75 ವರ್ಷಗಳ ಸಂಭ್ರಮ. ಈ ಹೊತ್ತಲ್ಲೇ ಸದ್ಯ ಇರುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ಬದಲಿಸಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲು ಮುಂದಾಗಿದೆ. ಆದರೆ ಮೂರು ವರ್ಷಗಳ ಹಿಂದೆ ಬದಲಿಸಲು ಹೋಗಿ, ಬೆಳ್ಳಿವರ್ಣದ ಆತಂಕದಿಂದ ಸುಮ್ಮನಾಗಿತ್ತು.

ಎಲ್‌ಇಡಿ ಬಲ್ಬ್ ಸಿಕ್ತಿಲ್ಲ: ಈಗಿರುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ತೆಗೆದು ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಿದರೆ, ಸ್ವರ್ಣವರ್ಣದಿಂದ ಜಗಮಗಿಸುವ ಅರಮನೆ, ಸಿಲ್ವರ್‌ ಬಣ್ಣಕ್ಕೆ ತಿರುಗುತ್ತದೆ ಎಂಬ ಕಾರಣಕ್ಕೆ ಆ ಪ್ರಸ್ತಾವನೆ ಕೈಬಿಡಲಾಗಿದೆ. ಸದ್ಯ ಸ್ವರ್ಣವರ್ಣದ ಎಲ್‌ಇಡಿ ಬಲ್ಬ್ ತಯಾರಿಸುವ ಕಂಪನಿಗಳನ್ನು ಹುಡುಕಲಾಗುತ್ತಿದೆ. ಅರಮನೆ ಮಂಡಳಿ ಈಗಾಗಲೇ ಎಲ್‌ಇಡಿ ಬಲ್ಬ್ ತಯಾರಿಸುವ ಹಲವಾರು ಪ್ರತಿಷ್ಠಿತ ಕಂಪನಿಗಳನ್ನು ಸಂಪರ್ಕಿಸಿದ್ದು, ಗೋಲ್ಡನ್‌ ಶೇಡ್‌ನ‌ ಎಲ್‌ಇಡಿ ಬಲ್ಬ್ ಸಿಕ್ಕರೆ ಭವಿಷ್ಯದಲ್ಲಿ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗೆ ಬದಲಾಗಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗುತ್ತದೆ.

ಆಗ ಏನಾಗಿತ್ತು?: ಮೂರು ವರ್ಷಗಳ ಹಿಂದೆ ಇನ್‌ಕ್ಯಾಂಡಿಸೆಂಟ್‌ಬಲ್ಬ್ಗಳನ್ನು ಎಲ್‌ಇಡಿ ಬಲ್ಬ್ಗೆ ಪರಿವರ್ತಿಸುವ ತೀರ್ಮಾನ ಕೈಗೊಂಡಾಗ ಫಿಲಿಪ್ಸ್‌ ಕಂಪನಿ ಮುಂದೆ ಬಂದಿತ್ತು. ಇದು ಪ್ರಾಯೋಗಿಕವಾಗಿ ಅರಮನೆ ಆವರಣದಲ್ಲಿನ ಶ್ರೀಭುವನೇಶ್ವರಿ ದೇವಾಲಯದಲ್ಲಿ ಎರಡು ಸಾಲು ಬಲ್ಬ್ ತೆಗೆದು ಎಲ್‌ಇಡಿ ಬಲ್ಬ್ಗಳನ್ನು ಹಾಕಿತು. ಆದರೆ, ಈ ಬಲ್ಬ್ಗಳಿಂದ ಬಂದ ಬೆಳಕು ಸ್ವರ್ಣವರ್ಣಕ್ಕೆ ಬದಲಾಗಿ ಬೆಳ್ಳಿವರ್ಣದಂತೆ ಕಾಣಿಸಿತು. ಹೀಗಾಗಿ ಎಲ್‌ಇಡಿ ಬಲ್ಬ್ಗಳ ಅಳವಡಿಸುವ ಪ್ರಸ್ತಾವನೆ ಕೈಬಿಟ್ಟಿತು.

ದೀಪಾಲಂಕಾರಕ್ಕೆ 75 ವರ್ಷ
ನವರಾತ್ರಿಯ 10 ದಿನ ಮತ್ತು ವರ್ಷದ ಎಲ್ಲ ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ ರಾತ್ರಿ 7 ರಿಂದ 8ರ ವರೆಗೆ ಜಗಮಗಿಸುವ ಸ್ವರ್ಣವರ್ಣದ ದೀಪಾಲಂಕಾರಕ್ಕೆ ಈಗ 75 ವರ್ಷದ ಸಂಭ್ರಮ. ಸ್ವಾತಂತ್ರ್ಯ ಪೂರ್ವದ 1942ರ ಸುಮಾರಿನಲ್ಲಿ ಮೈಸೂರು ಯದುವಂಶದ ಕೊನೆಯ ರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ಮೈಸೂರು ಅರಮನೆಗೆ ವಿದ್ಯುತ್‌ ದೀಪಾಲಂಕಾರ ಮಾಡಿಸಲಾಯಿತು.

Advertisement

ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್‌ಗಳನ್ನು ಜೋಡಿಸಿ ಅಂದಾಜು ಒಂದು ಲಕ್ಷ ಸ್ಕೂ$› ಟೈಪ್‌ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ 30 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಯಿತು. ಸದ್ಯ 15 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಗಿದೆ.

ಮೈಸೂರು ಅರಮನೆಗೆ ಅನಿಯಮಿತವಾಗಿ ವಿದ್ಯುತ್‌ ಪೂರೈಸಲು 1000 ಕೆ.ವಿಯ 2 ಹಾಗೂ 500 ಕೆ.ವಿಯ 2 ಟ್ರಾನ್ಸ್‌ಫಾರ್ಮರ್‌ಗಳನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ ಅರಮನೆ ಆವರಣದಲ್ಲಿ ಸ್ಥಾಪಿಸಿದ್ದು, ಇದರಿಂದ 11 ಕೆ.ವಿ/ 250 ವ್ಯಾಟ್‌ ವಿದ್ಯುತ್‌ ನಿರಂತರವಾಗಿ ಪೂರೈಕೆಯಾಗುತ್ತದೆ. ಅರಮನೆ ದೀಪಾಲಂಕಾರಕ್ಕೆ ವಾರ್ಷಿಕ 6,10,00 ಯೂನಿಟ್‌ ವಿದ್ಯುತ್‌ ಬಳಸಿಕೊಳ್ಳಲಾಗುತ್ತಿದ್ದು. ಇದಕ್ಕಾಗಿ ಮೈಸೂರು ಅರಮನೆ ಮಂಡಳಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗೆ ವಾರ್ಷಿಕ 77 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುತ್ತದೆ.

ನಿರ್ವಹಣೆಗಾಗಿ ಮೂವರು:
ಅರಮನೆಯ ದೀಪಾಲಂಕಾರ ವ್ಯವಸ್ಥೆಯಾಗಿಯೇ ಅರಮನೆಯ ಪವರ್‌ ಹೌಸ್‌ನಲ್ಲಿ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರಮನೆ ಹಾಗೂ ಗೇಟ್‌ಗಳಿಗೆ ಮೂರು ಪ್ರತ್ಯೇಕ ಸ್ವಿಚ್‌ಗಳಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಈ ಮೂವರು ಸಿಬ್ಬಂದಿ ಏಕಕಾಲಕ್ಕೆ ಮೂರು ಸ್ವಿಚ್‌ಗಳನ್ನು ಹಾಕಿದ ಕೂಡಲೇ ಇಡೀ ಅರಮನೆ ಸ್ವರ್ಣವರ್ಣದಿಂದ ಜಗಮಗಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ.

ನಿರ್ವಹಣೆ ನಿರಂತರ: ಅರಮನೆಯ ಗೋಪುರ ಹಾಗೂ ಹೊರಭಾಗದಲ್ಲಿ ವಿದ್ಯುತ್‌ ಬಲ್ಬ್ಗಳನ್ನು ಅಳವಡಿಸಿರುವುದರಿಂದ ಹಕ್ಕಿ-ಪಕ್ಷಿಗಳು ಕುಳಿತು ಹಾಳಾಗುವುದು, ಮಳೆ-ಗಾಳಿಗೆ ಬಿದ್ದು ಹಾಳಾಗುವುದು ಸೇರಿದಂತೆ ವಾರ್ಷಿಕ 15 ರಿಂದ 20 ಸಾವಿರ ಬಲ್ಬ್ಗಳನ್ನು ನಿರಂತರವಾಗಿ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ಅರಮನೆ ಮಂಡಳಿಯ ಎಇಇ ಸತೀಶ್‌.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next