Advertisement

ಕಳಪೆ ಕಾಮಗಾರಿಗೆ ಬಿಲ್‌ಪಾವತಿ ಬೇಡ: ತಿಪ್ಪಾರೆಡ್ಡಿ

11:55 AM Jun 20, 2018 | Team Udayavani |

ಚಿತ್ರದುರ್ಗ: ನಗರದಲ್ಲಿ ನಡೆದಿರುವ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ. ಲೋಪದೋಷ ಸರಿಪಡಿಸುವವರೆಗೂ ಬಿಲ್‌ ಪಾವತಿ ಮಾಡಬಾರದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ನಗರಸಭೆ
ಪೌರಾಯುಕ್ತ ಚಂದ್ರಪ್ಪ ಅವರಿಗೆ ಸೂಚಿಸಿದರು.

Advertisement

ನಗರದ ಕೆಳಗೋಟೆಯ ಹೌಸಿಂಗ್‌ ಬೋರ್ಡ್‌ ಕಾಲೋನಿಯಲ್ಲಿ ನಡೆಯುತ್ತಿರುವ ಉದ್ಯಾನವನ ಅಭಿವೃದ್ಧಿ ಪರಿಶೀಲಿಸಿದ ನಂತರ ಮಾತನಾಡಿದ ಶಾಸಕರು, ಚಿತ್ರದುರ್ಗ ನಗರಕ್ಕೆ ಅಮೃತ್‌ ನಗರ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ.

ಗುಣಮಟ್ಟದ ಕಾಮಗಾರಿಗೆ ಸೂಚಿಸಲಾಗಿದೆ. ಆದಾಗ್ಯೂ ಕಾಮಗಾರಿ ಕಳಪೆಯಾಗಿದೆ. ಇಲ್ಲಿನ ಉದ್ಯಾನವನದಲ್ಲಿ 50 ಲಕ್ಷ  ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ನಗರದ ಐಯುಡಿಪಿ ಲೇಔಟ್‌ನ ಎರಡನೇ ಕ್ರಾಸ್‌ನ
ಉದ್ಯಾನವನಕ್ಕೆ 50 ಲಕ್ಷ, 11ನೇ ಕ್ರಾಸ್‌ನ ಉದ್ಯಾನವನಕ್ಕೆ 70 ಲಕ್ಷ, ರಾಜೇಂದ್ರ ನಗರದಲ್ಲಿನ ಪಾರ್ಕ್‌ಗೆ 50 ಲಕ್ಷ ಹಾಗೂ ಯೂನಿಯನ್‌ ಪಾರ್ಕ್‌ಗೆ 70 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಚಿತ್ರದುರ್ಗ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಸರಬರಾಜಿಗೆ 112 ಕೋಟಿ ರೂ. ಬಿಡುಗಡೆಯಾಗಿದೆ.
ಈ ಅನುದಾನದಲ್ಲಿ ವಾಣಿವಿಲಾಸ ಸಾಗರ,  ತಿಸಾಗರದಿಂದ ನೀರು ಪೂರೈಕೆ ಪೈಪ್‌ಲೈನ್‌ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದರು.

ಯೂನಿಯನ್‌ ಪಾರ್ಕ್‌ನಲ್ಲಿ ಎಂಬತ್ತರ ದಶಕದಲ್ಲಿ ಸಂಜೆ ಸಮಯದಲ್ಲಿ ಸಾವಿರಾರು ಜನರು ವಾಯುವಿಹಾರಕ್ಕೆ ಬರುತ್ತಿದ್ದರು. ಅಲ್ಲಿ ಉತ್ತಮ ಹುಲ್ಲು ಹಾಸು, ಕಲರ್‌ ಫೌಂಟೈನ್‌ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಸಂಜೆ 5ರಿಂದ ರಾತ್ರಿ 9 ಗಂಟೆವರೆಗೆ ರೇಡಿಯೋ ಕಾರ್ಯಕ್ರಮಗಳು ಬಿತ್ತರವಾಗುತ್ತಿದ್ದವು. ಇದನ್ನು ಕೇಳಿಕೊಂಡು ಜನರು
ಸಂಭ್ರಮಿಸುತ್ತಿದ್ದರು ಎಂದು ನೆನಪಿಸಿಕೊಂಡರು.

Advertisement

ಯೂನಿಯನ್‌ ಪಾರ್ಕಿನಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದೆ. ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪಾರ್ಕ್‌ನ ವಾತಾವರಣವೇ ಹಾಳಾಗಿದೆ. ಹಾಗಾಗಿ ಈಗ ಅಮೃತ್‌ ಸಿಟಿ ಯೋಜನೆಯಡಿ
ಬಿಡುಗಡೆಯಾಗಿರುವ ಅನುದಾನದಲ್ಲಿ ಸಮಗ್ರ ಅಭಿವೃದ್ಧಿ ಮಾಡಬೇಕು ಎಂದರು.

ನಗರದ ನಿವಾಸಿಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಿದ್ದರೂ ನಿವೇಶನಗಳು ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಯಾರಿಗೂ ನಿವೇಶನ ಅಥವಾ ಮನೆಗಳನ್ನು ನೀಡಿಲ್ಲ.  ಮುಂದಿನ ದಿನಗಳಲ್ಲಿ ಈ ಕುರಿತು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.

ಇಂಜಿನಿಯರ್‌ಗಳಾದ ವಿಶ್ವನಾಥ್‌, ಕೃಷ್ಣಮೂರ್ತಿ, ರೇವಣಸಿದ್ದಪ್ಪ, ಗುತ್ತಿಗೆದಾರ ಜಯಣ್ಣ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next