Advertisement
ಈ ಪೈಕಿ ಶೇ. 50ರಷ್ಟು ಅರ್ಜಿಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಿಂದ ಬಂದಿದ್ದರೆ, ಉಳಿದವು ಇತರ ಮೂರೂ ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಾವು ಈ ಮೊದಲು ಸಲ್ಲಿಸಿದ್ದ ವರ್ಗಾವಣೆ ರದ್ದುಗೊಳಿಸಿ, ಯಥಾಸ್ಥಿತಿಯಲ್ಲಿ ಮುಂದುವರಿಸಲು ಮನವಿ ಮಾಡಿದ್ದಾರೆ.
Related Articles
Advertisement
ಚಕಾರ ಎತ್ತದ ಅಧಿಕಾರಿಗಳು; ಚಿಂತೆಗೀಡಾದ ನೌಕರರು: ಈ ಮಧ್ಯೆ ಬಯಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೌಕರರು ಅನಾಥರಾಗಿದ್ದಾರೆ. ಸಾರಿಗೆ ನೌಕರರ ಅಂತರ ನಿಗಮಗಳ ವರ್ಗಾವಣೆಗೆ ಕೌನ್ಸೆಲಿಂಗ್ ನಡೆದು ಸರಿಯಾಗಿ ಒಂದು ವರ್ಷ (2017ರ ಡಿ.) ಕಳೆದಿದೆ. ಸ್ಥಳ ನಿಯೋಜನೆ ಮಾಡಲಾಗಿದೆ.
ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಬಿಎಂಟಿಸಿ ನೌಕರರ ನೇಮಕಾತಿ ಪ್ರಕ್ರಿಯೆ ಮುಗಿದ ತಕ್ಷಣ ಬಿಡುಗಡೆ ಪತ್ರ ನೀಡುವುದಾಗಿ ನಿಗಮವು ಅವರೆಲ್ಲರಿಗೂ ಭರವಸೆ ನೀಡಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡು ಬಿಎಂಟಿಸಿಯಿಂದ ಸಾವಿರಕ್ಕೂ ಅಧಿಕ ನೌಕರರು ಕೆಎಸ್‌ಆರ್‌ಟಿಸಿಗೂ ಬಂದಾಗಿದೆ. ಆದಾಗ್ಯೂ ಈವರೆಗೆ ವರ್ಗಾವಣೆ ಬಗ್ಗೆ ಚಕಾರ ಎತ್ತದಿರುವುದು ಕೆಎಸ್‌ಆರ್‌ಟಿಸಿ ನೌಕರರನ್ನು ಚಿಂತೆಗೀಡುಮಾಡಿದೆ.
ಇದ್ಯಾವ ನ್ಯಾಯ: ಬಿಎಂಟಿಸಿಯಿಂದ ತಾಂತ್ರಿಕ ಸಿಬ್ಬಂದಿ ಬರುವವರೆಗೆ ಅಥವಾ ತಾಂತ್ರಿಕ ಸಿಬ್ಬಂದಿ ನೇಮಕಾತಿ ಮಾಡಿಕೊಂಡ ನಂತರ ಬಿಡುಗಡೆಗೊಳಿಸುವುದಾಗಿ ಈ ಹಿಂದೆ ಕೆಎಸ್‌ಆರ್‌ಟಿಸಿ ಮುಖ್ಯ ಯಾಂತ್ರಿಕ ಅಭಿಯಂತರರು ಲಿಖೀತವಾಗಿ ಭರವಸೆ ನೀಡಿದ್ದಾರೆ. ಇವೆರಡೂ ಪ್ರಕ್ರಿಯೆ ಈಗ ಪೂರ್ಣಗೊಂಡಿವೆ.
ಈ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶದಂತೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ ನೌಕರರಿಗೆ ಮೇಲಧಿಕಾರಿಗಳು “ಯೂ-ಟರ್ನ್’ ಹೊಡೆಯುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ನೇಮಕಾತಿ ಪ್ರಕ್ರಿಯೆವರೆಗೂ ಕಾಯುವುದು ಅನಿವಾರ್ಯ ಎನ್ನುತ್ತಿದ್ದಾರೆ. ಇದ್ಯಾವ ನ್ಯಾಯ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ನೌಕರರು ಆರೋಪಿಸುತ್ತಾರೆ.
ಸಿಗದ ಬಿಡುಗಡೆ ಆದೇಶ: ಹತ್ತು ವರ್ಷಕ್ಕೂ ಅಧಿಕ ಕಾಲ ಒಂದೇ ಕಡೆ ಸೇವೆ ಸಲ್ಲಿಸಿದವರಿಗೆ ಸೇವಾ ಜೇಷ್ಠತೆ ಆಧರಿಸಿ ಅಂತರ ನಿಗಮಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದಕ್ಕೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಿಂದ ಅತ್ಯಧಿಕ ಅರ್ಜಿಗಳು ಬಂದವು.
ಪ್ರತಿಯಾಗಿ ವಾಯವ್ಯ ಮತ್ತು ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ ವರ್ಗಾವಣೆ ಬಯಸಿದವರ ಸಂಖ್ಯೆ ಅತ್ಯಲ್ಪ. ಇದೇ ಕಾರಣಕ್ಕೆ ನೌಕರರಿಗೆ ಬಿಡುಗಡೆ ಆದೇಶ ನೀಡಿಲ್ಲ. ಈ ಮಧ್ಯೆ ಬಿಎಂಟಿಸಿಯಿಂದ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಕೆಎಸ್‌ಆರ್‌ಟಿಸಿಯಲ್ಲಿ 2016ರಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ.
ವಿಡಿಯೋ ರೆಕಾರ್ಡಿಂಗ್: ಅಂತರ ನಿಗಮಗಳ ವರ್ಗಾವಣೆ ನಮ್ಮ ಪಾಲಿಗೆ ನೀರಿನಲ್ಲಿನ ಚಂದ್ರನ ಬಿಂಬ. ಎದುರಿಗೆ ಕಾಣುತ್ತದೆ. ಆದರೆ, ಹಿಡಿಯಲು ಹೋದರೆ ಕೈಗೆ ಸಿಗುವುದಿಲ್ಲ. ಒಂದಿಲ್ಲೊಂದು ನೆಪ ಹೇಳುತ್ತಿದ್ದಾರೆ. ವರ್ಷದ ಹಿಂದೆ ವರ್ಗಾವಣೆ ಆದೇಶ ಪ್ರತಿ ಕೊಟ್ಟಿದ್ದಾರೆ. ಬಿಎಂಟಿಸಿ ನೌಕರರ ವರ್ಗಾವಣೆ ಆಗುತ್ತಿದ್ದಂತೆ ನಿಮಗೂ (ಕೆಎಸ್‌ಆರ್‌ಟಿಸಿ ನೌಕರರಿಗೆ) ಬಿಡುಗಡೆ ಪ್ರತಿ ಕೈಸೇರಲಿದೆ ಎಂದು ಹೇಳಿರುವ ಬಗ್ಗೆ ವಿಡಿಯೊ ರೆಕಾರ್ಡಿಂಗ್ ಕೂಡ ಇದೆ.
ಇದನ್ನು ನಂಬಿ ಕುಟುಂಬಗಳನ್ನು ಆಯಾ ಊರುಗಳಿಗೆ ಶಿಫ್ಟ್ ಮಾಡಿದ್ದೇವೆ. ಈಗ ಕೇಳಿದರೆ, ಮನಬಂದಂತೆ ಉತ್ತರಿಸುತ್ತಾರೆ. ಅತ್ತ ಅಭದ್ರತೆಯಲ್ಲಿ ಕುಟುಂಬಗಳಿವೆ. ಇತ್ತ ನಾವು ಅತಂತ್ರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಧೋರಣೆಯು ಕೆಲ ನೌಕರರಲ್ಲಿ ಮಾನಸಿಕ ಖನ್ನತೆಗೆ ಕಾರಣವಾಗುತ್ತಿದೆ ಎಂದು ಚಿಕ್ಕಮಗಳೂರು ಡಿಪೋದ ತಾಂತ್ರಿಕ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
ಅಂತರ ನಿಗಮಗಳ ವರ್ಗಾವಣೆ ಬೇಡ ಎಂದೂ 300 ಅರ್ಜಿಗಳು ಬಂದಿವೆ. ಈ ಅರ್ಜಿಗಳು ಕೂಡ ಈಗ ಸರ್ಕಾರದ ಪರಿಶೀಲನೆ ಹಂತದಲ್ಲಿವೆ. ಆ ಪ್ರಕ್ರಿಯೆಯು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ಆದಷ್ಟು ಬೇಗ ವರ್ಗಾವಣೆ ಬಯಸಿದ ನೌಕರರನ್ನು ಬಿಡುಗಡೆಗೊಳಿಸಲಾಗುವುದು. -ಶಿವಯೋಗಿ ಕಳಸದ, ಕೆಎಸ್‌ಆರ್‌ಟಿಸಿ ಎಂಡಿ * ವಿಜಯಕುಮಾರ್ ಚಂದರಗಿ