ಕಲ್ಲಿಕೋಟೆ: ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ನಡೆದ ನಂತರದಲ್ಲಿ ಬುರ್ಖಾ ನಿಷೇದ ಬೆನ್ನಲ್ಲೇ ಕೇರಳದ ಕಲ್ಲಿಕೋಟೆಯ ಮುಸ್ಲಿಂ ಶಿಕ್ಷಣ ಸಂಸ್ಥೆ (ಎಂಇಎಸ್) ಕೂಡ ತನ್ನ ಕ್ಯಾಂಪಸ್‌ನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ಬಗೆಯ ಮುಖ ಮುಚ್ಚುವ ವಸ್ತ್ರ ನಿಷೇಧಿಸಿ ಆದೇಶ ಹೊರಡಿಸಿದೆ. ಭಾರತದಲ್ಲೂ ಬುರ್ಖಾ ನಿಷೇಧಿಸಬೇಕು ಎಂಬುದಾಗಿ ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಕೆಲವೇ ದಿನಗಳ ಹಿಂದೆ ಆಗ್ರಹಿಸಲಾಗಿತ್ತು.
ಇದಕ್ಕೆ ಕೆಲವು ಪಕ್ಷಗಳು ಬೆಂಬಲವನ್ನೂ ವ್ಯಕ್ತಪಡಿಸಿದ್ದವು. ಇದಕ್ಕೂ ಮುಂಚೆಯೇ ಮುಸ್ಲಿಂ ಆಡಳಿತ ಮಂಡಳಿ ಯನ್ನೇ ಹೊಂದಿರುವ ಶಿಕ್ಷಣ ಸಂಸ್ಥೆಯೊಂದು ಈ ಆದೇಶ ಹೊರಡಿಸಿದ್ದು ಅತ್ಯಂತ ಮಹತ್ವದ ಸಂಗತಿಯಾಗಿದೆ.
ಆದೇಶದಲ್ಲಿ ಬುರ್ಖಾ ಎಂಬ ಪದವನ್ನು ಶಿಕ್ಷಣ ಸಂಸ್ಥೆ ಉಲ್ಲೇಖ ಮಾಡಿಲ್ಲ. ಬದಲಿಗೆ ಮುಖ ಮುಚ್ಚುವ ಬಟ್ಟೆಯನ್ನು ಧರಿಸಬಾರದು ಎಂದು ಉಲ್ಲೇಖೀಸ ಲಾಗಿದೆ. ಎಂಇಎಸ್‌ನ ರಾಜ್ಯ ಅಧ್ಯಕ್ಷ ಡಾ| ಫಜಲ್ ಗಫೂರ್ ಈ ಆದೇಶವನ್ನು ಹೊರಡಿಸಿದ್ದು, ಇದು 2019-2020ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.
ಈ ಆದೇಶವನ್ನು ಎಂಇಎಸ್ ಆಡಳಿತಕ್ಕೊಳ ಪಡುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಸೂಚಿಸಲಾಗಿದೆ. ಜತೆಗೆ ಮಧ್ಯಪ್ರಾಚ್ಯ ದಲ್ಲಿನ ಇಸ್ಲಾಂ ಪದ್ಧತಿ ಬದಲಾಗಿ ಕೇರಳದಲ್ಲಿನ ಪದ್ಧತಿ ಪಾಲಿಸಬೇಕು ಎಂದು ಅದರಲ್ಲಿ ಸೂಚಿಸಲಾಗಿದೆ. ಈ ಆದೇಶವನ್ನು ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ನಡೆಯುವುದಕ್ಕೂ ಮುನ್ನವೇ ನೀಡಲಾಗಿದೆ ಎಂದು ಫಜಲ್ ಗಫೂರ್ ಹೇಳಿದ್ದಾರೆ. ನೋಟಿಸ್ ದಿನಾಂಕ ಎಪ್ರಿಲ್ 19 ಆಗಿದ್ದು, ಲಂಕಾದಲ್ಲಿ ಎ.23 ರಂದು ದಾಳಿ ನಡೆದಿತ್ತು.