Advertisement

ಒಂದು ಸಮುದಾಯವನ್ನು ದ್ವೇಷಿಸಬಾರದು

06:07 PM Apr 09, 2020 | Suhan S |

ತುಮಕೂರು: ಕೋವಿಡ್ 19 ವೈರಸ್‌ ಹರಡುತ್ತಿರುವ ಕುರಿತು ಒಂದೇ ಸಮುದಾಯವನ್ನು ಗುರಿಯಾಗಿಸುವುದು ತರವಲ್ಲ. ಇಂದು ಕೋವಿಡ್ 19  ವೈರಸ್‌ ಬಂದು ಯಾವುದೋ ಒಂದು ಸಮುದಾಯವನ್ನು ದ್ವೇಷ ಮಾಡುವ ರೀತಿಯಲ್ಲಿ ಬೆಳವಣಿಗೆಗಳಾಗುತ್ತಿವೆ ಇದು ಆಗಬಾರದು ಎಂದು ಮಾಜಿ ಶಾಸಕ ಹಾಗೂ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ತಿಳಿಸಿದರು.

Advertisement

ನಗರದ ಕುಣಿಗಲ್‌ ರಸ್ತೆಯಲ್ಲಿರುವ ಬೀರೇಶ್ವರ ಕನ್ವೆಷನ್‌ ಹಾಲ್‌ನಲ್ಲಿ ಬುಧವಾರ ಆರ್‌.ಆರ್‌. ಅಭಿಮಾನಿ ಬಳಗದಿಂದ ನಿರಾಶ್ರಿತರಿಗೆ, ಅಸಹಾಯಕರಿಗೆ ಹಮ್ಮಿಕೊಂಡಿದ್ದ ಊಟದ ವ್ಯವಸ್ಥೆಗೆ ಬಡವರಿಗೆ ಊಟ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಯಾರೋ ಮಾಡಿದ ಇನ್ನೊಬ್ಬರಿಗೆ ಅನಾನುಕೂಲ ಆಗುವುದು ತಪ್ಪು ಎಂದರು.

ಯಾರೋ ಕೆಲವು ಜನರಿಂದ ತೊಂದರೆಯಾಗಿರಬಹುದು. ಹಿಂದುಗಳಿಂದಲೂ ಆಗಿರಬಹುದು, ಮುಸ್ಲಿಮರಿಂದಲೂ ಆಗಿರಬಹುದು, ಕ್ರಿಶ್ಚಿಯನ್‌ರಿಂದಲೂ ಆಗಿರಬಹುದು, ಆದರೆ ಸಮಾಜದಲ್ಲಿ ಜಾತಿ ನೋಡಿ ರೋಗ ಬರುವುದಿಲ್ಲ, ಬೇರೆ ಬೇರೆ ಕಾರಣಗಳಿಂದ ರೋಗ ಬರುತ್ತದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದೂಷಣೆ ಮಾಡುವಂತಹದ್ದು ತರವಲ್ಲ ಎಂದು ಹೇಳಿದರು.

ಇಂದು ಸುಳ್ಳು ಸುದ್ದಿಗಳನ್ನು ಹರಡುವಂತಹದ್ದು, ಒಂದು ಜಾತಿಯನ್ನು ಗಮನದಲ್ಲಿಟ್ಟು ಕೊಂಡು ಅವರನ್ನು ದ್ವೇಷ ಮಾಡುವಂತಹದ್ದು ಸರಿಯಾದುದಲ್ಲ ಎಂದು ತಿಳಿಸಿದರು. ಕೋವಿಡ್ 19 ವೈರಸ್‌ ಹರಡುವ ಭೀತಿಯಿಂದ ದೇಶವೇ ಲಾಕ್‌ಡೌನ್‌ ಆಗಿದ್ದು, ಈ ವೇಳೆ ಜಿಲ್ಲೆಯಲ್ಲಿ ಅಸಹಾಯಕರು ಯಾವುದೇ ರೀತಿಯ ಕೊರತೆಯನ್ನು ಅನುಭವಿಸಬಾರದು ಎಂದು ಆರ್‌.ಆರ್‌. ಅಭಿಮಾನಿ ಬಳಗವು ಪ್ರತಿನಿತ್ಯ ದಾಸೋಹದ ರೀತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ವಿಎಸ್‌ಎಸ್‌ಎನ್‌ ಸೊಸೈಟಿಗಳಲ್ಲಿ ಪಡಿತರ ವಿತರಣೆಯಾಗುತ್ತಿದೆ. ಇದರ ಜೊತೆಗೆ ಮಾಸ್ಕ್ ಧರಿಸಿ ಪಡಿತರ ನೀಡಬೇಕೆಂದು ಸೂಚನೆ ಕೂಡ ನೀಡಲಾಗಿದ್ದು, ಈಗಾಗಲೇ 1 ಲಕ್ಷ ಮಾಸ್ಕ್ ತರಿಸಿ 50 ಸಾವಿರ ಮಾಸ್ಕನ್ನು ಮಧುಗಿರಿ ತಾಲೂಕಿನಲ್ಲಿ ಸೊಸೈಟಿ ಮೂಲಕ ಹಂಚಲಾಗಿದೆ. ಇನ್ನುಳಿದ 50 ಸಾವಿರ ಮಾಸ್ಕನ್ನು ಇಡೀ ಜಿಲ್ಲಾದ್ಯಂತ ಸೊಸೈಟಿಗಳ ಮೂಲಕ ಹಂಚಲಾಗುತ್ತಿದೆ ಎಂದರು.

Advertisement

ಆರ್‌.ಆರ್‌ ಬಳಗದ ಆರ್‌.ರಾಜೇಂದ್ರ ಮಾತನಾಡಿ, ಕೊರೊನಾ ಲಾಕ್‌ಡೌನ್‌ ನಿಂದ ಊಟ ಇಲ್ಲದೇ ತೀರಾ ಕಷ್ಟಕ್ಕೆ ಸಿಲುಕಿರುವರಿಗೆ ಅವರಿದ್ದಲ್ಲಿಗೆ ಹೋಗಿ ಊಟ ನೀಡುವ ಕೆಲಸದಲ್ಲಿ ನಮ್ಮ ಆರ್‌.ಆರ್‌. ಅಭಿಮಾನಿ ಬಳಗ ಮುಂದಾಗಿದೆ ಎಂದರು.

ಕಳೆದ ಮಾ. 26 ರಿಂದಲೂ ಆರ್‌.ಆರ್‌. ಅಭಿಮಾನಿ ಬಳಗ ದಿಂದ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್‌ ಸಿಬ್ಬಂದಿ, ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗೆ, ಹೋಂಗಾರ್ಡ್ಸ್‌ ಗಳಿಗೆ ನಿರಂತರವಾಗಿ ಬೆಳಗ್ಗೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇದರ ಜೊತೆಗೆ ನಗರವೂ ಸೇರಿದಂತೆ ಜಿಲ್ಲೆಯಲ್ಲಿರುವ ನಿರಾಶ್ರಿತರು, ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದು, ನಿತ್ಯ ದಾಸೋಹದ ಸೇವಾ ಕಾರ್ಯದಲ್ಲಿ ಆರ್‌. ರಾಜೇಂದ್ರ ಮತ್ತು ಬಳಗದವರು ತೊಡಗಿಕೊಂಡಿದ್ದಾರೆ. ಸಂಸದ ಜಿ.ಎಸ್‌. ಬಸವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next