ತಿ.ನರಸೀಪುರ: ವಿವಿಧ ಭಾಷೆ ಮತ್ತು ಧರ್ಮಗಳ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ವೈವಿಧ್ಯತೆಯ ಸಂಸ್ಕೃತಿ ಹಾಗೂ ಆಚರಣೆಗಳನ್ನು ಮಾಡಲಾಗುತ್ತಿದ್ದು, ಏಕತೆಯನ್ನು ತರುವ ನೆಪದಲ್ಲಿ ಸಮುದಾಯಗಳ ನಡುವಿನ ಸಾಮರಸ್ಯವನ್ನು ಕದಡಬಾರದು ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಎಂದು ಕಿವಿಮಾತು ಹೇಳಿದರು.
ಸಮೀಪದ ಮಳವಳ್ಳಿ ತಾಲೂಕಿನ ಪೂರೀಗಾಲಿ ಗ್ರಾಮದ ಪಿಎಲ್‌ಎಲ್ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ “ಮಾನವ ಸಂಸ್ಕೃತಿ: ಸಮಾನತೆ ಮತ್ತು ಘನತೆ’ ಕುರಿತ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಬಹುಸಂಸ್ಕೃತಿಯ ನಾಡಿನಲ್ಲಿ ಏಕ ಸಂಸ್ಕೃತಿಯನ್ನು ತರಲಿಕ್ಕೆ ಸಂಘರ್ಷವನ್ನು ತಂದಿಡುವ ಕೃತ್ಯದಿಂದ ಜನಸಮುದಾಯದ ನಡುವಿನ ವಿವಿಧತೆ ಬಾಂಧವ್ಯಕ್ಕೆ ಧಕ್ಕೆ ತರಬಾರದು ಎಂದು ಸಲಹೆ ನೀಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಅಳಿಯಬೇಕು, ಕರುಣೆ ಪ್ರೀತಿ ವೃದ್ಧಿಸಿ ಮಾನವತೆಯನ್ನು ಎತ್ತಿ ಹಿಡಿಯಬೇಕು. ಸಮುದಾಯದಲ್ಲಿ ಗಂಡು ಹೆಣ್ಣಿನ ನಡುವೆ ಇನ್ನೂ ಭಿನ್ನತೆಯಿದ್ದು, ಹೆಣ್ಣನ್ನು ಸಮಾನವಾಗಿ ಕಾಣುವ ಮುಕ್ತ ಭಾವವಿಲ್ಲದ್ದರಿಂದ ಅಸಮಾನತೆ ಜೀವಂತವಾಗಿದೆ.
ಇಂತಹ ಭಾವನೆ ದೂರವಾಗಬೇಕು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಚೌಕಟ್ಟುಗಳೊಳಗೆ ಸಿಲುಕಿಸಿ ಆಕೆಯನ್ನು ಮಾನಸಿಕವಾಗಿ ಒಪ್ಪಿ ನಡೆಯುವಂತೆ ಮಾಡಲಾಗಿದೆ. ಇದಕ್ಕೆ ಸೀತೆಯೇ ಪ್ರಮುಖ ಉದಾಹರಣೆ. ಈ ಸಂಸ್ಕೃತಿ ತೊಲಗಿ ಎಲ್ಲರ ನಡುವೆ ಸಮಾನತೆ ನೆಲೆಸಿ ತಾರತಮ್ಯ ದೂರವಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ, ಪ್ರಾಂಶುಪಾಲ ಡಾ.ಬಿ.ರಾಜಣ್ಣ, ತಲಕಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಡಾ.ಡಿ.ಎಂ.ರೇವಣ್ಣ, ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.