Advertisement

ಗುಳೆ ಹೋದವರು ಹೊರಗೆ ಹೋಗದಿರಿ

05:33 PM Mar 29, 2020 | Suhan S |

ಕೊಪ್ಪಳ: ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಊರುಗಳಿಗೆ ಗುಳೆ ಹೋಗಿದ್ದ ಜಿಲ್ಲೆಯ ಜನತೆಯೀಗ ತಂಡೋಪತಂಡವಾಗಿ ತವರಿಗೆ ಆಗಮಿಸುತ್ತಿದ್ದಾರೆ. ಇಲ್ಲಿವರೆಗೂ 20,034 ಜನ ಆಗಮಿಸಿದ್ದು, ಅವರೆಲ್ಲರನ್ನೂ ಜಿಲ್ಲಾಡಳಿತ ಆರೋಗ್ಯ ತಪಾಸಣೆ ಮಾಡಿ ಮನೆಯಲ್ಲೇ ಇರುವಂತೆ ಸೂಚನೆ ನೀಡಿದೆ. ಇನ್ನೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಸಂಗಣ್ಣ ಕರಡಿ ಕೊಪ್ಪಳ ನಗರದಲ್ಲಿ ವಿವಿಧೆಡೆ ಪರಿಶೀಲನೆ ನಡೆಸಿ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ ಶುಕ್ರವಾರಕ್ಕೆ 73 ಜನರ ಮೇಲೆ ನಿಗಾ ಇರಿಸಿದೆ. ದುಡಿಮೆ ಅರಸಿ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ವಿವಿಧ ಭಾಗಕ್ಕೆ ತೆರಳಿದ್ದ ಜಿಲ್ಲೆಯ ಕೂಲಿ ಕಾರ್ಮಿಕರು ಕೋವಿಡ್ 19 ವೈರಸ್‌ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ನಿತ್ಯ ವಾಹನ ಹಾಗೂ ಕಾಲ್ನಡಿಗೆಯಲ್ಲಿ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾವುದೇ ಸಾರಿಗೆ ಸೌಕರ್ಯ ಇಲ್ಲದ ಕಾರಣ ದೂರದ ಊರುಗಳಿಂದ ತಲೆ ಮೇಲೆ ಗಂಟು ಹೊತ್ತು ಉರಿ ಬಿಸಿಲಿನಲ್ಲೇ ಕಾಲ್ನಡಿಗೆಯಲ್ಲೇ ಊರುಗಳತ್ತ ಆಗಮಿಸುತ್ತಿದ್ದಾರೆ. ಗುಳೆ ಹೋಗಿದ್ದ 20,034 ಜನರು ವಾಪಾಸ್‌ ಆಗಿದ್ದಾರೆ.

ಇವರಲ್ಲಿ 1,182 ಜನ ನಗರದ ನಿವಾಸಿಗಳಾಗಿದ್ದರೆ, 18,204 ಜನರು ಗ್ರಾಮೀಣ ಪ್ರದೇಶದವರು. ನಗರ ಪ್ರದೇಶದ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಗ್ರಾಪಂ ಟಾಸ್ಕ್ ಫೋರ್ಸ್‌ ಸಮಿತಿಯೂ ವಿಚಾರಣೆಗೊಳಪಡಿಸಿ ವಿವಿಧ ಮಾಹಿತಿ ಪಡೆದು ತಮ್ಮ ಮನೆಗಳಲ್ಲೇ ಇರುವಂತೆ ಸೂಚನೆ ನೀಡುತ್ತಿದ್ದಾರೆ.

ಸ್ವಚ್ಛತೆ ಗಮನಿಸಿದ ಸಂಸದ, ಶಾಸಕರು: ಇನ್ನೂ ಕೋವಿಡ್ 19  ವೈರಸ್‌ ತಡೆಗಾಗಿ ಜಿಲ್ಲಾಡಳಿತವು ಹಗಲಿರುಳು ಶ್ರಮಿಸುತ್ತಿದೆ. ಜಿಲ್ಲಾಮಟ್ಟದ ಅಧಿ ಕಾರಿಗಳ ತಂಡವನ್ನು ರಚಿಸಿ ಉಸ್ತುವಾರಿ ನೀಡಿದೆ. ಪ್ರತಿಯೊಬ್ಬ ಅಧಿಕಾರಿಯೂ ಜನತೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ವಹಿಸಲು ಸೂಚನೆ ನೀಡಿದೆ. ಇನ್ನೂ ಸ್ವತ್ಛತೆಯ ಕುರಿತು ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ನಗರಸಭೆ ಅಧಿಕಾರಿಗಳು, ಸದಸ್ಯರು ಶನಿವಾರ ನಗರದ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು. ಪೌರ ಕಾರ್ಮಿಕರು ನಗರದಲ್ಲಿನ ರಸ್ತೆಗಳನ್ನು ಶುಚಿಗೊಳಿಸಿದ್ದು, ತ್ವರಿತಗತಿಯಲ್ಲಿ ಕೆಲಸದಲ್ಲಿ ತೊಡಗಲು ಜನಪ್ರತಿನಿಧಿಗಳು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next