ಕೊರೊನಾ ಎರಡನೇ ಅಲೆಯ ಭಯದಲ್ಲಿ ಲಸಿಕಾ ಕೇಂದ್ರಗಳ ಬಳಿ ಕಿ.ಮೀ. ಉದ್ದದ ಕ್ಯೂನಲ್ಲಿ ನಿಲ್ಲುತ್ತಿದ್ದ ಜನ, ಆತಂಕ ಕಡಿಮೆಯಾದ ಮೇಲೆ ಲಸಿಕಾ ಕೇಂದ್ರಗಳತ್ತ ಸುಳಿಯುತ್ತಲೇ ಇಲ್ಲ. ಜತೆಗೆ ಕರ್ನಾಟಕದಲ್ಲಿಯೂ 45 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಡೋಸ್ ಪಡೆದು, ಎರಡನೇ ಡೋಸ್ ಪಡೆಯಲು ಬಂದಿಲ್ಲ ಎಂಬ ಸಂಗತಿಯನ್ನು ಸ್ವತಃ ಆರೋಗ್ಯ ಸಚಿವರಾದ ಡಾ| ಕೆ. ಸುಧಾಕರ್ ಅವರೇ ಬಹಿರಂಗಪಡಿಸಿದ್ದಾರೆ.
ಈಗ ಜಗತ್ತಿನಲ್ಲಿ ಕೊರೊನಾ ರೂಪಾಂತರಿಯಾದ ಒಮಿಕ್ರಾನ್ ಭೀತಿ ಆವರಿಸಿರುವ ಹೊತ್ತಿನಲ್ಲಿ ಲಸಿಕೆಗೆ ಮತ್ತೆ ಮಹತ್ವ ಬಂದಿದೆ. ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ 5 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದ ಲಸಿಕೆ ಆಗಿದೆ.
ಲಸಿಕೆ ಪಡೆದಿದ್ದರೆ ಒಮಿಕ್ರಾನ್‌ನ ಅಪಾಯ ಕಡಿಮೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಹೀಗಾಗಿಯೇ ಅವರೂ ಲಸಿಕೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಆದರೂ ದೇಶಾದ್ಯಂತ ಈಗಲೂ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಕಡಿಮೆಯೇ ಇದೆ. ಮೊದಲ ಡೋಸ್ ಪಡೆದವರು, ಎರಡನೇ ಡೋಸ್‌ಗೆ ಬಾರದೇ ಇರುವುದು ಅಥವಾ ಇನ್ನೂ ಒಂದು ಡೋಸ್ ಪಡೆಯದೆಯೇ ಇರುವಂಥ ಬೆಳವಣಿಗೆಗಳೂ ಆಗುತ್ತಿವೆ. ಇದಕ್ಕೆ ಪೂರಕವಾಗಿ ಕೆಲವು ರಾಜ್ಯ ಸರಕಾರಗಳು, ಲಸಿಕೆ ಪಡೆಯದವರಿಗೆ ಸವಲತ್ತುಗಳನ್ನು ನೀಡದೇ ಇರುವಂಥ ತೀರ್ಮಾನಕ್ಕೆ ಬಂದಿದ್ದರೆ ಇನ್ನೂ ಕೆಲವು ರಾಜ್ಯಗಳು ಇದೇ ಹಾದಿಯಲ್ಲಿವೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 8 ರೂ. ಇಳಿಕೆ
ಈ ನಿಟ್ಟಿನಲ್ಲಿ ಕೇರಳ ರಾಜ್ಯ ಗಟ್ಟಿ ತೀರ್ಮಾನಕ್ಕೆ ಬಂದಿದೆ. ಇಲ್ಲಿ ಲಸಿಕೆ ಪಡೆಯದೇ ಇದ್ದು, ಕೊರೊನಾ ಬಂದರೆ ಅಂಥವರಿಗೆ ಸರಕಾರದ ಕಡೆಯಿಂದ ಉಚಿತ ಕೊರೊನಾ ಚಿಕಿತ್ಸೆ ಸಿಗುವುದಿಲ್ಲ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಬಸ್‌ಗಳಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಈ ನಗರದ ಮೇಯರ್ ಹೇಳಿದ್ದಾರೆ. ಲೋಕಲ್ ಟ್ರೈನ್‌ನಲ್ಲೂ ಇದೇ ನಿಯಮ ಜಾರಿಯಾಗಲಿದೆ. ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಲಸಿಕೆ ಪಡೆಯದವರಿಗೆ ಮದ್ಯ ನೀಡದೇ ಇರಲು ತೀರ್ಮಾನಿಸಲಾಗಿದೆ. ಇತ್ತ ಕರ್ನಾಟಕದಲ್ಲೂ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರಕಾರಕ್ಕೆ ಇಂಥದ್ದೇ ಒಂದು ಶಿಫಾರಸು ಮಾಡಿದೆ. ಲಸಿಕೆ ಪಡೆಯದವರಿಗೆ ಬಸ್, ಮೆಟ್ರೋ, ಮಾಲ್‌ಗಳು, ಪಡಿತರ, ಗ್ಯಾಸ್, ನೀರು, ಪೆಟ್ರೋಲ್, ಡೀಸೆಲ್, ವೇತನ, ಪಿಂಚಣಿ ನೀಡಬಾರದು ಎಂದು ಸಲಹೆ ನೀಡಿದೆ. ಸದ್ಯ ಸರಕಾರ ಜನರ ಮನವೊಲಿಕೆ ಮಾಡಿ ಲಸಿಕೆ ನೀಡಲು ಮುಂದಾಗಬೇಕು. ಇದಕ್ಕೂ ಬಗ್ಗದಿದ್ದರೆ ಮೂರನೇ ಅಲೆ ತಡೆಯುವ ಸಲುವಾಗಿ ಇಂಥ ಕಠಿನ ಕ್ರಮ ತೆಗೆದುಕೊಳ್ಳಬಹುದು.
ಇಲ್ಲದಿದ್ದರೆ, ಈಗಾಗಲೇ ಭೀತಿಗೆ ಕಾರಣವಾಗಿರುವ ಒಮಿಕ್ರಾನ್ ಅನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಕೇವಲ ಸರಕಾರಗಳು ಮಾತ್ರ ಕೊರೊನಾ ನಿಯಂತ್ರಣದಲ್ಲಿ ಕೆಲಸ ಮಾಡಬೇಕು, ಇದರಲ್ಲಿ ಜನರ ಪಾತ್ರವೇನೂ ಇಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ. ಕೊರೊನಾ ಬರಬಾರದು ಎಂದಾದರೆ, ಜನರ ಸಹಭಾಗಿತ್ವವೂ ಮುಖ್ಯವಾಗುತ್ತದೆ.