Advertisement

ರಾಜಕೀಯ ಸೇಡಿಗೆ ಆಸ್ಪದ ಬೇಡ

09:00 PM May 27, 2019 | mahesh |

ಉತ್ತರ ಪ್ರದೇಶದ ಅಮೇಠಿಯಲ್ಲಿ ಶನಿವಾರ ರಾತ್ರಿ ಸುರೇಂದ್ರ ಸಿಂಗ್‌ ಎಂಬ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಇದರ ಬೆನ್ನಿಗೆ ಭಾನುವಾರ ರಾತ್ರಿ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಚಂದನ್‌ ಶಾಹು ಎಂಬ ಇನ್ನೋರ್ವ ಬಿಜೆಪಿ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದಾರೆ. ಇವೆರಡೂ ರಾಜಕೀಯ ಹಿಂಸಾಚಾರಕ್ಕೆ ಸಂಬಂಧಪಟ್ಟಿರುವ ಹತ್ಯೆಗಳು ಎನ್ನಲಾಗಿದೆ. ಕಾಂಗ್ರೆಸಿನ ಭದ್ರಕೋಟೆಯಾಗಿದ್ದ ಅಮೇಠಿಯನ್ನು ಬಿಜೆಪಿಯ ಅಭ್ಯರ್ಥಿ ಸ್ಮತಿ ಇರಾನಿ ಈ ಸಲ ಜಿದ್ದಿಗೆ ಬಿದ್ದವರಂತೆ ಎರಡನೇ ಸಲ ಸ್ಪರ್ಧಿಸಿ ಗೆದ್ದುಕೊಂಡಿದ್ದಾರೆ.

Advertisement

ಕಾಂಗ್ರೆಸಿನ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿದ್ದ ರಾಹುಲ್‌ ಗಾಂಧಿ ಮತ್ತು ಸ್ಮತಿ ಇರಾನಿ ನಡುವಿನ ಸ್ಪರ್ಧೆಯಿಂದಾಗಿ ಅಮೇಠಿ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿತ್ತು. ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ, ಪಕ್ಷದ ಪ್ರಥಮ ಪರಿವಾರದ ಸದಸ್ಯರು ಅನಾಯಾಸವಾಗಿ ಗೆದ್ದು ಬರುತ್ತಿದ್ದ ಕ್ಷೇತ್ರ ಈ ಸಲ ಕೈಜಾರಿರುವುದು ಕಾಂಗ್ರೆಸ್‌ಗೆ ಆಘಾತವುಂಟು ಮಾಡಿರುವುದು ನಿಜ. ಆದರೆ ಇದರ ಕಾರಣ ಏನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಎದುರಾಳಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರನ್ನು ಗುರಿ ಮಾಡಿಕೊಂಡು ಹಿಂಸಾಚಾರ ಎಸಗುವುದು ಮಾತ್ರ ಪ್ರಜಾತಂತ್ರಕ್ಕೆ ಶೋಭೆ ತರುವ ನಡೆಯಲ್ಲ.

ಚುನಾವಣಾ ಹಿಂಸಾಚಾರಗಳು ಈಗೀಗ ಬಹಳ ಕಡಿಮೆಯಾಗುತ್ತಿವೆ. ಅದಾಗ್ಯೂ ಇದಕ್ಕೆ ಅಪವಾದವೆಂಬಂತೆ ಪಶ್ಚಿಮ ಬಂಗಾಳದಲ್ಲಿ ಎಲ್ಲ ಏಳು ಹಂತಗಳು ಚುನಾವಣೆ ಸಂದರ್ಭದಲ್ಲೂ ಹಿಂಸಾಚಾರ ನಡೆಯಿತು. ಪಶ್ಚಿಮ ಬಂಗಾಳ ಹಿಂದಿನಿಂದಲೂ ರಾಜಕೀಯ ಹಿಂಸಾಚಾರಕ್ಕೆ ಕುಖ್ಯಾತವಾಗಿವೆ. ಕೇರಳ ಈ ಮಾದರಿಯ ರಾಜಕೀಯ ಸೇಡಿಗಾಗಿ ಹತ್ಯೆಗಳು ನಡೆಯುತ್ತಿರುವ ಇನ್ನೊಂದು ರಾಜ್ಯ. ಆದರೆ ಚುನಾವಣೆ ಸಂದರ್ಭದಲ್ಲಿ ಆಶ್ಚರ್ಯ ಎಂಬಂತೆ ಈ ರಾಜ್ಯದಲ್ಲಿ ಹಿಂಸಾಚಾರ ನಡೆಯಲಿಲ್ಲ. ಅಷ್ಟರಮಟ್ಟಿಗೆ ರಾಜ್ಯದ ಜನರು ಪಾಠ ಕಲಿತುಕೊಂಡಿದ್ದಾರೆ ಎನ್ನಬಹುದು. ಪೊಲೀಸರ ಮತ್ತು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳೂ ಇದಕ್ಕೆ ಕಾರಣವಾಗಿರಬಹುದು. ಆದರೆ ತೃಣಮೂಲ ಕಾಂಗ್ರೆಸ್‌ ನೇತೃತ್ವದ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷದ ಸದಸ್ಯರೇ ವ್ಯಾಪಕವಾಗಿ ಹಿಂಸಾಚಾರದಲ್ಲಿ ತೊಡಗಿರುವುದು ಕಂಡು ಬಂದಿದೆ.

ಸಮೀಕ್ಷೆಗಳೆಲ್ಲ ಮರಳಿ ಬಿಜೆಪಿ ಅಧಿಕಾರಕ್ಕೇರುತ್ತವೆ ಎಂಬ ಭವಿಷ್ಯ ನುಡಿದಾಗಲೂ ಮತ ಎಣಿಕೆಯ ದಿನ ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಸಂದೇಶದ ಹಿನ್ನೆಲೆಯಲ್ಲಿ ಕೇಂದ್ರ ಎಲ್ಲ ರಾಜ್ಯಗಳಿಗೆ ಬಂದೋಬಸ್ತಿಗೆ ಸೂಚಿಸಿತ್ತು. ನಿರೀಕ್ಷಿಸಿದಂತೆ ಯಾವ ಅನಪೇಕ್ಷಿತ ಘಟನೆಯೂ ನಡೆಯದೆ ದೇಶದ ಜನರು ಈಗ ಪ್ರಬುದ್ಧರಾಗಿದ್ದಾರೆ ಎಂಬ ಸಂದೇಶ ಹೋಯಿತು.ಇದಕ್ಕೆ ಅಪವಾದದ್ದು ಅಮೇಠಿ ಮತ್ತು ಪಶ್ಚಿಮ ಬಂಗಾಳ. 2 ರಾಜ್ಯಗಳಲ್ಲಿ ಇಬ್ಬರು ರಾಜಕೀಯ ಕಾರ್ಯಕರ್ತರ ಹತ್ಯೆಯಾಗಿರುವುದು ದೊಡ್ಡ ಘಟನೆಯಲ್ಲ ಎಂದು ಹಗುರವಾಗಿ ಪರಿಗಣಿಸುವ ವಿಚಾರ ಇದಲ್ಲ. ಹತ್ಯೆಗೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ ನಡೆದರೆ ಯಾರು ಹೊಣೆ? ಹಿಂಸಾಚಾರ ಆರಂಭದಲ್ಲೇ ಮಟ್ಟ ಹಾಕುವುದು ರಾಜ್ಯಗಳ ಹೊಣೆ.

ವಿಚಿತ್ರ ಎಂದರೆ ಈ ಎರಡು ಹತ್ಯೆಗಳಿಗೆ ರಾಜಕೀಯ ನಾಯಕರಿಂದ ಯಾವ ರೀತಿಯ ಖಂಡನೆಯಾಗಲಿ, ಪ್ರತಿಭಟನೆಯಾಗಲಿ ವ್ಯಕ್ತವಾಗದಿರುವುದು. ಹತ್ಯೆಯಾದವರು ಬಿಜೆಪಿಯಲ್ಲದೆ ಬೇರೆ ಪಕ್ಷದ ಕಾರ್ಯಕರ್ತರಾಗಿದ್ದರೆ ರಾಜಕೀಯ ನಾಯಕರು ಈ ರೀತಿ ಮೌನವಹಿಸುತ್ತಿದ್ದರೆ?ಹತ್ಯೆಯಂಥ ಅಮಾನವೀಯ ಕೃತ್ಯ ನಡೆದಾಗಲೂ ಪಕ್ಷಬೇಧ ನೋಡುವುದೇಕೆ? ಎರಡು ಹತ್ಯೆಗಳಲ್ಲೂ ರಾಜಕೀಯ ವಿರೋಧಿಗಳ ಕೈವಾಡವಿರುವ ದಟ್ಟ ಅನುಮಾನವಿರುವಾಗ ಕನಿಷ್ಠ ನಿರಾಕರಣೆಯ ಹೇಳಿಕೆಯನ್ನಾದರೂ ನೀಡದಿರುವುದು ಪರೋಕ್ಷವಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ. ಈ ಬಗ್ಗೆ ನಾಯಕರು ಮಾತನಾಡಬೇಕು.

Advertisement

ರಾಜಕೀಯ ಹಿಂಸಾಚಾರ ಪ್ರಜಾತಂತ್ರದ ಮೂಲ ಆಶಯವನ್ನೇ ಭಂಗಗೊಳಿಸುತ್ತದೆ. ಪ್ರಜಾತಂತ್ರದಲ್ಲಿ ಜನರಿಗೆ ಮುಕ್ತ ಆಯ್ಕೆಯ ಅವಕಾಶವಿರಬೇಕು, ತಮ್ಮ ರಾಜಕೀಯ ಪ್ರತಿನಿಧಿಯನ್ನು ನಿರ್ಭೀತಿ ಮತ್ತು ನಿರ್ಬಿಢೆಯಿಂದ ಆರಿಸುವ ವಾತಾವರಣವಿರಬೇಕು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಎಸಗುವವರನ್ನು, ಕುಮ್ಮಕ್ಕು ನೀಡುವವರನ್ನು ಕಾನೂನಿನ ಕಟಕಟೆಗೆ ಎಳೆದು ತರಲು ಕಾನೂನುಪಾಲಕರು ಶ್ರಮಿಸಬೇಕು. ಚುನಾವಣೋತ್ತರ ಮತ್ತು ಚುನಾವಣಾ ಪೂರ್ವ ಹಿಂಸಾಚಾರಗಳು ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯಲು ಆಸ್ಪದ ಕೊಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next