Advertisement

ಮಾಲ್‌ಗ‌ಳಿಗೆ ಹೋದರೆ ಸೋಂಕು ತಗಲದು

09:27 AM Apr 06, 2020 | mahesh |

ಜರ್ಮನಿ: ವಿಶ್ವದೆಲ್ಲೆಡೆ ಲಾಕ್‌ಡೌನ್‌ ಜಾರಿಯಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಅಗತ್ಯ ವಸ್ತುಗಳ ಪೂರೈಕೆ ಅಂಗಡಿ ಮುಂಗಟ್ಟುಗಳನ್ನು ಹೊರತು ಪಡಿಸಿ ಉಳಿದ ಬಟ್ಟೆ ಅಂಗಡಿ ವಾಣಿಜ್ಯ ಮತ್ತು ಖಾಸಗಿ ಕೇಂದ್ರಗಳಿಗೆ ಬೀಗ ಬಿದ್ದಿದೆ. ಇದಕ್ಕೆ ಶಾಪಿಂಗ್‌ ಮಾಲ್‌ ಮತ್ತು ಸೆಲ್ಯೂನ್‌, ಬ್ಯೂಟಿ ಪಾರ್ಲರ್‌ಗಳು ಹೊರತಾಗಿಲ್ಲ. ಆದರೆ ಇದೀಗ ಜರ್ಮನಿ ಸಂಶೋಧಕರಿಂದ ಒಂದು ಸಂತಸದ ಸುದ್ದಿ ಬಂದಿದ್ದು, ಇದುವರೆಗೂ ಶಾಪಿಂಗ್‌ ಮಾಲ್‌ ಅಥವಾ ಸೆಲ್ಯೂನ್‌ಗಳಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.

Advertisement

ಅಷ್ಟು ಸುಲಭವಲ್ಲ
ಹೌದು, ಇಲ್ಲಿನ ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ತಂಡವೊಂದು ಈ ವಿಷಯ ಕುರಿತಾಗಿ ಅಧ್ಯಯನ ನಡೆಸಿದ್ದು, ಗುಂಪಿನ ಮುಖ್ಯಸ್ಥ ಪ್ರೊ. ಸ್ಟ್ರೀಕ್‌ ಜರ್ಮನ್‌ನ ನ್ಯೂಸ್‌ ಚಾನೆಲ್‌ಗೆ ನೀಡಿದ ಸಂದರ್ಶನ ಒಂದರಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಕೋವಿಡ್- 19 ವೈರಸ್‌ಗೆ ಸಂಬಂಧ ಪಟ್ಟಂತೆ ಹಲವು ಸಂಶೋಧನೆಗಳನ್ನು ನಡೆಸಿರುವ ಅವರು ಜರ್ಮನಿಯ ಪ್ರಮುಖ ಸಂಶೋಧಕರ ಪೈಕಿ ಒಬ್ಬರು. ಅವರು ತಿಳಿಸುವಂತೆ ಹಿಂದಿನಷ್ಟು ವೇಗವಾಗಿ ಮತ್ತು ಅಷ್ಟು ಸುಲಭವಾಗಿ ವೈರಸ್‌ ಹರಡುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರೊ. ಸ್ಟ್ರೀಕ್‌ ಅವರ ತಂಡವು ಸೋಂಕು ಪೀಡಿತರ ಕುಟುಂಬವನ್ನು ಸಂಶೋಧನೆಗೆ ಒಳಪಡಿಸಿತ್ತು. ಅವರ ಮನೆಯ ಸದಸ್ಯರು ಮುಟ್ಟಿರುವ ಪೀಠೊಪಕರಣಗಳು, ಕಿಟಕಿಗಳು, ಬಾಗಿಲು ಸೇರಿದಂತೆ ಮನೆಗೆ ಅಳವಡಿಸಲಾದ ವಿವಿಧ ಕಬ್ಬಿಣ ಸಲಕರಣೆಗಳನ್ನು ಪರೀಕ್ಷಿಸಲಾಯಿತು. ಆದರೆ ಯಾವ ವಸ್ತುಗಳ ಮೇಲೂ ಸೋಂಕುವಿನ ಕುರುಹು ಪತ್ತೆಯಾಗಿಲ್ಲ. ಇದರೊಂದಿಗೆ ಈ ಸಂಶೋಧನ ತಂಡ ಸೋಂಕಿತ ಕುಟುಂಬ ಸಾಕಿದ್ದ ಬೆಕ್ಕಿನ ದ್ರವವನ್ನೂ ಪರಿಶೀಲಿಸಿದೆ. ಅಲ್ಲೂ ವೈರಸ್‌ನ ಯಾವುದೇ ಕುರುಹು ಕಂಡು ಬಂದಿಲ್ಲ.

ಮನುಷ್ಯರಿಂದ ಮಾತ್ರ ಹರಡುತ್ತಿದೆ
ಕೆಲವು ಬಾರಿ ಒಂದು ವಿಷಯದ ಬಗ್ಗೆ ಹತ್ತು ಹಲವು ಊಹಾಪೋಹಗಳು ಕೇಳಿ ಬರುತ್ತವೆ. ಜನರು ಎಲ್ಲವನ್ನೂ ನಂಬುತ್ತಾರೆ. ಹಾಗೆಯೇ ಕೋವಿಡ್- 19 ಕುರಿತಾಗಿ ಸಾಕಷ್ಟು ಗೊಂದಲಗಳಿವೆ. ಆದರೆ ಸೋಂಕಿತ ವ್ಯಕ್ತಿ ಮುಟ್ಟಿದ ಸೆಲ್‌ಫೋನ್‌, ಬಾಗಿಲುಗಳಿಂದ ವೈರಾಣು ಹರಡುವುದಿಲ್ಲ. ಇದಕ್ಕೆ ಮತ್ತೂಂದು ಉದಾ : ಜರ್ಮನ್‌ ದೇಶದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು ಕೆಲಸದ ನಿಮಿತ್ತ ಚೀನದಿಂದ ಜರ್ಮನಿಗೆ ಬಂದ ಓರ್ವ ಮಹಿಳೆಯಲ್ಲಿ. ಆಕೆ ಇಲ್ಲಿನ ಹೋಟೆಲ್‌ನಲ್ಲಿ ಉಳಿದಿದ್ದು, ಆಕೆಯ ಊಟೋಪಚಾರವೂ ಅಲ್ಲೇ ನಡೆದಿತ್ತು. ಆದರೆ ಹೋಟೆಲ್‌ನ ಯಾವುದೇ ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಹೊರತಾಗಿ ಅವಳು ಭೇಟಿ ನೀಡಿದ ಕಂಪೆನಿಯ ಅವಳ ಸಹೋದ್ಯೋಗಿಗಳಿಗೆ ಸೋಂಕು ಹರಡಿದ್ದು, ಅವಳು ಅವರೊಂದಿಗೆ ಹಸ್ತಲಾಘವ ಮಾಡಿದ್ದಳು ಎಂಬ ವಿಷಯ ಅಧ್ಯಯನದ ವೇಳೆ ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ. ಹೀಗೆಂದ ಮಾತ್ರಕ್ಕೆ ನಾನು ಲಾಕ್‌ಡೌನ್‌ ಅನ್ನು ಹಿಂತೆಗೆದುಕೊಳ್ಳಿ ಎಂದು ಹೇಳುತ್ತಿಲ್ಲ. ವೈರಾಣು ಬಗ್ಗೆ ಇನ್ನೂ ಸಾಕಷ್ಟು ಮಾಹಿತಿ ಕಲೆ ಹಾಕಬೇಕು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next