Advertisement

ಮತದಾನ ಮಾಡಲು ಮರೆಯದಿರಿ

10:56 AM Apr 12, 2019 | Team Udayavani |
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ, ಪಾದಯಾತ್ರೆ, ರೋಡ್‌ ಶೋ ಮೂಲಕ ಮತದಾರರ ಗಮನ ಸೆಳೆಯುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್‌, ಗುರುವಾರ ವಿದ್ಯಾರ್ಥಿಗಳೊಂದಿಗೆ
ಸಂವಾದ ನಡೆಸಿ ತಪ್ಪದೆ ಮತದಾನ ಮಾಡಲು ಮನವಿ ಮಾಡಿದರು.
ಜಯನಗರದ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಡನೆ ಸಂವಾದ ನಡೆಸಿದ ಅವರು, ನಾನಿಲ್ಲಿ ಬಂದಿರುವುದು ನಿಮ್ಮಲ್ಲಿ ಮನವಿ ಮಾಡುವುದಕ್ಕೆ. ನಿಮ್ಮಲ್ಲಿ ಬಹಳಷ್ಟು ಮಂದಿ ಮೊದಲ ಬಾರಿ ವೋಟ್‌ ಮಾಡಲಿದ್ದೀರಿ.
ಏಪ್ರಿಲ್‌ 18ರಂದು ಮತ ಚಲಾಯಿಸುವುದನ್ನು ಮರೆಯದಿರಿ. ಸಂವಿಧಾನ ನಿಮಗೆ ನೀಡಿರುವ ಹಕ್ಕು. ಅದು ಬಹಳ ಮುಖ್ಯ.
 ವಿದ್ಯಾರ್ಥಿಗಳ ಶಕ್ತಿ ಬಹಳಷ್ಟು ಜನರಿಗೆ ಗೊತ್ತಿಲ್ಲ ಎನ್ನಿಸುತ್ತದೆ. ನಾನು ವಿದ್ಯಾರ್ಥಿಯಾದ್ದಾಗ ವಿದ್ಯಾರ್ಥಿಗಳ ಪ್ರತಿಭಟನೆಗಳಿಂದ ಸರಕಾರಗಳೇ ಬದಲಾಗುತ್ತಿದ್ದವು. ಆದರೀಗ ನಮಗ್ಯಾಕೆ ನಾವು ಬದುಕಿದ್ರೆ ಸಾಕು ಎನ್ನುವ ಮನೋಭಾವ ಬಂದುಬಿಟ್ಟಿದೆ. ಮೋದಿಯವರಿಗೆ ಈಗ 65 ವರ್ಷ. ಅವರು ಎಲ್ಲೇ ಹೋದರು ಯುವಕರು ಮೋದಿ.. ಮೋದಿ… ಎಂದು ಕೂಗುತ್ತಾರೆ. ಈ 5 ವರ್ಷದಲ್ಲಿ ಮೋದಿಯವರು ಯುವಕರಿಗೆ, ವಿದ್ಯಾರ್ಥಿಗಳಿಗೆ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಿ. ಅವರು ಆ ರೀತಿ ಮಾಡಿದರೆ ನಾನು ರಾಜಕೀಯವನ್ನೇ ಬಿಡುತ್ತೇನೆ ಎಂದು ಸವಾಲ್‌ ಹಾಕಿದರು.
ಇದೆಲ್ಲಾ ಆಗಿದ್ದು ಕಳೆದ ಐದು ವರ್ಷಗಳಲ್ಲಿ ಅಲ್ಲ. ಮೋದಿ ಹೇಳಿದ್ರೂ, ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂತ. ಹಾಗಂದ್ರೆ ಪಕೋಡ ಮಾರೋದ? ಈ ಬಗ್ಗೆ ಪ್ರಶ್ನೆ ಕೇಳಿದ್ರೆ ಮೋದಿ ಹೇಳ್ತಾರೆ ಕೆಲಸ ಸಿಗದಿದ್ರೂ ಪರವಾಗಿಲ್ಲ, ಪಕೋಡಾ ಮಾರಿ ದುಡಿತಾರೆ ಅಂತಾ. ಕೂಲಿ ಕೆಲಸ ಮಾಡಿ ಓದಿಸಿದ ತಂದೆ ತಾಯಿ ಮಕ್ಕಳು ಒಳ್ಳೆ ಹಂತದಲ್ಲಿ ಬರಲಿ ಅಂದ್ರೆ ಇವರು ಪಕೋಡಾ ಮಾರಲು ಹೇಳ್ತಾರೆ? ಪಕೋಡಾ ಮಾರುವುದು ತಪ್ಪು ಅಂತಾ ಹೇಳಲ್ಲಾ.
ಆದರೆ ಅದರಿಂದ ಎಷ್ಟು ದಿನ ಜೀವನ ನಡೆಸಬ ಹುದು. ಆ ಹುದ್ದೆಯಲ್ಲಿ ಏನೆಲ್ಲಾ ಅನುಕೂಲಗಳಿವೆ ನೋಡ್ಬೇಕು. ಮಾತು ಬರುತ್ತೆ ಅಂತ ಏನ್‌ ಬೇಕಾದ್ರೂ ಮಾತಾಡೋದಲ್ಲ. ಮೋದಿಯವರು ಪ್ರಜಾಪ್ರಭುತ್ವ ಹಾಗೂ ಮೀಸಲಾತಿಗೆ ವಿರೋಧವಾಗಿ ಮಾತಾಡ್ತಾರೆ. ಸಂವಿಧಾನ ಅನ್ನೋದು ಯೂನಿವರ್ಸಿಟಿಯಲ್ಲಿ ಬರೆದ ಪುಸ್ತಕವಲ್ಲ. ಅದು ನಮ್ಮ ದೇಶದ ಪ್ರಜೆಗಳಿಗಾಗಿ ಬರೆದ ಬುಕ್‌. ನಮಗೆ ಸರ್ವಧರ್ಮ ಸಮಭಾವ ಎಂಬ ತತ್ವದ ಅವಶ್ಯಕತೆ ಇದೆ. ಒಂದೋ ಗಾಂಧಿಯನ್ನು ಫಾಲೋ ಮಾಡ್ಬೇಕು, ಇಲ್ಲಾ ನಾತೂರಾಂ ಗೊಡ್ಸೆಯನ್ನು ಸಪೋರ್ಟ್‌ ಮಾಡ್ಬೇಕು. ಯೋಚಿಸಿ ನಿಮಗೆ ಯಾರು ಬೇಕು ಅನ್ನುವುದನ್ನ. ಸಂವಿಧಾನ ಉಳಿಯಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದರು ಮನವಿ ಮಾಡಿದರು.
ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ನಮ್ಮ ದೇಶದಲ್ಲಿ 35 ವರ್ಷದೊಳಗಿನವರು ಶೇ.65 ರಷ್ಟು ಜನರು ಇದ್ದಾರೆ. ಮತದಾನ ಮಾಡುವುದು ಕೇವಲ ನಮ್ಮ ಹಕ್ಕಲ್ಲ, ನಮ್ಮ ಕರ್ತವ್ಯ. ಜಾತಿ ಭೇದವಿಲ್ಲದೆ ಎಲ್ಲರನ್ನೂ ಒಗ್ಗಟ್ಟಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಕಾಂಗ್ರೆಸ್‌ ಪಕ್ಷ. ಈ ಚುನಾವಣೆ ಕೇವಲ ಎರಡು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ. ಇದು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಸ್ಪರ್ಧೆ. ಬಿಜೆಪಿಯವರು ಕೊಟ್ಟ ಆಶ್ವಾಸನೆಗಳನ್ನು ನೆರವೇರಿಸಿದ್ದಾರೆ ಅನ್ನುವುದನ್ನು ನಾವು ಚಿಂತಿಸಬೇಕು. ನುಡಿದಂತೆ ನಡೆಯುವ ಸರಕಾರ ನಮ್ಮದಾಗಿದೆ.  ಸಿದ್ದರಾಮಯ್ಯ ಕೂಡ ನುಡಿದಂತೆ ನಡೆದಿದ್ರೂ, ಮೈತ್ರಿ ಸರಕಾರ ಕೂಡ ಅದೇ ಹಾದಿಯಲ್ಲಿದೆ. ಇದು ನಮ್ಮ ಭವಿಷ್ಯದ ಪ್ರಶ್ನೆ ಹಾಗಾಗಿ ನಿಮ್ಮ ಬೆಂಬಲ ಬಿ.ಕೆ. ಹರಿಪ್ರಸಾದ್‌ ಅವರಿಗೆ ನೀಡಿ ಗೆಲ್ಲಿಸಿ ಎಂದು ಕೇಳಿಕೊಂಡರು.
ಬಿಡಿಎ ಅಧ್ಯಕ್ಷ ಎಸ್‌.ಟಿ. ಸೋಮಶೇಖರ್‌ ಹಾಗೂ ಮತ್ತಿತರ ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿದ್ದರು. ಸಂಜೆ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ ಶೋ ಕೂಡ ನಡೆಸಿದರು.
Advertisement

Udayavani is now on Telegram. Click here to join our channel and stay updated with the latest news.

Next