ಹುಬ್ಬಳ್ಳಿ: ಕಲಿತ ವಿದ್ಯೆ ಹಾಗೂ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು. ತಾಲೂಕಿನ ಬು.ಅರಳಿಕಟ್ಟಿ ಗ್ರಾಮದ ಚನ್ನಬಸವೇಶ್ವರ ಸೆಕೆಂಡರಿ ಸ್ಕೂಲ್ ಹಾಗೂ ಪದವಿಪೂರ್ವ ಮಹಾವಿದ್ಯಾಲಯ 2005ರ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ 2007ರ ಪಿಯುಸಿ ವಿದ್ಯಾರ್ಥಿಗಳ ಸಮ್ಮಿಲನ 2017 ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾಡಿರುವ ಸಾಧನೆ ಹಾಗೂ ಸಾಧನೆ ಮಾಡಲು ಪ್ರೋತ್ಸಾಹಿಸಿದ ಗುರುಗಳು, ಪಾಲಕರನ್ನು ಸದಾ ಸ್ಮರಣೆ ಮಾಡಿಕೊಳ್ಳಬೇಕು ಎಂದರು. ನಿವೃತ್ತ ಪ್ರಾಚಾರ್ಯ ಎಸ್.ಬಿ. ಟಿಕಪ್ಪನವರ ತಮ್ಮ ಶಿಕ್ಷಕ ವೃತಿಯಲ್ಲಿ ನಡೆದ ಹಲವು ಘಟನೆಗಳನ್ನು ಮೆಲಕು ಹಾಕಿದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಲ್ಯಾನ್ಸ್ ನಾಯಕ ಯೋಧ ಹನುಮಂತಪ್ಪ ಕೊಪ್ಪದ ಅವರ ತಾಯಿ ಬಸಮ್ಮ ಕೊಪ್ಪದ ಅವರನ್ನು ಹಾಗೂ ಎಲ್ಲ ನಿವೃತ್ತ ಗುರುವೃಂದ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂತೋಷ ಮುತಾಲಿಕ ದೇಸಾಯಿ ಮಾತನಾಡಿ, ಈ ವರ್ಷ ಆರ್ಥಿಕ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಪ್ರಾಚಾರ್ಯ ಐ.ವಿ. ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಈ ವಿ. ಬಿಳೇಕಲ್, ಪಿ.ಸಿ. ವಲಮಣ್ಣವರ, ಅಬ್ದುಲ್ ಅಂಕಲಿ, ಗೌರಮ್ಮ ಕುಂಬಾರ, ದೀಪಾ ಬಾಳಿಕಾಯಿ, ಸುಮಾ ಹೂಸಕಟ್ಟಿ, ಅನಿಲಕುಮಾರ ಹೊಂಡದ ಇನ್ನಿತರರು ಮಾತನಾಡಿದರು. ಅನಿಲಕುಮಾರ ಉಮೇಶ ಕೋಟ್ರಿಕಿ ನಿರೂಪಿಸಿದರು. ಶಿವಾನಂದ ಹಡಪದ ವಂದಿಸಿದರು.