Advertisement

ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಬೇಡಿ

10:26 AM Dec 05, 2017 | Team Udayavani |

ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿವೃದ್ಧಿ ಸಲುವಾಗಿ ಒಮ್ಮೆಯಾದರೂ ಕಲಬುರಗಿಗೆ ಬಂದಿದ್ದಾರೆಯೇ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಖಾರವಾಗಿ ಪ್ರಶ್ನಿಸಿದರು.
ಕಮಲಾಪುರ ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

Advertisement

ತಮ್ಮ ಸರ್ಕಾರ ಇದ್ದಾಗ ಕಲಬುರಗಿಯಲ್ಲಿ ಸತತ ಮೂರು ವರ್ಷಗಳ ಕಾಲ ಸಚಿವ ಸಂಪುಟ ಸಭೆ ನಡೆಸಿ ಸುವರ್ಣ ಗ್ರಾಮೋದಯ ಸೇರಿದಂತೆ ಹಲವಾರು ಯೋಜನೆಗಳಿಗೆ ಸಾವಿರಾರು ಕೋಟಿ ರೂ. ನೀಡಿ ಈ ಭಾಗದ ಅಭಿವೃದ್ಧಿಗೆ ಕೈ ಜೋಡಿಸಲಾಗಿದೆ. ಈಗಿನ ಕಾಂಗ್ರೆಸ್‌ ಸರಕಾರ ನಾಮಕಾವಾಸ್ತೆ ಎನ್ನುವಂತೆ ಒಮ್ಮೆ ಸಚಿವ ಸಂಪುಟ ಸಭೆ ನಡೆಸಿದ್ದನ್ನು ಬಿಟ್ಟರೆ ಇನ್ನಾವುದಕ್ಕೂ ಕಲಬುರಗಿಗೆ ಬಂದಿಲ್ಲ. ಬಂದಿದ್ದರೂ ಒಂದೆರಡು ಸಲ ಬೇರೆಯದಕ್ಕೆ ಬಂದಿದ್ದಾರೆ. ಒಟ್ಟಾರೆ ಇದು ಸಿಎಂರಿಗೆ ಈ ಭಾಗದ ಅಭಿವೃದ್ಧಿ ಬೇಕಿಲ್ಲ ಎಂಬುದು ನಿರೂಪಿಸುತ್ತದೆ. ತಾವೆಷ್ಟು ಸಲ ಬಂದಿದ್ದೇವೆ
ಎಂಬುದನ್ನು ತಮ್ಮ ಕಾರ್ಯಕರ್ತರಿಂದಲೇ ತಿಳಿದುಕೊಳ್ಳಿ ಎಂದು ಹೇಳಿದರು.

ವಿಮಾನ ನಿಲ್ದಾಣವಾದರೆ ಈ ಭಾಗದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಅಡಿಗಲ್ಲು ಹಾಕಲಾಗಿದೆ. ಆದರೆ ಇಂದಿನ ದಿನದವರೆಗೂ ಪೂರ್ಣಗೊಳ್ಳುತ್ತಿಲ್ಲ. ತಾವು ಸಿಎಂ ಆಗಿದ್ದಾಗ ಬಂಜಾರ-ಭೋವಿ ಸಮಾಜ ಅಭಿವೃದ್ಧಿ ನಿಗಮ
ಸೇರಿದಂತೆ ಇತರ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಕಾಗಿನೆಲೆ ಅಭಿವೃದ್ಧಿಗೆ ಚಾಲನೆ, ಬೆಂಗಳೂರಿನಲ್ಲಿ ಹಜ್‌ ಭವನ ನಿರ್ಮಾಣಕ್ಕೆ 40 ಕೋಟಿ ರೂ., ಸರ್ವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳಿಗೆ ಸಹಾಯವಾಗಲಿ ಎಂದು ಭಾಗ್ಯಲಕ್ಷ್ಮೀ ಬಾಂಡ್‌ ಯೋಜನೆ ಜಾರಿಗೆ ತರಲಾಗಿ ಸರ್ವ ಜನರಿಗೆ ಸ್ಪಂದಿಸಲಾಗಿದೆ. ಈಗ ಭಾಗ್ಯಲಕ್ಷ್ಮೀ ಬಾಂಡ್‌ ಗೆ ಷರತ್ತು ವಿಧಿಸಿ ಸಾರ್ವಜನಿಕರಿಗೆ ತಲುಪದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಆಪ್ತರನ್ನು ರಕ್ಷಿಸುತ್ತಾ ಬರೀ ಉಡಾಫೆ ಮಾತಿಗಳಲ್ಲಿಯೇ ಸಿದ್ಧರಾಮಯ್ಯ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಬರೀ ಭ್ರಷ್ಟಾಚಾರದಲ್ಲಿ ಮುಳುಗಿ ಸಿಒಡಿ ಹಾಗೂ ಎಸಿಬಿಯಿಂದ ಕ್ಲಿನ್‌ಚೀಟ್‌ ಪಡೆದುಕೊಳ್ಳುತ್ತಿದ್ದಾರೆ. ಆದರೆ ತಾವು ಅಧಿಕಾರಕ್ಕೆ ಬಂದ ತಕ್ಷಣ ಕ್ಲಿನ್‌ಚೀಟ್‌ ನೀಡಲಾಗಿರುವ ಎಲ್ಲ ಪ್ರಕರಣಗಳನ್ನು ಮರು ತನಿಖೆಗೆ ಆದೇಶಿಸಲಾಗುವುದು ಎಂದು ಯಡಿಯೂರಪ್ಪ ಗುಡುಗಿದರು.

ಕೇಂದ್ರದತ್ತ ಬೊಟ್ಟು ಮಾಡಬೇಡಿ: ರಾಜ್ಯದ ಖಜಾನೆ ದಿವಾಳಿಯಾಗಿದ್ದರಿಂದ ಸಿಎಂ ಸಿದ್ಧರಾಮಯ್ಯ ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿನ ರಾಜ್ಯ ಸರ್ಕಾರಗಳು ಅಲ್ಲಿನ ರೈತರ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿನ ಸಾಲ ಮನ್ನಾ ಮಾಡಿವೆ. ಆದರೆ ನಮ್ಮ ಸಿದ್ರಾಮಣ್ಣವರು ಈ ಬಗ್ಗೆ ಕೇಳಿದರೆ ಕೇಂದ್ರದತ್ತ ಬೊಟ್ಟು ಮಾಡ್ತಾರೆ. 14ನೇ ಹಣಕಾಸು ಆಯೋಗದಲ್ಲಿ ಕೋಟ್ಯಾಂತರ ರೂ. ಆರ್ಥಿಕ ಸಹಾಯ ಹರಿದು
ಬಂದರೂ ಇನ್ನೂ ಬೊಟ್ಟು ಮಾಡುವುದನ್ನು ನಿಲ್ಲಿಸಿಲ್ಲ ಎಂದು ಟೀಕಿಸಿದರು.

Advertisement

ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಮಾತನಾಡಿದರು. ಸಂಸದರಾದ ಶ್ರೀರಾಮುಲು, ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಸುನೀಲ ವಲ್ಲಾಪುರೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಕೆ.ಬಿ. ಶಾಣಪ್ಪ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಟಾಳ, ಶಶೀಲ ನಮೋಶಿ, ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಈಶಾನ್ಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ, ಮುಖಂಡರಾದ ಸುಭಾಷ ಬಿರಾದಾರ, ಬಸವರಾಜ ಮತ್ತಿಮೂಡ, ನಾಮದೇವ ರಾಠೊಡ ಕರಹರಿ ಸೇರಿದಂತೆ ಮುಂತಾದವರಿದ್ದರು.

ಕಲಬುರಗಿ ಗ್ರಾಮೀಣ ಘಟಕದ ವತಿಯಿಂದ ಬಸವರಾಜ ಪಾಟೀಲ, ರವಿ ಬಿರಾದಾರ, ಬಸವರಾಜ ಮತ್ತಿಮೂಡ ಹಾಗೂ ಇತರರ ನೇತೃತ್ವದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭಾರಿ ಗಾತ್ರದ ಹಾರ ಹಾಕುವ ಮುಖಾಂತರ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ನಿರೂಪಿಸಿದರು. ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಶರಣು ಸಲಗರ ಸ್ವಾಗತಿಸಿದರು.

ಟಿಕೆಟ್‌ ಯಾರಿಗೆ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡಿ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ ಗಾಗಿ ಪೈಪೋಟಿ ಇರುವುದು ತಮ್ಮ ಗಮನಕ್ಕೆ ಬಂದಿದೆ. ಸ್ಪರ್ಧಾ ಆಕಾಂಕ್ಷಿಗಳಲ್ಲಿ ಯಾರಿಗಾದರೂ ಟಿಕೆಟ್‌ ನೀಡಿದರೂ ಉಳಿದವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕಮಲವನ್ನು ಪುನಃ ಅರಳಿಸಬೇಕು. ಟಿಕೆಟ್‌ ವಂಚಿತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು.
 ಬಿ.ಎಸ್‌.ಯಡಿಯೂರಪ್ಪ ರಾಜ್ಯಾಧ್ಯಕ್ಷರು, ಬಿಜೆಪಿ

ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಸಹ ನೀಡಲಿಲ್ಲ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‌ ಪಕ್ಷದವರು ಐದು ದಶಕಗಳ ಕಾಲ ಅಧಿಕಾರ ನಡೆಸಿದ್ದರೂ ಮರಣೋತ್ತರವಾಗಿಯಾದರೂ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ಬಿಜೆಪಿ ಬೆಂಬಲಿತದ ವಿ.ಪಿ.ಸಿಂಗ್‌ ಸರ್ಕಾರವಿದ್ದಾಗ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದು ಕಾಂಗ್ರೆಸ್‌ ಪರಿಶಿಷ್ಟರ ಬಗ್ಗೆ ಹೊಂದಿರುವ ಕಾಳಜಿ ನಿರೂಪಿಸುತ್ತದೆ.
 ಗೋವಿಂದ ಕಾರಜೋಳ ಮಾಜಿ ಸಚಿವ

ರಸ್ತೆಯುದ್ದಕ್ಕೂ ಕಟೌಟ್‌ ಕಲಬುರಗಿಯಿಂದ ಹಿಡಿದು ಯಾತ್ರೆ ನಡೆಯುವ ಕಮಲಾಪುರ ಪಟ್ಟಣದ ರಸ್ತೆಯುದ್ದಕ್ಕೂ ಸ್ವಾಗತದ ಕಟೌಟ್‌ಗಳೇ ರಾರಾಜಿಸುತ್ತಿದ್ದವು. ಜಿ.ಪಂ ಸದಸ್ಯ ಬಸವರಾಜ ಮತ್ತಿಮೂಡ ಅವರ ಕಟೌಟ್‌ಗಳೇ ಹೆಚ್ಚಿನ
ಸಂಖ್ಯೆಯಲ್ಲಿದ್ದವು. ಇನ್ನುಳಿದಂತೆ ಮಾಜಿ ಸಚಿವ ಬಾಬುರಾವ ಚವ್ಹಾಣ, ರೇವು ನಾಯಕ ಬೆಳಮಗಿ, ನಾಮದೇವ ರಾಠೊಡ ಕರಹರಿ ಕಟೌಟ್‌ಗಳು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next