Advertisement

ತೋಟಕ್ಕೆ ಬೀಳದಿರಲಿ ಇಳಿಸಂಜೆಯ ಬಿಸಿಲು

09:32 PM Nov 23, 2019 | mahesh |

ಜಗತ್ತಿನ ಶಕ್ತಿಯೇ ಸೂರ್ಯಕಿರಣ. ಇದರ ಕಾಸ್ಮಿಕ್‌ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ಧತಿಯಿಂದ ದೊರೆಯುತ್ತದೆ. ಎಲ್ಲ ಗಿಡಮರಗಳಿಗೂ ಒಂದೇ ಪ್ರಮಾಣದ ಸೂರ್ಯಶಕ್ತಿ ಅಗತ್ಯ ಇರುವುದಿಲ್ಲ. ಕೆಲವಕ್ಕೆ ಹೆಚ್ಚು; ಕೆಲವಕ್ಕೆ ಕಡಿಮೆ ಬೇಕಾಗುತ್ತದೆ.

Advertisement

ಅನಾದಿ ಕಾಲದಿಂದಲೂ ಭಾರತೀಯ ಕೃಷಿಕರು ಇವುಗಳನ್ನೆಲ್ಲ ಅಧ್ಯಯನ ಮಾಡಿ, ಬಹುಮಹಡಿ ಕೃಷಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಮಲೆನಾಡಿನಲ್ಲಿ ಬಹಳ ಉತ್ತಮವಾಗಿ ಬರುವಂಥವು ಅಡಿಕೆ, ಬಾಳೆ, ಕರಿಮೆಣಸು, ಏಲಕ್ಕಿ ಮತ್ತು ಕೆಲವು ಔಷಧ ಸಸ್ಯಗಳಾದ ಪಚೋಲಿ, ಹಿಪ್ಪಲಿ ಇತ್ಯಾದಿ. ಬಯಲು ಸೀಮೆಯಲ್ಲಿ ಧಾನ್ಯಗಳ ಜೊತೆಗೆ ಹರಳು, ತೋಟಗಾರಿಕೆ ಬೆಳೆಗಳ ಜತೆಗೆ ಧಾನ್ಯದ ಬೆಳೆಗಳನ್ನೂ ಬೆಳೆಯಬಹುದು. ಮಿಶ್ರಬೆಳೆ ಎಂದು ನಾವು ಏನು ಕರೆಯುತ್ತೇವೆಯೋ ಅದು ಕೂಡ ಬಹುಮಹಡಿ ಕೃಷಿ ಪದ್ಧತಿಗೆ ಹೊಂದಿಕೊಂಡಿದೆ.

ಅಶೋಕ ವೃಕ್ಷ ಬೆಳೆಸಿ
ಅಲಂಕಾರಕ್ಕೆ ಬೆಳೆಸುವ ಅಶೋಕ ವೃಕ್ಷವನ್ನು ಬೇಲಿಯಲ್ಲಿ ಬೆಳೆಸುತ್ತಾರೆ. ಇದೊಂದು ರೀತಿಯಲ್ಲಿ ಇಳಿಬಿಸಿಲಿನ ದುಷ್ಪರಿಣಾಮದಿಂದ ಇತರ ಸಸ್ಯಗಳು ಬಳಲದಂತೆ ತಡೆಯುವ ದಟ್ಟವಾದ ಪರದೆ. ಈ ವೃಕ್ಷವನ್ನು ಹತ್ತಿರ ಹತ್ತಿರದಲ್ಲಿ ಬೆಳೆಸಬಹುದು. ಅಡಿಕೆ, ಕಾಫಿ, ಬಾಳೆ ಇತ್ಯಾದಿಗಳಿರುವ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೇಲಿಯಾಗಿ ಬೆಳೆಸಲು ಅಶೋಕ ಗಿಡಗಳು ಸೂಕ್ತ. ಅಡಿಕೆ, ಕಾಫಿ ಬೆಳೆಗಳಿಗೆ ಇಳಿಬಿಸಿಲಿನ ಪ್ರಖರತೆಯಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತದೆ. ಇವುಗಳ ಕಾಂಡ ಕತ್ತರಿಸಿ ತೆಗೆದಂತೆ ಸೀಳುತ್ತದೆ.

ಬಿಳಿ ಬಣ್ಣ: ಶಾಖ ಹೀರುವ ಗುಣ
ನೆರಳು ನೀಡುವಂಥ ಮರಗಳನ್ನು ಪಶ್ಚಿಮ ದಿಕ್ಕಿನಲ್ಲಿ ಬೆಳೆಸಿರದಿದ್ದರೆ ಈ ಸಸ್ಯಗಳ ಕಾಂಡಗಳಿಗೆ ದಟ್ಟವಾಗಿ ಬಿಳಿಸುಣ್ಣ ಹಚ್ಚುವುದು ಕೂಡ ಪರಿಹಾರ ಕ್ರಮ. ಬಿಳಿ ಬಣ್ಣಕ್ಕೆ ಶಾಖ ಹೀರಿಕೊಳ್ಳದೆ ಇರುವ ಗುಣ ಇದೆ. ಬೇರೆ ಯಾವ ಬಣ್ಣ ಬಳಿದರೂ ಪ್ರಯೋಜನ ಇಲ್ಲ. ಗೋಣಿ ಮರವನ್ನು ಜಮೀನಿನ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೆಳೆಸುವುದರಿಂದಲೂ ಇಳಿ ಬಿಸಿಲಿನ ಪ್ರಖರತೆ ತಡೆಯಬಹುದು. ಸಿಲ್ವರ್‌ ಓಕ್‌ ಮರ, ಗಾಳಿಮರ ಕೂಡ ಸೂಕ್ತ. ಗಾಳಿಮರದಿಂದ ಮತ್ತಷ್ಟು ಪ್ರಯೋಜನ ಇದೆ. ಇದರ ಎಲೆಗಳಲ್ಲಿ ಪೊಟ್ಯಾಷ್‌ ಅಂಶ ಇದೆ. ಆದ್ದರಿಂದ ಈ ಮರದಿಂದ ಉದುರಿದ ಎಲೆಗಳನ್ನು ಇತರ ಸಸ್ಯಗಳಿಗೆ ಮುಚ್ಚಿಗೆಯಾಗಿ ನೀಡಿದಾಗ ಅವುಗಳಿಗೆ ಸಹಜವಾಗಿ ಪೊಟ್ಯಾಷ್‌ ದೊರೆತಂತೆ ಆಗುತ್ತದೆ.

ಕಾಸ್ಮಿಕ್‌ ಕಿರಣ
ಪಪ್ಪಾಯಿ, ಸಪೋಟಾ, ಮಾವು, ಸೀಬೆ ಬೆಳೆಗಳ ಮಧ್ಯೆ ಸಹ ಬೇರೆಬೇರೆ ಬೆಳೆಗಳನ್ನು ಬೆಳೆಯಬಹುದು. ಮುಖ್ಯವಾಗಿ ನಾವು ನೋಡಬೇಕಾದ್ದು ಹಲವು ಹಂತಗಳಲ್ಲಿ ಕಾಸ್ಮಿಕ್‌ ಕಿರಣಗಳ ಪ್ರಯೋಜನ ಪಡೆಯುವುದು ಸಾಧ್ಯ ಆಗದೇ ಇದ್ದಾಗ ಈ ಕಿರಣಗಳು ಗರಿಷ್ಠ ಪ್ರಮಾಣದಲ್ಲಿ ಮಣ್ಣಿಗೆ ನೇರವಾಗಿ ತಾಕುತ್ತವೆ. ಇದರಿಂದ ಇವುಗಳ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ. ಇದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಎಷ್ಟೇ ಪ್ರಯತ್ನಿಸಿದರೂ ನೂರಕ್ಕೆ ನೂರರಷ್ಟು ತಡೆಯಲು ಆಗುವುದಿಲ್ಲ. ಮಣ್ಣಿಗೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಈ ಕಿರಣಗಳ ಅಗತ್ಯ ಇರುತ್ತದೆ.

Advertisement

ಬಹುಮಹಡಿ ಪದ್ಧತಿ
ಬಹುಮಹಡಿ ಕೃಷಿ ಪದ್ಧತಿ ಅನುಸರಿಸಿದ ಸಂದರ್ಭದಲ್ಲಿ ಕಾಸ್ಮೆಟಿಕ್‌ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ ಆಗುತ್ತದೆ. ಏಕಬೆಳೆ ಪದ್ಧತಿ ಅನುಸರಿಸಿದಾಗ ಇದರ ಬಳಕೆ ಸಾಧ್ಯ ಆಗುವುದಿಲ್ಲ. ಪೂರ್ವಾಹ್ನದ ಸೂರ್ಯ ಕಿರಣಗಳಿಂದ ದೊರೆಯುವ ಪ್ರಯೋಜನ ಸಂಜೆ ಅಥವಾ ಇಳಿ ಬಿಸಿಲಿನ ಕಿರಣಗಳಿಂದ ದೊರೆಯುವುದಿಲ್ಲ. ಇವುಗಳ ದುಷ್ಪರಿಣಾಮ ಸಸ್ಯಗಳ ಮೇಲೆ ಆಗುತ್ತದೆ. ಈ ಕಾರಣದಿಂದಲೇ ಭಾರತೀಯ ಕೃಷಿಕರು ಪಶ್ಚಿಮ ದಿಕ್ಕಿನಲ್ಲಿ ಗಿಡಮರಗಳನ್ನು ಬೆಳೆಸುತ್ತಿದ್ದರು. ವಿಶೇಷವಾಗಿ ಕೆಲವಾರು ಗಿಡ-ಮರಗಳಿಗೆ ಇಳಿ ಬಿಸಿಲಿನ ದುಷ್ಪರಿಣಾಮ ತಡೆಗಟ್ಟುವ ಶಕ್ತಿ ಇದೆ.

-  ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next