Advertisement

ಮಿತಿ ಮೀರಿ ಮಕ್ಕಳ ಸಾಗಿಸಬೇಡಿ

01:57 PM Jul 06, 2019 | Team Udayavani |

ಕೋಲಾರ: ಆಟೋ, ಟೆಂಪೋ, ಬಸ್‌ ಮತ್ತಿತರ ವಾಹನಗಳಲ್ಲಿ ಮಿತಿಮೀರಿ ಶಾಲಾ ಮಕ್ಕಳನ್ನು ತುಂಬಬಾರದು ಎಂದು ಡಿವೈಎಸ್ಪಿ ಚೌಡಪ್ಪ ತಾಕೀತು ಮಾಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಪೊಲೀಸ್‌, ಸಾರಿಗೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಕಮರ್ಷಿಯಲ್ ವೆಹಿಕಲ್ಸ್ ಆಪರೇಟರ್ ವೆಲ್ಫೇರ್‌ ಟ್ರಸ್ಟ್‌ ಆಯೋಜಿಸಿದ್ದ ಶಾಲಾ ಮಕ್ಕಳ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನ ಚಾಲಕರು ಪರವಾನಗಿ ಪಡೆದಿರುವುದು ಮುಖ್ಯ. ಜತೆಗೆ ರಸ್ತೆ ಸುರಕ್ಷತೆ, ಸಾರಿಗೆ ನಿಯಮ ಮತ್ತು ಕಾನೂನು ಪಾಲನೆ ಮಾಡಬೇಕು. ಕೆಲವೊಮ್ಮೆ ಅರಿವಿಲ್ಲದೆ, ಇದ್ದರೂ ತಪ್ಪು ಮಾಡುತ್ತಾರೆ. ಇದು ಸರಿಯಲ್ಲ ಎಂದು ಎಚ್ಚರಿಸಿದರು.

ವಾಹನ ಚಾಲನೆಯಲ್ಲಿ ಜಾಗ್ರತೆ ಮತ್ತು ಸಮಯ ಪ್ರಜ್ಞೆ ಮುಖ್ಯ, ಆಟೋಗಳಲ್ಲಿ 3+1 ಮಾತ್ರ ಕರೆದುಕೊಂಡು ಹೋಗಲು ಅವಕಾಶವಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾನೂನು ಪಾಲಿಸಬೇಕು, ಸರಕು ಸಾಗಾಣಿಕೆ ವಾಹನದಲ್ಲಿ ಜನರ ಸಾಗಾಣಿಕೆಯೂ ಕಾನೂನು ಬಾಹಿರ ಎಂದು ಸೂಚಿಸಿದರು.

ಠಾಣೆಗೆ ಮಾಹಿತಿ ನೀಡಿ: ಸಾರ್ವಜನಿಕ ಶಿಕ್ಷಣ ಇಲಾಖೆೆ ಉಪನಿರ್ದೇಶಕ ಕೆ. ರತ್ನಯ್ಯ, ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಚಾಲಕರು ಸುರಕ್ಷತೆ, ಭದ್ರತೆಗೆ ಒತ್ತು ನೀಡಬೇಕು. ಆಟೋ ಚಾಲಕರ ಮಾಹಿತಿಯನ್ನು ಸಮೀಪದ ಪೊಲೀಸ್‌ ಠಾಣೆಗೆ ನೀಡಬೇಕು ಎಂದು ಸಲಹೆ ನೀಡಿದರು.

ತಿಳಿವಳಿಕೆ ಅಗತ್ಯ: ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌.ಗೋಪಾಲಕೃಷ್ಣ, ಸಾರಿಗೆ ನಿಯಮಗಳಿಗೆ ಕಾಲಕಾಲಕ್ಕೆ ತಿದ್ದುಗಳಾಗುತ್ತಲೇ ಇದ್ದು, ಸುರಕ್ಷತೆ ವಿಚಾರದಲ್ಲಿ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ ಹಲವು ಆದೇಶಗಳನ್ನು ನೀಡಿದೆ. ಅವುಗಳ ಬಗ್ಗೆ ತಿಳಿವಳಿಕೆ ಅಗತ್ಯ ಎಂದರು. ಟ್ರಸ್ಟ್‌ನ ಅಧ್ಯಕ್ಷ ಹಾಗೂ ತ್ರಿಚಕ್ರ ವಾಹನ ಚಾಲಕರ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌, ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋ ಇನ್ನಿತರೆ ಚಾಲಕರ ಮೇಲೆ ದಂಡ ವಿಧಿಸಲಾಗುತ್ತಿದೆ. ಚಾಲಕರಿಗೆ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ. ಜಿಲ್ಲೆಯಲ್ಲಿ ಟ್ರಸ್ಟ್‌ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮೊದಲು ಜಾಗೃತಿ ಮೂಡಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಮುಂದಿನ ದಿನಗಳಲ್ಲಿ ಚಾಲಕರು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕ್ರಮಕ್ಕೆ ಅವರೇ ಹೊಣೆಗಾರರು ಎಂದು ಎಚ್ಚರಿಸಿದರು.

Advertisement

ಸಾಲ ಸೌಲಭ್ಯ ಒದಗಿಸಿ: ಸರ್ಕಾರವು ಆಟೋ, ಬಸ್‌ ಇನ್ನಿತರೆ ಸಾರ್ವಜನಿಕ ಸಂಚಾರದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ನಿರ್ಬಂಧಿಸಿದೆ. ಆದರೆ, ಇದರ ಸಾಧಕ ಬಾಧಕಗಳನ್ನು ಚರ್ಚಿಸಿಲ್ಲ. 15 ವರ್ಷ ಹಳೆಯದಾದ ಗಾಡಿಗಳ ವಿಲೇವಾರಿ ಹೇಗೆ ಎಂಬುದು ಸ್ಪಷ್ಟಪಡಿಸಬೇಕು, ವಾಹನ ಬಳಸಲು ಯೋಗ್ಯವಾಗಿರದಿದ್ದರೆ ಹೊಸ ವಾಹನ ಖರೀದಿಗೆ ಬ್ಯಾಂಕ್‌ ಇಲ್ಲವೇ ಸಹಕಾರ ಕ್ಷೇತ್ರದಿಂದ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಟ್ರಸ್ಟ್‌ನಿಂದ ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ದಿನಾಂಕ ನಿಗದಿಪಡಿಸಿ ಸುರಕ್ಷತಾ ಪ್ರಯಾಣ ಮತ್ತು ಪ್ರಯಾಣಿಕರ ಸುರಕ್ಷತೆ ಹೆಸರಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಜಿಲ್ಲಾ ಡ್ರೈವಿಂಗ್‌ ಸ್ಕೂಲ್ ಮಾಲಿಕರ ಸಂಘದ ಅಧ್ಯಕ್ಷ ಆರ್‌.ಗೋಪಾಲ್, ಇಫ್ಕೋಟೋಕಿಯಾ ವಿಮಾ ಸಂಸ್ಥೆಯ ಪ್ರತಿನಿಧಿ ನಾಗಮಣಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾಧ್ಯಕ್ಷ ಸದಾನಂದ, ಶ್ರೀಕೃಷ್ಣ, ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಅಮ್ಜದ್‌ ಪಾಷ, ಮಂಜುನಾಥ್‌, ಆರ್‌.ಶ್ರೀನಿವಾಸನ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next