ಕೊಪ್ಪಳ: ಗೌರಿ-ಗಣೇಶ ಹಾಗೂ ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ದತೆ ಹಾಗೂ ಪರಿಸರ ಸ್ನೇಹಿಯನ್ನಾಗಿ ಆಚರಿಸಲು ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ನಡದ ಜಿಲ್ಲಾಮಟ್ಟದ ಶಾಂತಿಪಾಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ ಮೊಹರಂ ಹಾಗೂ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು. ಈ ವರ್ಷವೂ ಹೆಚ್ಚಿನ ಶಬ್ಧ ಹೊರಸೂಸುವ ಡಿಜೆ ಸೌಂಡ್ ಸಿಸ್ಟಮ್ ನಿಷೇಧಿಸಲಾಗಿದೆ. ಶಬ್ಧದ ತೀವ್ರತೆ ಅಳೆಯುವ ಮಾಪನ ಯಂತ್ರಗಳನ್ನು ಬಳಸಲಾಗುತ್ತಿದೆ. ಆದ್ದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮಂಡಳಿ ಸಹಕರಿಸಬೇಕು. ಮೊಹರಂ ಹಬ್ಬ ಕೂಡ ಗಣೇಶ ಹಬ್ಬದ ಸಂದರ್ಭದಲ್ಲೇ ಆಚರಿಸಲಾಗುವುದರಿಂದ ಈ ಹಬ್ಬಗಳನ್ನು ಎಲ್ಲ ಸಮುದಾಯದವರು ಪರಸ್ಪರ ಸೌಹರ್ದದಿಂದ ಆಚರಿಸಬೇಕು ಎಂದರು.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮೂರ್ತಿ ತಯಾರಿಸುವುದನ್ನು ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಕಡ್ಡಾಯವಾಗಿ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪೊಲೀಸ್ ಠಾಣೆಗಳಲ್ಲಿ ಏಕ-ಗವಾಕ್ಷಿ ಪದ್ಧತಿಯಲ್ಲಿ ಪರವಾನಗಿ ಒದಗಿಸಲಾಗುವುದು. ವಿದ್ಯುತ್ ತಂತಿ, ವಿದ್ಯುತ್ ಕಂಬಗಳಿಂದ ಸುರಕ್ಷಿತ ಅಂತರದಲ್ಲಿ ಚಿಕ್ಕ ಗಾತ್ರದ ಪರಿಸರ ಸ್ನೇಹಿ ಗಣೇಶ ಮೂರ್ತಿ ಕೂರಿಸಬೇಕು ಎಂದರು.
ಕೊಪ್ಪಳ ನಗರ ವ್ಯಾಪ್ತಿಯ ಗಣೇಶ ಮೂರ್ತಿ ವಿಸರ್ಜನೆಗೆ ಹುಲಿಕೆರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆರೆಯ ಆಳ ಕಹಾಗೂ ನೀರಿನ ಪ್ರಮಾಣ ಹೆಚ್ಚಿರುವುದರಿಂದ ವಿಸರ್ಜನೆ ಸಂದರ್ಭ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಆಳದವರೆಗೆ ಬ್ಯಾರಿಕೇಡ್ ನಿರ್ಮಿಸಲು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ವಿಸರ್ಜನಾ ಮೆರವಣಿಗೆ ಸಂದರ್ಭ ಮಂಡಳಿ ಸದಸ್ಯರು ಮದ್ಯಪಾನ ಮಾಡಿ ಗಲಾಟೆ ಮಾಡುವುದು, ಅಶ್ಲೀಲ ನೃತ್ಯ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದೇಶ ಮೀರಿ ನಿಗದಿಗಿಂತ ಹೆಚ್ಚಿನ ಶಬ್ಧ ಹೊರಸೂಸುವ ಡಿಜೆ ಸಿಸ್ಟಂ ಬಳಸಿದರೆ ಅವುಗಳನ್ನು ಜಪ್ತಿ ಮಾಡಲಾಗುತ್ತದೆ ಎಂದರು. ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನೇ ಬಳಸಬೇಕು. ಕುಡಿಯುವ ನೀರಿನ ಮೂಲಗಳಾದ ಬಾವಿ, ಕೆರೆಗಳಲ್ಲಿ ರಾಸಾಯನಿಕ ಬಣ್ಣಯುಕ್ತ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಾರದು. ಹೆಚ್ಚು ಶಬ್ಧ ಬರುವ ಪಟಾಕಿಗಳನ್ನು ಬಳಸಬೇಡಿ ಎಂದರು.
ಸಭೆಯಲ್ಲಿ ಎಸ್‌ಪಿ ರೇಣುಕಾ ಸುಕುಮಾರ, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ನಗರಸಭೆ ಆಯುಕ್ತ ಸುನೀಲ್ ಕುಮಾರ, ತಹಶೀಲ್ದಾರ್ ಜೆ.ಬಿ. ಮಜ್ಜಿಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಮತ್ತಿತರರಿದ್ದರು.