Advertisement

ದುಶ್ಚಟ ಮುಕ್ತರಾಗಲು ಸಂಕಲ್ಪ ತೊಡಿ: ಸಾಣೇಹಳ್ಳಿ ಶ್ರೀ ಸಲಹೆ

01:07 PM Jun 30, 2017 | Team Udayavani |

ದಾವಣಗೆರೆ: ದುಶ್ಚಟರಹಿತ ಸಮಾಜ ನಿರ್ಮಾಣ ಕುರಿತು ಮಾತನಾಡುವ ಮೊದಲು ಜವಾಬ್ದಾರಿಯುತ ಸ್ಥಾನದಲ್ಲಿರುವವರು ದಿಟ್ಟ ಮನಸ್ಥಿತಿ ಹೊಂದಬೇಕಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. 

Advertisement

ಗುರುವಾರ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುವಿನ ವ್ಯಸನ ತಡೆಗಟ್ಟುವ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ, ಮಾತನಾಡಿದರು.

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸಂಕಲ್ಪ ಮಾಡುವವರು ಮೊದಲು ಅದರಿಂದ ಮುಕ್ತರಾಗಬೇಕು ಎಂದರು. ದುಶ್ಚಟಕ್ಕೆ ಇಂದು ವಯಸ್ಸಿನ ಅಂತರ ಇಲ್ಲವಾಗಿದೆ. ಪಾರ್ಥೇನಿಯಂ ರೀತಿ ದುಶ್ಚಟಗಳು ಎಲ್ಲರನ್ನೂ ಆವರಿಸಿವೆ. ಸಂತೋಷ, ದುಖಃ ಕ್ಕೂ ಮದ್ಯಪಾನ ಮಾಡುವ ಜನರಿದ್ದಾರೆ. 

ಇದರ ಜೊತೆಗೆ ಇತ್ತಿಚಿಗೆ ಮಹಿಳೆಯರು ತಮ್ಮ ಗಂಡಂದಿರು ಎಲ್ಲೋ ಕುಡಿದು, ಹಾಳಾಗುವುದಕ್ಕಿಂತ ತಮ್ಮ ಮುಂದೆ ಕುಡಿದರೆ ನೆಮ್ಮದಿ ಎಂದು ಮನೆಯಲ್ಲಿಯೇ ತಮ್ಮ ಗಂಡನಿಗೆ ಮದ್ಯ ಕುಡಿಸಲು ಮುಂದಾಗುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಮಹಿಳೆಯರು ಹೀಗೆ ಮಾಡುವ ಬದಲು ಒನಕೆ ಓಬವ್ವನ ಅವತಾರ ತಾಳಬೇಕು ಎಂದು ಅವರು ಕಿವಿಮಾತು ಹೇಳಿದರು. 

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಇಂದು ಮಾದಕ ವ್ಯಸನ ವ್ಯಾಪಕವಾಗಿದೆ. ಪ್ರತಿಯೊಬ್ಬ ಮಾದಕ ವ್ಯಸನಿ ತನ್ನ ಅಂತರಾತ್ಮ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ದುಶ್ಚಟದಿಂದ ಸುಲಭವಾಗಿ ಹೊರಬರಬಹುದು. ಭಾರತ ಯುವ ಪೀಳಿಗೆಯ ದೇಶ.

Advertisement

ಈ ಯುವ ಪೀಳಿಗೆಯೇ ನಮ್ಮ ದೇಶದ ಬುನಾದಿ ಎಂಬುದನ್ನು ನಾವು ಮರೆಯಬಾರದು. ಇಂತಹ ಬುನಾದಿಯೇ ಮಾದಕ ವ್ಯಸನದಂತಹ ಸಮಸ್ಯೆಗೆ ತುತ್ತಾದರೆ ದೇಶವೇ ನಾಶವಾಂದತೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಮಾತನಾಡಿ, ಇಂದು ಶತ್ರು ರಾಷ್ಟ್ರ ದೇಶದ ಜನರ ಆರೋಗ್ಯ ಕೆಡಿಸಿ, ದೇಶ ಹಾಳು ಮಾಡಲು ಮುಂದಾಗುತ್ತಿದೆ.

ಪಂಜಾಬ್‌ ಇದಕ್ಕೆ ಉತ್ತಮ ಉದಾಹರಣೆ. ನಮ್ಮ ರಾಜ್ಯ ಸಹ ಅಂತಹುದ್ದೇ ಸ್ಥಿತಿಯಲ್ಲಿದೆ ಎಂಬುದಾಗಿ ಹೇಳುತ್ತಾರೆ. ಆದರೆ, ಅಷ್ಟರಮಟ್ಟಿಗೆ ನಾವು ದುಸ್ಥಿತಿಗೆ ಬಂದಿಲ್ಲ. ಸಮಸ್ಯೆ ಇದೆ ಎಂಬುದು ನಿಜ ಎಂದರು. ತಪೋವನ ಸಮೂಹ ಸಂಸ್ಥೆಯ ಡಾ| ವಿ.ಎಂ. ಶಶಿಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ತ್ರಿಪುರಾಂಭ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ವೇದಿಕೆಯಲ್ಲಿದ್ದರು. ಎಸ್‌ಎಸ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ| ವಿ.ಎಲ್‌. ಜಯಸಿಂಹ, ತಪೋವನದ ಡಾ| ಬಿ.ಆರ್‌. ಗಂಗಾಧರ ವರ್ಮ ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next