Advertisement

ಸತಾಯಿಸಬೇಡ ಸುಮ್ಮನೆ ಕಿರುನಗೆಯ ಸೂಸು

01:52 PM May 15, 2018 | |

ಒಲವಿನ ಗೆಳತಿಯೇ,
ನಿನ್ನನ್ನು ಕಂಡ ಮೊದಲ ಬಾರಿಗೇ, ನಿನ್ನ ಹೆಸರನ್ನು ಕೇಳಿ ತಿಳಿದುಕೊಳ್ಳುವ ಮುಂಚೆಯೇ ಹೃದಯವನ್ನು ನಿನಗೆ ಮಾರಿಕೊಂಡಿದ್ದಕ್ಕೆ ಕ್ಷಮೆ ಇರಲಿ. ಆವತ್ತೂಂದಿನ ಕಾಲೇಜಿನ ಕಾರಿಡಾರಿನಲ್ಲಿ ಮೊದಲ ಬಾರಿಗೆ ನೀನು ಬೀರಿದ ಒಂದೇ ಒಂದು ನೋಟಕ್ಕೆ ಇಷ್ಟೊಂದು ತಾಕತ್ತಿದೆ ಅಂತ ನಿಜವಾಗಿಯೂ ನಾನು ಊಹಿಸಿರಲಿಲ್ಲ. ಆ ನೋಟವೇ ನನ್ನನ್ನು ತನ್ನ ವಶಕ್ಕೆ ಪಡೆದು ಮನಸ್ಸಿಗೆ ಬಂದಂತೆ ಆಟವಾಡಿಸುತ್ತಿದೆ. ಬದುಕಿನ ಯಾವ ಸಂದಿಗ್ಧತೆಯ ಜೊತೆಗೂ ರಾಜಿಯಾಗದವನು ನಿನ್ನೊಲವಿಗೆ ಸೋತು ಹೋಗಿದ್ದೇನೆ. ನಿನ್ನ ಹಣೆಯ ಆ ಬಿಂದಿಯನ್ನು ನೋಡುತ್ತಿದ್ದರೆ ಇರುಳ ಚಂದ್ರನೇ ಮರೆತು ಹೋಗುತ್ತಾನೆ. ಕಾಮನಬಿಲ್ಲಿನಂತೆ ಕಾಣುವ ಹುಬ್ಬಿನಡಿಯಲ್ಲಿ ಆ ಮೋಹಕ ಕಣ್ಣುಗಳ ಬಾಣದಂಥ ನೋಟ, ಹೃದಯಕ್ಕೆ ನಾಟಿ ಇನ್ನೆಂದೂ ಸರಿಹೋಗದಷ್ಟು ದುರ್ಬಲನಾಗಿ ಬಿಟ್ಟಿದ್ದೇನೆ. ಐಯಾಮ್‌ ಸ್ಟ್ರಾಂಗ್‌ ಎಂದು ಬೀಗುತ್ತಿದ್ದ ಹುಡುಗನನ್ನು ಈ ಮಟ್ಟಕ್ಕೆ ಮರುಳು ಮಾಡುವಂಥ ರೂಪ ಮತ್ತು ತುಂಟತನ ಕೊಟ್ಟು ನಿನ್ನನ್ನು ಸೃಷ್ಟಿಸಿದ ಆ ಬ್ರಹ್ಮನ ಮೇಲೆ ಸಿಟ್ಟು ಬಂದಿದೆ. 

Advertisement

 ಮನದ ತುಂಬಾ ನೀನು ಆವರಿಸಿದ ದಿನದಿಂದ, ಇಲ್ಲಿಯವರೆಗೂ ನಿನ್ನ ಪ್ರೀತಿಯನ್ನು ಸಾಲವಾಗಿ ಪಡೆಯಲು ನಿದ್ರೆ, ನೆಮ್ಮದಿಗಳನ್ನು ಒತ್ತೆಯಿಟ್ಟಾಗಿದೆ. ನಿನ್ನ ಪ್ರೀತಿ ಸಿಗದ ಹೊರತು ಬದುಕುವ ಭರವಸೆ ಎಳ್ಳಷ್ಟೂ ಇಲ್ಲ. ನಿತ್ಯವೂ ಕಾಲೇಜಿನ ಕಾರಿಡಾರಿನಲ್ಲಿ ನಿನಗೆಂದೇ ತಂದ ಕೆಂಪು ಗುಲಾಬಿಯೊಂದಿಗೆ ನಡೆದಾಡುತ್ತಿದ್ದೇನೆ. ನೀನೆಲ್ಲಿರುವೆ? ಕಣ್ಣ ನೋಟದಿಂದಲೇ ನನ್ನನ್ನು ಗೆದ್ದವಳು ನೀನು. ಅಂಥವಳು, ಈಗ ನನ್ನ ಕಣ್ತಪ್ಪಿಸಿ ಓಡಾಡುವುದೇಕೆ? ಇಷ್ಟೊಂದು ಕಾಡಿಸಿ ನೀನು ಸಾಧಿಸುವುದಾದರೂ ಏನು? 

ಒಂದೇ ಒಂದು ಬಾರಿ ನನ್ನೆದುರಿಗೆ ಬಾ. ಈ ಪ್ರೀತಿಯ ಗುಲಾಬಿಯನ್ನು ನಿನ್ನ ಕೈಗಿಡುವೆ. ಅದನ್ನೆತ್ತಿಕೊಂಡು ತುಟಿಯಂಚಿನಲ್ಲಿ ಕಿರುನಗೆ ಸೂಸಿಬಿಡು ಸಾಕು! ನೀ ನನ್ನ ಕೈ ಹಿಡಿಯುವೆ ಎಂಬ ಭರವಸೆಯಿಂದಲೇ ಮನೆಯ ಹಿತ್ತಲಲ್ಲಿ ಹೂಗಿಡಗಳನ್ನು ನೆಟ್ಟಿದ್ದೇನೆ. ಅವುಗಳಿಗೂ ನಿನ್ನ ನೋಡುವ ತವಕ; ನನ್ನಂತೆಯೇ. ಆ ಹೂಗಳು ಸೂಸುವ ಪರಿಮಳದೊಳಗೆ ನಿನ್ನದೇ ಹೆಸರು, ನಿನ್ನದೇ ನಗು ಬೆರೆತಿದೆ. ಹಗಲಿರುಳೂ ನಿನಗಾಗಿಯೇ ಹಪಹಪಿಸುತ್ತಿರುವ ಈ ಹೃದಯದ ಬೇನೆಯನ್ನು ಶಮನ ಮಾಡು ಎಂಬುದಷ್ಟೇ ನನ್ನ ಪ್ರಾರ್ಥನೆ. ನಾಳೆ, ಅದೇ ಸಮಯಕ್ಕೆ ಕಾರಿಡಾರಿನಲ್ಲಿ ಕೆಂಪು ಗುಲಾಬಿಯೊಂದಿಗೆ ನಡೆದಾಡುತ್ತಿರುತ್ತೇನೆ. ಕಾಲೇಜಿಗೆ ಬರಿ¤àಯಲ್ಲ; ಆಗ ದಯವಿಟ್ಟು ಒಂದ್ಸಲ ನನ್ನ ಕಡೆ ನೋಡು. ಈ ಹುಡುಗನ ಕಣ್ಣಲ್ಲಿ ಪ್ರೀತಿ, ಮಮತೆ, ಕರುಣೆ, ಅನುರಾಗ, ಅಕ್ಕರೆ, ಯಾತನೆ, ಯಾಚನೆ ಎಲ್ಲವೂ ತುಂಬಿಕೊಂಡಿದೆ. ಇದೆಲ್ಲಾ ನಿನ್ನಿಂದ ಮತ್ತು ನಿನಗಾಗಿ. ಪ್ರೀತಿಸುವುದನ್ನು ಬಿಟ್ಟು, ನನಗೆ ಬೇರೇನೂ ತಿಳಿದಿಲ್ಲ. ನೀನಲ್ಲದೆ ನನಗೆ ಬೇರ್ಯಾರೂ ಕನಸಿಗೂ ಬರಲು ಸಾಧ್ಯವಿಲ್ಲ. ಅಷ್ಟೊಂದ್‌ ಒಳ್ಳೆ ಹುಡುಗ ನಾನು. ನನ್ನ ಪರಿಚಯಾನ ಇನ್ನೂ ಯಾವ ಥರ ಹೇಳ್ಕೊಬೇಕೋ ಗೊತ್ತಾಗ್ತಾ ಇಲ್ಲ…

ಇರಲಿ, ಕಾಲೇಜಿಗೆ ಬಂದಾಗ ಒಂದ್ಸಲ ನನ್ನ ಕಡೆ ನೋಡು. ಒಂದೇ ಒಂದು ಸ್ಮೈಲ್ ಕೊಟ್ಟು ಮುಂದೆ ಹೋಗು…

ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next