Advertisement
ಇವೆಲ್ಲದರ ನಡುವೆಯೇ, ಸೋಮವಾರವಷ್ಟೇ ಉಡುಪಿ ಜಿಲ್ಲೆಯ ಕೊಕ್ಕರ್ಣೆ ಸಮೀಪದ ವಿದ್ಯಾರ್ಥಿನಿಯೊಬ್ಬಳು ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದುಹೋಗಿದೆ.ಅದರಂತೆಯೇ ಪ್ರತಿವರ್ಷವೂ ಕಾಡುವ ಆತಂಕ-ಮಡುಗಟ್ಟುವ ನೋವೊಂದು ಮತ್ತೆ ರಾಜ್ಯವನ್ನು ಆವರಿಸಿದೆ. “ಪರೀಕ್ಷೆಯೇ ಎಲ್ಲವೂ ಅಲ್ಲ, ಫೇಲಾದವರೂ ಸಾಧಕರಾದ ಅನೇಕ ಕಥೆಗಳಿವೆ’ ಎಂಬರ್ಥದ ಪ್ರೋತ್ಸಾಹದ ನುಡಿಗಳನ್ನು ಎಷ್ಟೇ ಆಡಿದರೂ, ವಾಸ್ತವದಲ್ಲಿ ಪರಿಸ್ಥಿತಿ ನಿಜಕ್ಕೂ ಬದಲಾಗುತ್ತಿದೆಯೇ ಎನ್ನುವ ಪ್ರಶ್ನೆಯನ್ನು ಇಂಥ ಘಟನೆಗಳು ಹುಟ್ಟುಹಾಕುತ್ತಿವೆ. ಏಕೆಂದರೆ, ಸ್ಪರ್ಧಾತ್ಮಕತೆಯ ಓಟದಲ್ಲಿ ಮಕ್ಕಳು-ಪೋಷಕರು ಎಷ್ಟು ವೇಗವಾಗಿ ಓಡುತ್ತಿದ್ದಾರೆಂದರೆ , ಸಾವರಿಸಿಕೊಂಡು ವಾಸ್ತವವನ್ನು ಅರಿತುಕೊಳ್ಳುವುದಕ್ಕೆ, ಕಿವಿಮಾತುಗಳನ್ನು ಎದೆಗೆ ಇಳಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುತ್ತಲೇ ಇಲ್ಲ. ಯಾವ ಸಂಗತಿ ಜೀವನದ ಒಂದು ಚಿಕ್ಕ ಭಾಗವಾಗಬೇಕೋ, ಅದೇ ಸಂಗತಿ ಜೀವನವನ್ನು ಕೊನೆಗೊಳಿಸುವಷ್ಟು ಬಲಿಷ್ಠವಾಗಿ ಬದಲಾಗಿದ್ದೇಕೆ? ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೇ ಸರ್ವಸ್ವ, ಅದರಲ್ಲಿ ವಿಫಲರಾದರೆ ಜೀವನದಲ್ಲೇ ವಿಫಲವಾದಂತೆ ಎಂಬ ಭಾವನೆ ಎಷ್ಟು ಪ್ರಬಲವಾಗಿ ಬದಲಾಗಿದೆಯೆಂದರೆ, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವನವನ್ನು ಕ್ಷಣಾರ್ಧದಲ್ಲಿ ಕೈಚೆಲ್ಲುತ್ತಿದ್ದಾರೆ.
Related Articles
ಒಪ್ಪಿರ್ದೊಡದು ಭೋಜ್ಯವಂತು ಜೀವಿತಂ
ತಪ್ಪು ಸರಿ ಬೆಪ್ಪು ಜಾಣಂದ ಕುಂದುಗಳ ಬಗೆ
ಯಿಪ್ಪತ್ತು ಸೇರೆರುಚಿ- ಮಂಕುತಿಮ್ಮ
ಅಂದರು ಡಿವಿಜಿಯವರು. ಬದುಕೆಂದರೆ ಬರೀ ಸಿಹಿಯಷ್ಟೇ ಅಲ್ಲ, ಊಟದಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಎಲ್ಲವೂ ಸಮ ಪ್ರಮಾಣದಲ್ಲಿ ಇದ್ದರೆ ಹೇಗೆ ಭೋಜನ ಉತ್ತಮವಾಗುತ್ತದೋ, ಹಾಗೆಯೇ ಬದುಕಿನಲ್ಲೂ ಸರಿ, ತಪ್ಪು, ಜಾಣ್ಮೆ, ಸೋಲು-ಗೆಲುವು ಸೇರಿದಂತೆ ಹತ್ತಾರು ಬಗೆಯ ಭಾವಗಳೂ ಇರಬೇಕು ಎನ್ನುವುದು ಇದರರ್ಥ. ಡಿ.ವಿ.ಜಿ.ಯವರ ಈ ದಾರ್ಶನಿಕ ಹಿತವಚನವನ್ನು ಇಂದು ಪೋಷಕರು, ಮಕ್ಕಳು, ಶಿಕ್ಷಕರು, ಒಟ್ಟಲ್ಲಿ ಎಲ್ಲರೂ ಮನನ ಮಾಡಿಕೊಳ್ಳುವ ಅಗತ್ಯವಿದೆ.
Advertisement