Advertisement

ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಿ: ನ್ಯಾ|ಹರೀಶ್‌

02:49 PM Oct 23, 2017 | |

ಶಿವಮೊಗ್ಗ: ಪ್ರತಿಯೊಬ್ಬ ನಾಗರಿಕನಿಗೆ ಕಾನೂನು ಎಲ್ಲ ಹಕ್ಕುಗಳ ಜೊತೆಗೆ ಬಾಧ್ಯತೆಗಳನ್ನು ನೀಡಿದೆ. ಇನ್ನೊಬ್ಬರ ಹಕ್ಕುಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ. ಹರೀಶ್‌ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಶಂಕರ ಕಣ್ಣಿನ ಆಸ್ಪತ್ರೆ, ಇನ್ನರ್‌ವೀಲ್‌ ಕ್ಲಬ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಲೋಕ್‌ ಅದಾಲತ್‌, ಮಧ್ಯಸ್ಥಿಕೆ, ಸಂಧಾನ, ನೊಂದವರಿಗೆ ಪರಿಹಾರ ಯೋಜನೆಗಳ ಹಾಗೂ ಆರೋಗ್ಯ, ಕಾನೂನು ಅರಿವು ಮತ್ತು ಕಣ್ಣಿನ ವಿಶೇಷ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬಾಧ್ಯತೆಗಳನ್ನು ಅರ್ಥೈಸಿಕೊಂಡಿಲ್ಲ ಎಂಬ ಕಾರಣಕ್ಕೆ ಇಲ್ಲಿ ನಿಮ್ಮನ್ನು ಕೂಡಿ ಹಾಕಿದ್ದಾರೆ. ತಿದ್ದಿಕೊಳ್ಳಲು ವಿಚಾರಣಾಧೀನ ಕೈದಿಗಳಿಗೆ ಕಾನೂನು ಸಂಧಾನ, ಮಧ್ಯಸ್ಥಿಕೆಯಂತಹ ಅವಕಾಶವನ್ನು ನೀಡಿದೆ. ಅವಶ್ಯವಿದ್ದಲ್ಲಿ ಖರ್ಚು ರಹಿತವಾಗಿ ಬಗೆಹರಿಸಿಕೊಳ್ಳಲು ಲೋಕ್‌ ಅದಾಲತ್‌ ನೆರವು ಪಡೆಯಬಹುದು ಎಂದರು. 

ಆರೋಗ್ಯದ ಬಗ್ಗೆ ಅರಿವಿದ್ದರೆ ದೇಹದ ಸ್ವಾಸ್ಥ ಕಾಪಾಡಿಕೊಳ್ಳಬಹುದು. ಅಂತೆಯೇ ಕಾನೂನಿನ ಅರಿವಿದ್ದರೆ ಸಾಮಾಜಿಕ ಸ್ವಾಸ್ಥ ಕಾಪಾಡಬಹುದು. ಹಾಗಾಗಿ ಪ್ರತಿಯೊಬ್ಬರು ಕಾನೂನಿನ ಅರಿವು ಹೊಂದಿರಬೇಕು ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸೋಮಶೇಖರ್‌ ಸಿ. ಬಾದಾಮಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಸೇರಿ ಕೈದಿಗಳಿಗೆ ಸಂಧಾನ, ಲೋಕ್‌ ಅದಾಲತ್‌ ನಂತಹ ವ್ಯವಸ್ಥೆ ಕಲ್ಪಿಸಿದೆ. ಹಣಕಾಸಿನ ತೊಂದರೆ, ಬಡತನ ಮುಂತಾದ ಕಾರಣಗಳಿಂದಾಗಿ ವಕೀಲರನ್ನು ನೇಮಿಸಿಕೊಂಡು ಕೇಸ್‌
ನಡೆಸಲು ಸಾಧ್ಯವಾಗದಿದ್ದಲ್ಲಿ ನ್ಯಾಯಾಲಯದ ವತಿಯಿಂದಲೇ ವಕೀಲರನ್ನು ನೇಮಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅಂತೆಯೇ ಕೈದಿಗಳ ಆರೋಗ್ಯ ಪರಿಶೀಲನೆಗೆ ಓರ್ವ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಉಚಿತ ಔಷಧೋಪಚಾರ ವ್ಯವಸ್ಥೆ ಮಾಡಲಾಗಿದೆ. ಕೈದಿಗಳು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಲ್ಲಿ ವಿಚಾರಣೆ ಸ್ಥಗಿತಗೊಳಿಸಿ ನಂತರ ಮತ್ತೆ ವಿಚಾರಣೆ ನಡೆಸುವ ಅವಕಾಶವು ಇದೆ. ಈ ಎಲ್ಲಾ ಅನುಕೂಲತೆಗಳು ಕೈದಿಗಳ ಮನಃಪರಿವರ್ತನೆ ದೃಷ್ಟಿಯಿಂದ ಕಲ್ಪಿಸಲಾಗುತ್ತಿದೆ. ಆದರೆ ಮಾಡಿದ ತಪ್ಪು ತಿದ್ದಿಕೊಳ್ಳದೆ ಸೌಲತ್ತುಗಳನ್ನು ದುರುಪಯೋಗಪಡಿಸಿಕೊಂಡು ಲೈಲಿನಲ್ಲೇ ಉಳಿಯಲು ಬಯಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು. ಯಾವುದೋ ಸಂದರ್ಭದಲ್ಲಿ ಅಪರಾಧ ಪ್ರಕರಣಗಳಿಗೆ ಬಲಿಯಾಗಿದ್ದೀರಿ. ಆದರೆ ತಿದ್ದಿಕೊಂಡು ನಡೆಯಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. 

ಕಾರಾಗೃಹದ ಅಧೀಕ್ಷಕ ಪಿ. ಮಹದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ. ಮಧು, ವೈದ್ಯಾಧಿಕಾರಿ ಡಾ| ರಘು ಪ್ರಸಾದ್‌, ಡಾ| ಮಹೇಶ್‌ ಭಟ್‌, ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ಉಷಾ ವೆಂಕಟೇಶ್‌, ವಕೀಲರಾದ ರಮಾ ಎಚ್‌. ಗುಬ್ಬಿ, ಡಾ| ವೀಣಾ ಭಟ್‌, ಎಸ್‌. ಪ್ರದೀಪ್‌ ಕುಮಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next