ಹುಬ್ಬಳ್ಳಿ: ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ ಅವರ 49 ಜನ್ಮದಿನದ ಪ್ರಯುಕ್ತ ಅಭಿನಂದನಾ ಸಮಾರಂಭ ಇಲ್ಲಿನ ಶ್ರೀನಗರದ ಚೇತನ ಬ್ಯುಸಿನೆಸ್ ಸ್ಕೂಲ್ ಮುಂಭಾಗದಲ್ಲಿ ಸೋಮವಾರ ನಡೆಯಿತು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಣ್ಣಾ ಕೊರವಿ ಅವರ ಜನಪರ ಕಾರ್ಯವನ್ನು ಪಕ್ಷಭೇದ ಮರೆತು ಶ್ಲಾ ಸುವವರು ಸಾಕಷ್ಟು ಜನರಿದ್ದಾರೆ. ಆಯ್ಕೆಯಾದ ನಂತರ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಜನಪ್ರತಿನಿಧಿಗಳ ಪೈಕಿ ರಾಜಣ್ಣ ಒಬ್ಬರು.
ಇವರ ಸೇವೆ ಕೇವಲ ಒಂದು ವಾರ್ಡ್‌ಗೆ ಅಥವಾ ಪಾಲಿಕೆಗೆ ಮಾತ್ರ ಸೀಮಿತವಾಗಬಾರದು. ಮುಂದಿನ 50ನೇ ವರ್ಷದ ಜನ್ಮದಿನದ ಆಚರಣೆಯನ್ನು ಶಾಸಕರಾಗಿ ಆಚರಣೆ ಮಾಡುವಂತ ಶಕ್ತಿಯನ್ನು ಈ ಭಾಗದ ಜನರು ನೀಡಬೇಕು ಎಂದು ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹು.ಧಾ. ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ರಾಜಣ್ಣಾ ಕೊರವಿ ಜೆಡಿಎಸ್ ಅಭ್ಯರ್ಥಿ ಎಂಬುವುದನ್ನು ಘೋಷಿಸಿದರು.
ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿ, ಸಂಪ್ರದಾಯ ಹಾಗೂ ಸುಸಂಸ್ಕೃತ ಮನೆತನದಲ್ಲಿ ಜನಿಸಿರುವ ರಾಜಣ್ಣಾ ಅವರಿಗೆ ಸಾಮಾಜಿಕ ಕಳಕಳಿಯಿದೆ. ಜನ ಸೇವೆ ಮಾಡಬೇಕೆಂಬ ತುಡಿತ ಅವರಲ್ಲಿದೆ. ಇನ್ನಷ್ಟು ಜನ ಸೇವೆ ಮಾಡುವಂತ ಶಕ್ತಿ ಭಗವಂತ ಕರುಣಿಸಲಿ ಎಂದು ಆಶೀರ್ವದಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಈ ಭಾಗದಲ್ಲಿ ರೈತಪರ ಹೋರಾಟ ಸೇರಿದಂತೆ ಎಲ್ಲಾ ಹೋರಾಟಗಳ ಯಶಸ್ವಿಯ ಹಿಂದೆ ರಾಜಣ್ಣಾ ಕೊರವಿ ಇದ್ದಾರೆ. ತಮ್ಮ ಭಾಗದಲ್ಲಿ ಯಾವುದೇ ಸಮಸ್ಯೆಯಿದ್ದರೂ ಕೂಡಲೇ ಸ್ಪಂದಿಸುವಂತ ವ್ಯಕ್ತಿ ಇವರು. ಇಂತಹವರಿಗೆ ಜನರು ಮತ್ತಷ್ಟು ಶಕ್ತಿ ತುಂಬಬೇಕು ಎಂದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗೆ ಹಾಗೂ ಅಂಧ ಮಕ್ಕಳಿಗೆ ಬಟ್ಟೆ ವಿತರಿಸಲಾಯಿತು.
ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತಾಜುದ್ದೀನ್ ಖಾದ್ರಿ, ರೆವರೆಂಡ್ ಇಮ್ಯಾನುವೇಲ್ ಪಿ. ಸೊರಣಗಿ, ಮುಖಂಡರಾದ ಆಲ್ಕೋಡ ಹನುಮಂತಪ್ಪ, ಮರಿಲಿಂಗೇಗೌಡ, ಎಂ.ಎಸ್. ಅಕ್ಕಿ, ಅಲ್ತಾಫ ಕಿತ್ತೂರ, ಅಶ್ವಿನಿ ಮಜ್ಜಗಿ, ಉಮೇಶ ಕೌಜಗೇರಿ, ರಾಜು ಅಂಬೋರೆ, ಚಂದ್ರಶೇಖರ, ವಿಕಾಸ ಸೊಪ್ಪಿನ, ಅಮೃತ ಇಜಾರೆ, ಡಾ| ಸಿದ್ದಲಿಂಗಯ್ಯ ಹಿರೇಮಠ, ಮುಜಾಹಿದ್ದೀನ್ ಕಾಂಟ್ರಕ್ಟರ್, ಶಿವಣ್ಣ ಹುಬ್ಬಳ್ಳಿ ಇತರರಿದ್ದರು.