ನವದೆಹಲಿ: ರಾಜಸ್ಥಾನದ ಅಳ್ವಾರ್‌ನಲ್ಲಿ ಗೋ ರಕ್ಷಕರಿಂದ ಥಳಿತಕ್ಕೆ ಒಳಗಾಗಿ ವ್ಯಕ್ತಿ ಅಸುನೀಗಿ, ವಿವಾದ ಉಂಟಾಗಿರುವಂತೆಯೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೋ ರಕ್ಷಣೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸೆ ನಡೆಸುವ ಬಗ್ಗೆ ಖಂಡಿಸಿದ್ದಾರೆ. ಇಂಥ ಕ್ರಮಗಳಿಂದ ಗೋ ರಕ್ಷಣೆ ಎಂಬ ಉತ್ತಮ ಕೆಲಸಕ್ಕೆ ಚ್ಯುತಿ ಬಂದಂತಾಗುತ್ತದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಆಯೋಜಿಧಿಧಿ ಸಲಾಗಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗೋ ರಕ್ಷಣೆ ಪರಮೋತ್ಛ ಗುರಿ. ಆದರೆ ಇದರ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವುದು, ಹಿಂಸಿಸುವುದರಿಂದ ನಮ್ಮ ಉದ್ದೇಶಕ್ಕೆ ಕಳಂಕ ಅಂಟಿಕೊಳ್ಳುತ್ತದೆ. ಅಲ್ಲದೆ ಗೋ ಹತ್ಯೆ ನಿಷೇಧಕ್ಕೆ ದೇಶಾದ್ಯಂತ ಏಕರೂಪ ಕಾನೂನು ಜಾರಿಗೊಳಿಸುವ ಆರ್‌ಎಸ್‌ಎಸ್ ಹೋರಾಟಕ್ಕೆ ಹಿನ್ನಡೆಯಾಗುತ್ತದೆ,’ ಎಂದು ಅಭಿಪ್ರಾಯಪಟ್ಟರು.
ಗೋ ರಕ್ಷಣೆ ಕಾರ್ಯವನ್ನು ಕಾನೂನಿನ ಚೌಕಟ್ಟಿನೊಳಗೆ ನಡೆಸುವಂತೆ ಸೂಚಿಸಿದರು. “ಹಿಂಸೆಯಿಂದ ಯಾವ ಕಾರ್ಯವೂ ಯಶಸ್ವಿಯಾಗುವುದಿಲ್ಲ. ಹಾಗೇ ವ್ಯಕ್ತಿ ಅಥವಾ ಸಮುದಾಯವೊಂದರ ನಂಬಿಕೆ ಹಾಗೂ ಭಾವನೆಗಳ ಮೇಲೆ ದಾಳಿ ನಡೆಸುವುದರಿಂದ ಗೋ ರಕ್ಷಣೆ ಸಾಧ್ಯವಾಗುವುದಿಲ್ಲ. ಸಂವಿಧಾನ ಮತ್ತು ದೇಶದ ಕಾನೂನುಗಳ ಪಾಲನೆ ಮೂಲಕ ಗೋ ಸಂತತಿಯ ರಕ್ಷಣೆ ನಡೆಯಬೇಕಿದೆ, ಎಂದು ಕರೆ ನೀಡಿದರು.
“ಆರ್‌ಎಸ್‌ಎಸ್ ಅಲೆ ಇರುವ ಹಾಗೂ ಆರ್‌ಎಸ್‌ಎಸ್ ಹಿನ್ನೆಲೆಯ ಮುಖಂಡರ ನೇತೃತ್ವದ ಬಿಜೆಪಿ ಸರ್ಕಾರವಿರುವ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಗೋ ಹತ್ಯೆ ನಿಷೇಧಿಸುವ ಕಾನೂನುಗಳು ಜಾರಿಯಾಗಿವೆ. ಹಾಗೇ ಇತರ ರಾಜ್ಯಗಳು ಕೂಡ ಇಂಥ ಕ್ರಮಕ್ಕೆ ಮುಂದಾಗಲಿವೆ ಎಂಬ ಭರವಸೆ ಇದೆ. ಆದರೆ ಗೋ ಹತ್ಯೆ ನಿಷೇಧಿಸದ ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯದ ಹಲವು ರಾಜ್ಯಗಳಲ್ಲಿ ಗೋ ಮಾಂಸ ಭಕ್ಷಣೆ ವ್ಯಾಪಕವಾಗಿದ್ದು, ಈ ರಾಜ್ಯಗಳಲ್ಲಿ ಪಕ್ಷವನ್ನು ರಾಜಕೀಯವಾಗಿ ಬಲಗೊಳಿಸುವ ಕಾರ್ಯ ಜಾರಿಯಲ್ಲಿದೆ,’ ಎಂದು ಹೇಳಿದರು.
ದೇಸಿ ಹಸುಗಳ ಬಗ್ಗೆ ಗೊತ್ತು: ಸ್ವತಃ ಪಶುವೈದ್ಯ ತಜ್ಞರಾಗಿರುವ ತಮಗೆ ದೇಸಿ ತಳಿಯ ಹಸುವಿನ ಮಹತ್ವ ಗೊತ್ತು. ಅದರ ಮೂತ್ರ, ಸೆಗಣಿಗೂ ಮಹತ್ವವಿದೆ. ಅದನ್ನು ವೈಜ್ಞಾನಿಕ ಸಮುದಾಯ ಕೂಡ ಒಪ್ಪಿಕೊಂಡಿದೆ ಎಂದಿದ್ದಾರೆ.