Advertisement

ಪರೀಕ್ಷೆ ಭಯ ಬೇಡ;  ಆತ್ಮ ವಿಶ್ವಾಸ ಇರಲಿ

07:15 AM Mar 06, 2019 | |

ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೇ ಇರುತ್ತದೆ. ಆದರೆ ಇದನ್ನು ನಿವಾರಿಸಿ ಪರೀಕ್ಷೆ ಬರೆದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯವಿದೆ. ಹೀಗಾಗಿ ಪರೀಕ್ಷೆ ಬರೆಯುವ ಮುಂಚೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಬಹುಮುಖ್ಯವಾಗಿರುತ್ತದೆ.

Advertisement

ಈಗಾಗಲೇ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ಇನ್ನೇನು ಕೆಲ ದಿನಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯೂ ಆರಂಭವಾಗುತ್ತದೆ. ಪರೀಕ್ಷೆ ಎಂದಾಕ್ಷಣ ಕೆಲವು ವಿದ್ಯಾರ್ಥಿಗಳು ಭಯ ಪಡುತ್ತಾರೆ, ಒತ್ತಡಕ್ಕೊಳಗಾಗುತ್ತಾರೆ. ಅದರ ಬದಲು ಆತ್ಮವಿಶ್ವಾಸದಿಂದ ಕಲಿತರೆ ಕಠಿಣ ಪರೀಕ್ಷೆಯನ್ನೂ ನಿರಾಯಾಸದಿಂದ ಎದುರಿಸಲು ಸಾಧ್ಯ.

ಪರೀಕ್ಷೆಯನ್ನು ಸುಲಭವಾಗಿ ಜಯಿಸಲು ಮಾನಸಿಕ ಸ್ಥೈರ್ಯದಿಂದ ದಿನಂಪ್ರತಿ ಎರಡು ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ ಉತ್ತರಿಸಲು ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿದರೆ, ಜಯಶೀಲರಾಗಲು ಸಾಧ್ಯ. ಇಂದಿನ ಅನೇಕ ಮಂದಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ನೋಡಿದ ಕೂಡಲೇ ಅವಸರದಲ್ಲಿ ಉತ್ತರ ಬರೆಯುತ್ತಾರೆ. ಇದು ತಪ್ಪು. ಪ್ರಶ್ನೆಗಳಿಗೆ ಉತ್ತರ ಬರೆಯುವ ಮೊದಲು ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಬೇಕು. ಬಳಿಕ, ಉತ್ತರಿಸುವ ಕ್ರಮ ಬೆಳೆಸಿಕೊಳ್ಳಬೇಕು.

ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತೀ ಮುಖ್ಯ. ಅದರಲ್ಲಿಯೂ ಪರೀಕ್ಷೆಗೂ ಮುನ್ನ, ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು. ಪರೀಕ್ಷೆ ಸಮಯದಲ್ಲಿ ಮನಸ್ಸಿನಲ್ಲಿ ನಕಾರಾತ್ಮಕ  ಚಿಂತನೆಗಳನ್ನು ಬೆಳೆಸಿಕೊಳ್ಳಬಾರದು. ಪರೀಕ್ಷೆ ಸಮೀಪಿಸುತ್ತಿದೆ ಕೇವಲ ಓದಿಗೆ ಮಹತ್ವ ನೀಡುವುದು ಕೂಡ ತಪ್ಪು. ಏಕತಾನತೆಯ ಓದಿನಿಂದಾಗಿ ಮೆದುಳಿಗೆ ಒತ್ತಡವಾಗುವ ಸಂಭವ ಹೆಚ್ಚಿದೆ.

ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಒತ್ತಡ, ಭಯಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಪ್ರತೀ ವಿಷಯಕ್ಕೆ ಸಂಬಂಧಪಟ್ಟಂತೆ ನಿಯಮಿತ ವೇಳಾಪಟ್ಟಿ ರಚಿಸಿ, ನಿಯಮಿತವಾಗಿ ಅನುಸರಿಸಬೇಕು. ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಪಾಠಗಳನ್ನು ಕಂಠಪಾಠ ಮಾಡಲು ಪ್ರಯತ್ನಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಹೆಚ್ಚಾಗಿ ಪಠ್ಯಪುಸ್ತಕಗಳನ್ನು ಓದಲು ಸಮಯ ಮೀಸಲಿಡಬೇಕು. ಅನಂತರ ಅಗತ್ಯವೆನಿಸಿದರೆ, ಮುಖ್ಯ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು. ಇದರಿಂದ ಸುಲಲಿತ ಓದು ಸಾಧ್ಯ.

Advertisement

ಪರೀಕ್ಷೆಗೆ ಸಿದ್ಧತೆ ಮುಖ್ಯ
ಪರೀಕ್ಷೆ ಅಂತಿಮ ಹಂತದಲ್ಲಿರುವಾಗಲೂ ಸಿದ್ಧತೆ ಅತೀ ಮುಖ್ಯ. ಅದರಲ್ಲಿಯೂ ಪರೀಕ್ಷೆಗೆ ಒಂದು ವಾರ ಇರುವಾಗ ಪ್ರತಿಯೊಂದು ವಿಷಯಗಳನ್ನು ಮರು ಅಭ್ಯಾಸ ಮಾಡಿಕೊಳ್ಳುವ ಕ್ರಮ ಬೆಳೆಸಿಕೊಳ್ಳಬೇಕು. ಉತ್ತರ ಬರೆಯುವ ಸಮಯದಲ್ಲಿಯೂ ಉತ್ತರವನ್ನು ಕಠಿನ ಶಬ್ದಗಳಲ್ಲಿ ಬರೆಯದೆ ಎಲ್ಲರಿಗೂ ಅರ್ಥವಾಗುವ ರೀತಿ ಬರೆಯಬೇಕು. ಅದರಲ್ಲಿಯೂ ಟಿಪ್ಪಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಚಿತ್ರಪಟ, ಚಿತ್ರಗಳು, ಸಮೀಕರಣ, ಸೂತ್ರಗಳು ಮುಂತಾದ ಪೂರಕ ಅಂಶಗಳನ್ನು ಪರಿಗಣಿಸಿಕೊಳ್ಳಬೇಕು. ಇನ್ನು, ಪರೀಕ್ಷಾ ದಿನದ ತಯಾರಿಯ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಗಮನಹರಿಸಬೇಕಿದೆ. ಹೆಚ್ಚಿನ ಅಂಕಗಳಿಸಬೇಕೆಂದು ವಿದ್ಯಾರ್ಥಿಗಳು ಪರೀಕ್ಷೆಯ ಮುನ್ನಾ ದಿನ ಮಧ್ಯರಾತ್ರಿಯವರೆಗೆ ಓದುತ್ತಾರೆ. ಇದು ಒಳ್ಳೆಯ ಕ್ರಮವಲ್ಲ. ಪರೀಕ್ಷೆಯ ಮೊದಲಿನ ದಿನ ಚೆನ್ನಾಗಿ ನಿದ್ದೆ ಮಾಡಬೇಕು. ಬೆಳಗ್ಗಿನ ಜಾವದಲ್ಲಿ ಓದುವುದಕ್ಕೆ ಸಮಯ ಇಟ್ಟುಕೊಳ್ಳಬೇಕು. ಏಕೆಂದರೆ, ಬೆಳಗ್ಗಿನ ಪ್ರಶಾಂತತೆಗೆ ಓದಿದ ವಿಚಾರಗಳು ಬೇಗ ಮನದಟ್ಟಾಗುತ್ತದೆ. ಪರೀಕ್ಷೆ ಆರಂಭವಾಗುವುದಕ್ಕೆ ಮುಕ್ಕಾಲು ಗಂಟೆ ಇರುವಾಗಲೇ ಪರೀಕ್ಷಾ ಹಾಲ್‌ ತಲುಪುವಂತೆ ತೆರಳಬೇಕು. ಅದರಲ್ಲಿಯೂ ಪೆನ್ನು, ಪೆನ್ಸಿಲ್‌, ಸ್ಕೇಲ್‌, ಹಾಲ್‌ ಟಿಕೆಟ್‌, ಶಾಲಾ ಗುರುತು ಚೀಟಿಯನ್ನು ಪರೀಕ್ಷೆಗೆ ತೆರಳುವಾಗ ಕೊಂಡೊಯ್ಯಲು ಮರೆಯಬಾರದು. 

ಸಮಯ ಸರಿದೂಗಿಸುವುದು ಮುಖ್ಯ
ಪರೀಕ್ಷಾ ಹಾಲ್‌ ಪ್ರವೇಶಿಸಿದಂತೆ ಪ್ರಶ್ನೆಪತ್ರಿಕೆಯನ್ನು ಗಮನಿಸಿದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳಿವೆ. ಶಾಂತ ಚಿತ್ತದಿಂದ ಪರೀಕ್ಷಾ ಕೊಠಡಿಗೆ ತೆರಳಿ. ಜೇಬಿನಲ್ಲಿ ಯಾವುದಾದರೂ ಚೀಟಿಗಳಿವೆಯೇ ಎಂದು ಪರೀಕ್ಷಿಸಬೇಕು. ಒಂದು ವೇಳೆ ಇದ್ದರೆ ಹಾಲ್‌ನ ಹೊರಗೆ ಬಿಟ್ಟು ಪರೀಕ್ಷಾ ಕೊಠಡಿಗೆ ತೆರಳಿ. ಪ್ರಶ್ನೆ ಪತ್ರಿಕೆ ಸಿಕ್ಕ ಕೂಡಲೇ ಎಲ್ಲ ಪ್ರಶ್ನೆಗಳನ್ನು ಓದಿದ ಬಳಿಕ ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ. ಉತ್ತರ ಬರೆಯುವ ವೇಳೆ ಸಮಯದ ಕಡೆಗೂ ಗಮನ ಇರಲಿ.

ಪರೀಕ್ಷೆಯ ಒತ್ತಡ ಬೇಡ
ವಿದ್ಯಾರ್ಥಿಗಳು ಪರೀಕ್ಷೆ ವಿಚಾರದಲ್ಲಿ ಭಯಪಡದೆ ಓದಬೇಕು. ಕೆಲ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ತಯಾರಿ ಮಾಡಿರುತ್ತಾರೆ. ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕು ಎಂದು ಪೋಷಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಬಾರದು. ಓದಿದ ವಿಷಯದಲ್ಲಿ ಪ್ರಾಮುಖ್ಯ ಅಂಶಗಳನ್ನು ಪಾಯಿಂಟ್‌ ಮಾಡಿ ಇಟ್ಟರೆ ಕೊನೆಯ ಕ್ಷಣದ ಓದಿಗೂ ಸಹಕಾರಿಯಾಗುತ್ತದೆ.
– ಡಾ| ನಾಗವೇಣಿ ಮಂಚಿ, 
ಕನ್ನಡ ಸಹ ಪ್ರಾಧ್ಯಾಪಕಿ,
ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು

. ಪಠ್ಯದ ವಿಚಾರದಲ್ಲಿ ಗೊಂದಲ ಇದ್ದರೆ ಶಿಕ್ಷಕರಲ್ಲಿ, ಸ್ನೇಹಿತರಲ್ಲಿ ಚರ್ಚಿಸಿ.

. ಪರೀಕ್ಷೆಯ ತಯಾರಿಯ ಬಗ್ಗೆ ಗುರಿ ಇಟ್ಟುಕೊಳ್ಳಿ.ಸ್ನೇಹಿತರಲ್ಲಿ ಚರ್ಚಿಸಿ.

. ಅಭ್ಯಾಸದ ವೇಳೆ ಆತ್ಮವಿಶ್ವಾಸವನ್ನು ಕಡಿಮೆ ಮಾಡಬೇಡಿ

. ಧನಾತ್ಮಕ ಯೋಚನೆಗೆ ಒತ್ತುಕೊಡಿ.

 . ಕಷ್ಟ ಎನಿಸಿದ ವಿಷಯಗಳತ್ತ ಹೆಚ್ಚು ಗಮನ ಕೊಡಿ.

 ಒತ್ತಡಕ್ಕೆ ಒಳಗಾಗಿ ಓದಬೇಡಿ. ವಿಶ್ರಾಂತಿಯ ಕಡೆಗೂ ಗಮನ ನೀಡಿ.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next