Advertisement

ನಾನು ಯಾರಿಗೂ ಬೇಡವಾದೆನಾ?

05:46 PM Jun 11, 2019 | mahesh |

ಐವತ್ತನಾಲ್ಕು ವರ್ಷದ ಕಮಲಮ್ಮನವರಿಗೆ ಉರಿಯೂತ ಜಾಸ್ತಿಯಾಗಿ ಸಂಧಿವಾತ ತಜ್ಞರಲ್ಲಿ ಚಿಕಿತ್ಸೆ ಪಡೆದಿದ್ದರೂ ಪ್ರಯೋಜನವಾಗಿರಲಿಲ್ಲ. ದಿನನಿತ್ಯದ ಜೀವನವೇ ಕಷ್ಟವಾದಂತೆ ಅನಿಸುತಿತ್ತು. ಮಂಡಿನೋವು ಜಾಸ್ತಿಯಾಗಿ ಮಂಚ ಹತ್ತಿ ಇಳಿಯುವುದು ಪ್ರಯಾಸವಾಗಿತ್ತು. ಬೆನ್ನು- ಭುಜದಲ್ಲಿ ಶಕ್ತಿ ಕುಂದಿದಂತೆ ಅನಿಸುತ್ತಿತ್ತು. ಹತ್ತು ಹೆಜ್ಜೆ ನಡೆದರೆ ಕಾಲುಗಳು ಜೋಮುಗಟ್ಟುತ್ತಿದ್ದವು. ಒಲೆಯ ಮೇಲಿಂದ ಕುಕ್ಕರ್‌ ಇಳಿಸುವುದು ಕಷ್ಟವಾಗುತಿತ್ತು. ಎಷ್ಟು ಮಾತ್ರೆ ನುಂಗಿದರೂ ಸಮಸ್ಯೆ ಕಡಿಮೆಯಾಗದೇ, ವೈದ್ಯರು ಮಾನಸಿಕ ಸ್ಥಿತಿಯ ವಿಶ್ಲೇಷಣೆಗಾಗಿ ನನ್ನ ಬಳಿ ಕಳಿಸಿದ್ದರು.

Advertisement

ಕಮಲಮ್ಮನವರ ಪತಿಗೆ, ಅವರು ನಿವೃತ್ತಿ ಹೊಂದಿದ ಮೇಲೆ ಮನೆಯಲ್ಲಿ ಚಿಕ್ಕಪುಟ್ಟ ಕೆಲಸಗಳು ಕಿರಿಕಿರಿಯಾಗುತ್ತಿದ್ದವು. ಬಲಗಾಲಿನಲ್ಲಿ ಅವರಿಗೆ ಬಲ ಇರಲಿಲ್ಲ. ಕಮಲಮ್ಮ ನಿವೃತ್ತಿ ಹೊಂದಲು ಇನ್ನೂ ಆರೇಳು ವರ್ಷಗಳಿದ್ದಾಗಲೇ ಕಮಲಮ್ಮನವರನ್ನು ಕೆಲಸಬಿಡಲು ಪುಸಲಾಯಿಸಿದ್ದರಂತೆ. ಕಮಲಮ್ಮ ಕೆಲಸಬಿಟ್ಟ ಮೇಲೆ, ಪತಿಗೆ ಅನುಕೂಲವಾದರೂ, ಕಮಲಮ್ಮನವರಿಗೆ ಮನೆ ಹಿತವೆನಿಸಲಿಲ್ಲ. ಜೊತೆಗೆ ಪತಿಗೆ ಕೋಪ ಜಾಸ್ತಿ. ಕಾಫೀ ಬೇಗ ಕೊಟ್ಟರೆ ಸಿಟ್ಟು; ಲೇಟಾದರಂತೂ ರೇಗಿಯೇಬಿಡುತ್ತಿದ್ದರು. ಗಂಡ- ಹೆಂಡತಿಯ ನಡುವೆ ಸಮರಸ ಇರಲಿಲ್ಲ. ಬರೀ ವಾಗ್ವಾದ. ಹೆಂಡತಿ ಆಫೀಸಿನ ಗೆಳತಿಯರೊಂದಿಗೆ ಸಿನಿಮಾ/ ಪ್ರವಾಸಗಳಿಗೆ ಹೋಗಲು ಪತಿಯ ತಕರಾರಿತ್ತು.

ಮಗ ಹೆಂಡತಿಯ ಗುಲಾಮನಂತೆ ವರ್ತಿಸುತ್ತಿದ್ದ. ಹೆಂಡತಿಯ ಆಣತಿ ಮೀರುತ್ತಿರಲಿಲ್ಲ. ತಾಯಿಯ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಆಗಾಗ್ಗೆ ಕಮಲಮ್ಮನವರಿಗೆ ನೋವಾಗುತ್ತಿತ್ತು. ಚಿಕ್ಕವಳು ಮಗಳು. ಅನ್ಯಧರ್ಮೀಯನನ್ನು ಪ್ರೀತಿ ಮಾಡಿದ್ದಾಳೆ. ಇತ್ತ ಪ್ರೀತಿಸಿದ ಹುಡುಗ ಮದುವೆಗೂ ಒಪ್ಪುವುದಿಲ್ಲ. ಸ್ನೇಹವನ್ನೂ ಕೈ ಬಿಡುವುದಿಲ್ಲ. ಮಗಳ ಮದುವೆಗೆ ಹೊಸಾ ಸಂಬಂಧಗಳು ಬರುತ್ತಿವೆ. ಚಟಪಟಾಂತ ಮಾತನಾಡುತ್ತಿದ್ದ ಮಗಳು ಇತ್ತೀಚೆಗೆ ಯಾರೊಂದಿಗೂ ಮಾತೇ ಆಡುತ್ತಿಲ್ಲ.

ಕಮಲಮ್ಮನವರ ಉರಿಯೂತ ಜಾಸ್ತಿಯಾಗಲು ಮಾನಸಿಕ ಒತ್ತಡ ಕಾರಣ ಎಂಬುದು ಸುಸ್ಪಷ್ಟವಾಗಿತ್ತು. ಕಮಲಮ್ಮನವರ ಪತಿಯನ್ನು ಕರೆಸಿದ್ದೆ. ಅನೇಕ ಗಂಡಸರಿಗೆ ಕೌನ್ಸೆಲಿಂಗ್‌ನಲ್ಲಿ ನಂಬಿಕೆ ಇರುವುದಿಲ್ಲ. ಹೆಂಡತಿ ಗೆಳತಿಯರೊಂದಿಗೆ ಸಿನಿಮಾಗೆ ಹೋಗಬಾರದು ಅಷ್ಟೇ. ಜೊತೆಗೆ ಹೆಂಡತಿಯ ಮಾನಸಿಕ ತುಮುಲ ಅವರಿಗೆ ಅರ್ಥವಾಗದ ಸಮಾಚಾರ. ಮಗನನ್ನು ಕರೆಸಿದ್ದೆ. ಮಗ ಅವನ ಪ್ರಪಂಚದಲ್ಲಿ ಮುಳುಗಿದ್ದ. ತಾಯಿ ತನ್ನ ಅಪ್ಪನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದೆಂದು ಅವನ ಅನಿಸಿಕೆ. ಮಗನಾಗಿ ಅವನು ಹೇಗೆ ತಾಯಿಯ ಭಾವನೆಗಳಿಗೆ ಸ್ಪಂದಿಸಬಹುದೆಂದು ಅವನಿಗೆ ತಿಳಿದಿರಲಿಲ್ಲ. ಅದೇ ತನ್ನ ಹೆಂಡತಿಯ ತಾಯಿಯೊಂದಿಗೆ ಅತ್ಯಂತ ತಾಳ್ಮೆಯಿಂದ ವ್ಯವಹರಿಸುತ್ತಿದ್ದ.

ನಾನು ತಿರಸ್ಕೃತಳಾದವಳು ಎಂಬ ಭಾವ ಮನಸ್ಸಿನಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಕೌಟುಂಬಿಕ ಸಂಬಂಧಗಳು ಅರ್ಥ ಕಳೆದುಕೊಂಡು ಸ್ವಂತ ಮನೆಯೇ ಹಿಂಸೆಯಾಗುತ್ತದೆ. ನೌಕರಿಗೆ ರಾಜೀನಾಮೆ ಕೊಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದರು. ಮುಂದಿನ ಜೀವನದ ಬಗ್ಗೆ ಕಮಲಮ್ಮನವರಿಗೆ ಚಿಂತೆಯಾಗುತ್ತಿತ್ತು. ಹೀಗಾಗಿ, ಉರಿಯೂತದ ಸಮಸ್ಯೆ ಜಾಸ್ತಿಯಾಗಿತ್ತು. ಕಮಲಮ್ಮ ಈಗ ಮನೆಯಲ್ಲಿಯೇ ಸೀರೆ ಅಂಗಡಿ ತೆರೆದಿದ್ದಾರೆ. ತಮ್ಮ ಗ್ರಾಹಕರೊಂದಿಗೆ ಒಡನಾಟದಿಂದಾಗಿ, ಅವರಲ್ಲಿ ಇತ್ತೀಚೆಗೆ ಸ್ವಲ್ಪ ಉಲ್ಲಾಸ ಎನಿಸುತ್ತಿದೆ.

ವಿ.ಸೂ.: ತೀವ್ರ ಚಿಂತೆಯನ್ನು ದೂರ ಮಾಡಿಕೊಂಡರೆ, ಸಂಧಿವಾತದ ಸಮಸ್ಯೆ ನಿವಾರಣೆಯಾಗುತ್ತದೆ.

Advertisement

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next