ಬೆಂಗಳೂರು: ದೇಶ ಭಕ್ತಿ ಎಂದರೆ ಅಗಸ್ಟ್ 15ರಂದು ಬೆಳಗ್ಗೆ ರಾಷ್ಟ್ರಗೀತೆ ಹೇಳುವುದು, ಭಾರತ – ಪಾಕ್ ಕ್ರಿಕೆಟ್ ಪಂದ್ಯಾವಳಿ ವೇಳೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದಾಗ ಭಾರತ ಧ್ವಜ ಎತ್ತಿ ಹಿಡಿಯುವುದು, ಭಾರತ ಗೆದ್ದಾಗ ‘ಭಾರತ್ ಮಾತಾಕೀ ಜೈ ಅನ್ನುವುದಷ್ಟೇ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಸಮರ್ಥ ಭಾರತ ಸಂಸ್ಥೆ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಆರ್.ವಿ. ಟೀಚರ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬಿ ಗುಡ್ ಡೂ ಗುಡ್’ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲವರು ದೇಶಕ್ತಿ ಎಂದರೆ ರಾಷ್ಟ್ರಗೀತೆ ಹಾಡುವುದಷ್ಟೇ ಎಂದುಕೊಂಡಿದ್ದಾರೆ. ಆದರೆ ಅದಲ್ಲ. ದೈನಂದಿನ ಜೀವನದಲ್ಲಿ ಸಾಮಾಜದ ಒಳಿತಿಗಾಗಿ ಕೆಲಸ ಮಾಡುವುದು ದೇಶ ಭಕ್ತಿ. ನಮ್ಮ ದೇಶದಲ್ಲಿ ಕೆಲವು ವ್ಯಕ್ತಿಗಳಿದ್ದಾರೆ. ಅವರ ಹೆಸರು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಅಂತಹವರ ಸಾಲಿನಲ್ಲಿ ವಿವೇಕಾನಂದರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಸ್ವಾಮಿ ವಿವೇಕಾನಂದರ ಜೀವನ, ವಿಚಾರ, ವ್ಯಕ್ತಿತ್ವ ಪ್ರತಿನಿತ್ಯ ಶಕ್ತಿ ಕೊಡುವ ಸಂಗತಿಗಳಾಗಿವೆ. ಅವುಗಳನ್ನು ಮೈಗೊಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಸ್ವಾಮಿ ವಿವೇಕಾನಂದರು ಕಾರಣರಾಗಿದ್ದಾರೆ. ಮೈಸೂರಿನ ಮಹಾರಾಜರು ವಿವೇಕಾನಂದರಿಗೆ ಬೆಂಬಲವಾಗಿ ನಿಂತಿದ್ದರು ಎಂದು ಹೇಳಿದರು. ಸಮರ್ಥ ಭಾರತ ಸಂಸ್ಥೆ ಜಲ ಸಂರಕ್ಷಣೆ, ಪರಿಸರ ಉಳಿವಿಗೆ ಪಣ ತೊಟ್ಟಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಸಂಸದ ತೇಜಸ್ವಿ ಸೂರ್ಯ, ವಿವೇಕಾನಂದರ ಹೆಸರಿನಲ್ಲಿಯೇ ವಿವೇಕ ಮತ್ತು ಆನಂದ ಇದೆ. ವಿವೇಕದಡಿ ನೀವು ಬದುಕಿದರೆ ನಿಮಗೂ, ಆನಂದ ಸಿಗುತ್ತದೆ ಎಂಬುವುದನ್ನು ಜನತೆಗೆ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ಯಾವ ವ್ಯಕ್ತಿಯಲ್ಲಿ ಚಿಂತನೆ, ಕೃತಿ ಹಾಗೂ ಉತ್ತಮ ಮಾತುಗಳ ಸಮ್ಮಿಶ್ರಣವಾಗಿರುತ್ತೋ ಅಂತಹ ವ್ಯಕ್ತಿ ಮಹಾತ್ಮ ಎಂದು ಕರೆಸಿಕೊಳ್ಳುತ್ತಾನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾಗೋಣ ಎಂದು ತಿಳಿಸಿದರು.
ಆರ್.ವಿ. ಟೀಚರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೃಷ್ಣಯ್ಯ, ಸಮರ್ಥ ಭಾರತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೇವಾನಂದ್, ರಾಜೇಶ್ ಪದ್ಮರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.