ಮಸ್ಕಿ: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ. ಹೀಗಾಗಿ ಸರಕಾರಿ, ಖಾಸಗಿ ಯಾವುದೇ ರಂಗವಿರಲಿ ಪ್ರತಿಯೊಬ್ಬರು ಕನ್ನಡದಲ್ಲೇ ವ್ಯವಹಾರ ನಡೆಸಬೇಕು ಎಂದು ಶಾಸಕ ಆರ್. ಬಸನಗೌಡ ತುರುವಿಹಾಳ ಹೇಳಿದರು.
ರಾಜ್ಯೋತ್ಸವ ನಿಮಿತ್ತ ಗುರುವಾರ ಪಟ್ಟಣದ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಭಾಷೆ, ನೆಲ ಜಲ ಸಮಸ್ಯೆ ಬಂದಾಗ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಸರ್ಕಾರಿ ಕಚೇರಿಗಳಲ್ಲಿನ ವ್ಯವಹಾರವನ್ನು ಕನ್ನಡದಲ್ಲಿಯೇ ಮಾಡುವಂತೆ ಕಟ್ಟು ನಿಟ್ಟಾಗಿ ಆದೇಶ ಜಾರಿ ಮಾಡಿದರೆ ಕನ್ನಡ ಬಳಕೆ ಪರಿಣಾಮಕಾರಿಯಾಗುತ್ತದೆ. ರಾಜ್ಯೋತ್ಸವ ಆಚರಣೆ ನಿಮಿತ್ತ ಸರ್ಕಾರ ಗೀತ ಗಾಯನ ಹಮ್ಮಿಕೊಳ್ಳುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದೆ ಎಂದರು.
ತಹಶೀಲ್ದಾರ್ ಕವಿತಾ ಆರ್. ಪ್ರತಿಜ್ಞಾ ವಿಧಿ ಬೋಧಿಸಿದರು. ತಾಪಂ ಇಒ ಬಾಬು ರಾಠೊಡ, ಸಿಪಿಐ ಸಂಜೀವ್ ಬಳಿಗಾರ, ಪಿಎಸ್‌ಐ ಸಿದ್ದರಾಮ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಚಪ್ಪ, ಪ್ರತಾಪಗೌಡ ಪಾಟೀಲ್ ಪ್ರಸನ್ನ ಪಾಟೀಲ್, ಮುಖಂಡರಾದ ಅಶೋಕ ಮುರಾರಿ, ದುರ್ಗರಾಜ್ ವಟಗಲ್, ಬಸವರಾಜ ಉದ್ಬಾಳ, ಆರ್.ಕೆ. ನಾಯಕ, ಕೆ. ಮಲ್ಲಯ್ಯ, ರಾಘವೇಂದ್ರ ಗುತ್ತೆದಾರ, ಭರತ್ ಶೇಠ, ಘನಮಠದಯ್ಯ ಸಾಲಿಮಠ, ಶಂಕರಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.