ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಿಗಳನ್ನು ಪೊಲೀಸರು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದಾರೆ.
ಕೋರ್ಟ್ ಅನುಮತಿ ಪಡೆದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್, ಆತನ ಪ್ರೇಯಸಿ ಪವಿತ್ರಾಗೌಡ ಸೇರಿ 14 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ನಟ ದರ್ಶನ್, ಪವಿತ್ರಾಗೌಡ, ಪವನ್, ರಾಘವೇಂದ್ರ ವಿನಯ್, ಧನರಾಜ್, ಲಕ್ಷ್ಮಣ್, ಪ್ರದೂಶ್ ಸೇರಿ 14 ಮಂದಿ ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ.
ಈಗಾಗಲೇ ಮೃತ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈಸೇರಿದ್ದು, ಡಿಎನ್‌ಎ ಪರೀಕ್ಷೆ ಕೂಡ ಮಾಡಿಸಲಾಗಿದೆ. ಈ ವೇಳೆ ಮೃತನ ದೇಹದ ಮೇಲೆ ಕೆಲ ಪರಚಿದ ಗಾಯ ಹಾಗೂ ಬೆರಳಚ್ಚು ಮುದ್ರೆಗಳು ಹಾಗೂ ಬೇರೆ ರಕ್ತದ ಮಾದರಿ ಪತ್ತೆಯಾಗಿದೆ.
ಆದ್ದರಿಂದ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯ ಸಂಗ್ರಹಿಸುವ ದೃಷ್ಟಿಯಿಂದ ಆರೋಪಿಗಳಿಗೆ ಡಿಎನ್‌ಎ ಪರೀಕ್ಷೆ ಮಾಡಿಸಲಾಗಿದೆ. ಜತೆಗೆ ಆರೋಪಿಗಳು ಕೃತ್ಯದ ದಿನ ಬಳಸಿದ್ದ ಬಟ್ಟೆ, ಶೂಗಳು ಹಾಗೂ ಹಲ್ಲೆಗೆ ಬಳಸಿದ್ದ ವಸ್ತುಗಳ ಮೇಲೂ ಮೃತನಿಗೆ ಸಂಬಂಧಿಸಿದ ಕೆಲ ಕುರುಹುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೃತನ ರಕ್ತದ ಮಾದರಿ ಹಾಗೂ ಆತನ ದೇಹದ ಮೇಲೆ ಪತ್ತೆಯಾಗಿರುವ ಬೇರೆ ರಕ್ತದ ಮಾದರಿಗೂ ಆರೋಪಿಗಳಿಂದ ಸಂಗ್ರಹಿಸಿರುವ ಬಟ್ಟೆ, ಶೂ ಹಾಗೂ ಇತರೆ ವಸ್ತುಗಳ ಮೇಲಿರುವ ರಕ್ತದ ಮಾದರಿಯೂ ಹೊಂದಾಣಿಕೆ ಆಗುವ ಸಾಧ್ಯತೆಯಿದೆ.
ಜತೆಗೆ ರೇಣುಕಸ್ವಾಮಿ ಹತ್ಯೆ ಮಾಡಿದ ಪಟ್ಟಣಗೆರೆ ಶೆಡ್‌ನಲ್ಲಿದ್ದ ರಕ್ತದ ಮಾದರಿ ಹಾಗೂ ಕೂದಲು ಸ್ಥಳದಲ್ಲೇ ದೊರೆತಿದ್ದು, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿದ್ದ ರಕ್ತದ ಮಾದರಿ ಹಾಗೂ ಕೂದಲು ಯಾರದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿಯಬೇಕಿದೆ. ಹೀಗಾಗಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಕ್ತ, ಕೂದಲು ಮಾದರಿ ಹೋಲಿಕೆ:
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಪಿಗಳ ರಕ್ತ ಹಾಗೂ ಕೂದಲಿನ ಮಾದರಿಯನ್ನು ವೈದ್ಯರು ಸಂಗ್ರಹಿಸಲಿದ್ದಾರೆ. ತದನಂತರ ಕೊಲೆ ನಡೆದ ಸ್ಥಳದಲ್ಲಿ ಸಿಕ್ಕಿದ್ದ ರಕ್ತ ಹಾಗೂ ಕೂದಲಿಗೂ ಹೋಲಿಕೆ ಮಾಡಲಿದ್ದಾರೆ.