ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಹಾಗೂ ಇತರ ಪದಾಧಿಕಾರಿಗಳು ಸೋಮವಾರ ಪದಚ್ಯುತಿಗೊಂಡಿದ್ದು, ಆ.7ರಂದು ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
ನಾಲ್ಕೂವರೆ ವರ್ಷದ ಹಿಂದೆ ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮೊದಲ ಮೂರು ವರ್ಷ ಡಾ.ಅಪ್ಪಾಜಿಗೌಡ ಅಧ್ಯಕ್ಷರಾಗಿದ್ದರು. ಬಳಿಕ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡ ಕಾರಣ 2017ರ ಜನವರಿಯಲ್ಲಿ ಡಿ.ಎನ್.ಬೆಟ್ಟೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸದ್ಯ ಜಂಟಿ ಕಾರ್ಯದರ್ಶಿಯಾಗಿದ್ದ ನಾರಾಯಣಮೂರ್ತಿ ಅವರನ್ನು ಹಂಗಾಮಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಒಕ್ಕಲಿಗರ ಸಂಘದ ಅಧೀನ ಸಂಸ್ಥೆಗಳಲ್ಲಿ ಅನಗತ್ಯವಾಗಿ ಸಾವಿರಾರು ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಅಭ್ಯರ್ಥಿಗಳಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅನಗತ್ಯ ಸಿಬ್ಬಂದಿ ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ಒಕ್ಕಲಿಗರ ಸಂಘದ ಅಧೀನದಲ್ಲಿರುವ 18 ಸಂಸ್ಥೆಗಳ ನೌಕರರು ಎರಡು ಸುತ್ತಿನ ಪ್ರತಿಭಟನೆ ನಡೆಸಿದ್ದರು. ಇದರಿಂದ ಕಿಮ್ಸ್ ಸೇರಿ ಇತರೆ ಆಸ್ಪತ್ರೆಗಳಲ್ಲಿ ಹೊರ ರೋಗಿ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಸಂಘದ ಸಂಸ್ಥೆಗಳ ಕಾಯಂ ನೌಕರರಿಗೆ ಸಕಾಲದಲ್ಲಿ ವೇತನ ನೀಡದ ಸ್ಥಿತಿ ಇರುವಾಗ ಅನಗತ್ಯ ಸಿಬ್ಬಂದಿ ನೇಮಕದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಬಗ್ಗೆ ಸಂಘದ ನಿರ್ದೇಶಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲ ನಿರ್ದೇಶಕರು ನೌಕರರ ಸಂಘಕ್ಕೆ ಕುಮ್ಮಕ್ಕು ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದಾಗಿ ಪದಚ್ಯುತ ಅಧ್ಯಕ್ಷ ಬೆಟ್ಟೇಗೌಡ ಕೂಡ ಈ ಹಿಂದೆ ಆರೋಪಿಸಿದ್ದರು.
ಈ ನಡುವೆ ಸಂಘದ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಖಜಾಂಚಿ ಕಾಳೇಗೌಡ ವಿರುದ್ಧ ಸಂಘದ 35 ನಿರ್ದೇಶಕರ ಪೈಕಿ 19 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿ ನೋಟಿಸ್ ನೀಡಿದ್ದರು. ಅವಿಶ್ವಾಸ ನಿರ್ಣಯ ಮಂಡಿಸಿದ ಏಳು ದಿನದೊಳಗೆ ಅಧ್ಯಕ್ಷರು ವಿಶ್ವಾಸ ಮತ ಸಾಬೀತುಪಡಿಸಬೇಕು. ಆದರೆ 12 ದಿನ ಕಳೆದರೂ ಬೆಟ್ಟೇಗೌಡರು ಸಭೆ ಕರೆಯದ ಕಾರಣ ಉಪಾಧ್ಯಕ್ಷರಾಗಿದ್ದ ಶಿವಲಿಂಗಯ್ಯ ಎಲ್ಲ 35 ನಿರ್ದೇಶಕರಿಗೆ ನೋಟಿಸ್ ನೀಡಿ ಸೋಮವಾರ ಸಭೆ ಕರೆದಿದ್ದರು.
ಸೋಮವಾರ ನಡೆದ ಸಭೆಯಲ್ಲಿ 22 ನಿರ್ದೇಶಕರು ಪಾಲ್ಗೊಂಡಿದ್ದರು. ಬೆಟ್ಟೇಗೌಡ ಸೇರಿ ಹಲವರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಅವಿಶ್ವಾಸ ನಿರ್ಣಯದ ಪರ 21 ಮತ ಚಲಾವಣೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಖಜಾಂಚಿ ಕಾಳೇಗೌಡ ಪದಚ್ಯುತಿಗೊಂಡರು.