Advertisement

ಚೆನ್ನೈಯಲ್ಲಿ ಅಘೋಷಿತ ಬಂದ್‌ ;ಕರುಣಾ ಅಂತ್ಯ ಸಂಸ್ಕಾರ ಸ್ಥಳ ವಿವಾದ

04:40 AM Aug 08, 2018 | Karthik A |

ಚೆನ್ನೈ: ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ, ದ್ರಾವಿಡ ಪಕ್ಷದ ಸೂರ್ಯ ಮುತ್ತುವೇಲ್‌ ಕರುಣಾನಿಧಿ ಅಸ್ತಂಗತರಾಗಿದ್ದಾರೆ. 94 ವರ್ಷದ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಮೂತ್ರಕೋಶ ಸೋಂಕಿನಿಂದಾಗಿ ಕೆಲವು ದಿನಗಳ ಹಿಂದೆ ಜ್ವರಕ್ಕೆ ತುತ್ತಾಗಿದ್ದರು. ಬಹು ಅಂಗಾಂಗ ವೈಫ‌ಲ್ಯದಿಂದಾಗಿ ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಸಂಜೆ 6.10ಕ್ಕೆ ಚೆನ್ನೈಯ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Advertisement

ಕರುಣಾ ಅವರ ಆರೋಗ್ಯ ಸ್ಥಿತಿ ವಿಷಮಗೊಂಡ ಸುದ್ದಿ ತಿಳಿದು ಸೋಮವಾರ ರಾತ್ರಿಯಿಂದಲೇ ಕಲೈನಾರ್‌ ಅವರ ಅಭಿಮಾನಿಗಳ ಸಾಗರವೇ ಆಸ್ಪತ್ರೆಯ ಸುತ್ತ ನೆರೆದಿತ್ತು. ಮಂಗಳವಾರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಅವರ ನೋವಿನ ಕಟ್ಟೆಯೊಡೆಯಿತು. ಆಕ್ರಂದನ ಮುಗಿಲುಮುಟ್ಟಿತ್ತು. ಶಾಂತಿ ಕಾಪಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್‌ ಮನವಿ ಮಾಡಿದರು. ಪೊಲೀಸರು ತಮಿಳುನಾಡಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿದರು. 

ಡಿಎಂಕೆ ವರಿಷ್ಠ ನಾಯಕನ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ, ಅಮೆರಿಕ ರಾಯಭಾರಿ ಹಾಗೂ ವಿವಿಧ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಲಿದ್ದು ಅಂತಿಮ ದರ್ಶನ ಪಡೆಯಲಿದ್ದಾರೆ.

ಗಣ್ಯರ ಸಂತಾಪ
ಕರುಣಾನಿಧಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಚಿತ್ರನಟ ರಜನಿಕಾಂತ್‌  ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಬಂದ್‌ ವಾತಾವರಣ
ಚೆನ್ನೈಯಲ್ಲಿ ಅಘೋಷಿತ ಬಂದ್‌ ವಾತಾವರಣ ನೆಲೆಸಿದೆ. ಸ್ವಯಂಪ್ರೇರಿತರಾಗಿ ಜನರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತಮ್ಮ ಮೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದರು. ಅಂತ್ಯಸಂಸ್ಕಾರವಾಗುವ ತನಕ ತಮಿಳುನಾಡಿನಾದ್ಯಂತ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ತಮಿಳುನಾಡು ಸರಕಾರ ಬುಧವಾರ ರಜೆ ಹಾಗೂ ಒಂದು ವಾರ ಶೋಕಾಚರಣೆ ಘೋಷಿಸಿದೆ. ಮಂಗಳವಾರ ರಾತ್ರಿಯೇ ಪಾರ್ಥಿವ ಶರೀರವನ್ನು ಗೋಪಾಲಪುರಂಗೆ ತೆಗೆದುಕೊಂಡು ಹೋಗಲಾಗಿದೆ. ಬುಧವಾರ ಬೆಳಗ್ಗೆ ರಾಜಾಜಿಹಾಲ್‌ ನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುತ್ತದೆ. 

Advertisement

ಅಂತ್ಯ ಸಂಸ್ಕಾರ ಸ್ಥಳ ವಿವಾದ
ಕರುಣಾನಿಧಿ ಅವರ ಅಂತ್ಯಸಂಸ್ಕಾರದ ಸ್ಥಳ ನಿಗದಿಗೊಳಿಸುವ ಸಂಬಂಧ ರಾಜಕೀಯ ಸ್ಫೋಟಗೊಂಡಿದೆ. ಸ್ಟಾಲಿನ್‌ ನೇತೃತ್ವದಲ್ಲಿ ಕರುಣಾ ಕುಟುಂಬ ಸದಸ್ಯರು ಮರೀನಾ ಬೀಚ್‌ ನಲ್ಲಿ ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಸಮಾಧಿಯ ಸನಿಹ ಸ್ಥಳ ನೀಡುವಂತೆ ವಿನಂತಿಸಿದ್ದರು. ಆದರೆ ತಮಿಳುನಾಡು ಸರಕಾರ ಕೋರ್ಟ್‌ ವ್ಯಾಜ್ಯದ ಕಾರಣವೊಡ್ಡಿ ಮರೀನಾ ಬೀಚ್‌ನಲ್ಲಿ ಸ್ಥಳ ನೀಡಲು ಸಾಧ್ಯವಿಲ್ಲ ಎಂದಿದೆ. ಆದರೆ ಇದನ್ನು ವಿರೋಧಿಸಿರುವ ಡಿಎಂಕೆ ನಾಯಕರು ಮಂಗಳವಾರ ರಾತ್ರಿಯೇ ಮದ್ರಾಸ್‌ ಹೈಕೋರ್ಟ್‌ ಕದ ಬಡಿದಿದ್ದಾರೆ. ಬುಧವಾರ ಸಂಜೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next